

ಬೆಂಗಳೂರು: ಮುಂಗಾರು ಆರಂಭವಾಗಲು ಇನ್ನೆರಡು ವಾರಗಳು ಬಾಕಿ ಇದ್ದು, ಈಗಾಗಲೇ ಕರೊನಾ ಭೀತಿಯಲ್ಲಿ ನಲುಗುತ್ತಿರುವ ಜನರಿಗೆ ಡೆಂಘ ಜ್ವರದ ಆತಂಕ ಎದುರಾಗಿದೆ. ರಾಜ್ಯದಲ್ಲಿ ಈಗಾಗಲೇ 1,823 ಡೆಂಘ ಪ್ರಕರಣಗಳು ವರದಿಯಾಗಿದ್ದು. ಮುಂಗಾರು ಮಳೆ ಪ್ರಾರಂಭವಾದ ಬಳಿಕ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳಿವೆ. ಹೀಗಾಗಿ ಜನರು ಮನೆ ಸುತ್ತಮುತ್ತ ತ್ಯಾಜ್ಯ ಸಂಗ್ರಹ ವಾಗದಂತೆ ಎಚ್ಚರಿಕೆ ವಹಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕರೊನಾ ವೈರಸ್ನಿಂದಾಗಿ ಡೆಂಘ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿಲ್ಲ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಹಿಂದಿನ ವರ್ಷ ಮೇನಲ್ಲಿ 861 ಇದ್ದಿದ್ದು, ವರ್ಷಾಂತ್ಯದಲ್ಲಿ 18,183ಕ್ಕೆ ಏರಿದ್ದು, ಒಟ್ಟು 17 ಮಂದಿಯನ್ನು ಬಲಿ ಪಡೆದಿತ್ತು. ಆದರೆ ಈ ವರ್ಷ ಮುಂಗಾರಿಗೂ ಮುನ್ನವೇ 1,823 ಪ್ರಕರಣಗಳು ವರದಿ ಆಗಿರುವುದು ಅತಂಕಕ್ಕೆ ಕಾರಣವಾಗಿದೆ. ಕರೊನಾದಂತೆ ಡೆಂಘಗೂ ನಿರ್ದಿಷ್ಟ ಲಸಿಕೆ ಇಲ್ಲ. ಹೀಗಾಗಿ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುವುದು. ಆದ್ದರಿಂದ ರೋಗ ಬರದಂತೆ ಎಚ್ಚರ ವಹಿಸುವುದೊಂದೇ ದಾರಿ.