ಲಾಕ್​ಡೌನ್ ಮುಗಿದು 3 ವಾರ ಬಳಿಕ ಸ್ನಾತಕೋತ್ತರ ಪರೀಕ್ಷೆ; ಉನ್ನತ ಶಿಕ್ಷಣ ಪರಿಷತ್ತಿಗೆ ವಿವಿ ತಜ್ಞರ ಸಮಿತಿ ವರದಿ

page 6 5
Published on

ಮಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಯುಜಿ ಕೋರ್ಸ್​ನ ಅಂತಿಮ (6ನೇ) ಸೆಮಿಸ್ಟರ್ ಪರೀಕ್ಷೆಯನ್ನು ರಾಜ್ಯದಲ್ಲಿ ಲಾಕ್​ಡೌನ್ ತೆರವಾದ ಮೂರು ವಾರಗಳ ಬಳಿಕವೇ ನಡೆಸುವ ಕುರಿತು ತಜ್ಞರ ಸಮಿತಿ ಸೋಮವಾರ ಆನ್​ಲೈನ್​ನಲ್ಲಿ ಚರ್ಚೆ ನಡೆಸಿದೆ. ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಒಳಗೊಂಡಿರುವ ತಜ್ಞರ ಸಮಿತಿ ಮುಂದಿನ 3 ದಿನಗಳಲ್ಲಿ ಉನ್ನತ ಶಿಕ್ಷಣ ಸಚಿವರು ಅಧ್ಯಕ್ಷರಾಗಿರುವ ಉನ್ನತ ಶಿಕ್ಷಣ ಪರಿಷತ್ತಿಗೆ ಈ ಬಗ್ಗೆ ವರದಿ ಸಲ್ಲಿಸಲು ಉದ್ದೇಶಿಸಿದೆ. ಲಾಕ್​ಡೌನ್ ತೆರವಾದ ಬಳಿಕ ಎರಡು ವಾರ ತರಗತಿ ನಡೆಸುವುದು. ತರಗತಿ ಸಂದರ್ಭ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ವಿವಿಧ ಬ್ಯಾಚ್​ಗಳನ್ನು ನಡೆಸುವ ಅಭಿಪ್ರಾಯ ವ್ಯಕ್ತವಾಗಿದೆ. ಕೊನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ಮಾತ್ರ ನಡೆಸುವುದು ಮತ್ತು ಉಳಿದ ಸೆಮಿಸ್ಟರ್ ಪರೀಕ್ಷೆಗಳನ್ನು ಸ್ವಂತವಾಗಿ ನಡೆಸಲು ಕಾಲೇಜುಗಳಿಗೆ ಅವಕಾಶ ನೀಡುವ ಕೆಲವರ ಪ್ರಸ್ತಾವನೆಗೆ ಸಮಿತಿ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪರೀಕ್ಷೆಗಳನ್ನು ವಿವಿಗಳೇ ನಡೆಸಬೇಕು ಎನ್ನುವುದು ಸಮಿತಿ ಸದಸ್ಯರ ಬಹುಮತದ ತೀರ್ಮಾನ.

ಆರನೇ ಸೆಮಿಸ್ಟರ್ ಪರೀಕ್ಷೆ ಮೊದಲು ಮುಗಿಸುವುದು. ಮತ್ತೆ ಮುಂದಿನ ಮೂರು ವಾರಗಳಲ್ಲಿ ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸುವುದು ಆದ್ಯತೆಯಲ್ಲಿ ನಡೆಯಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೊಡೆತ ಬೀಳುತ್ತದೆ. ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟಂಬರ್​ನಲ್ಲಿ ಕೂಡ ನಡೆಸಬಹುದು ಎನ್ನುವ ಅಭಿಪ್ರಾಯವನ್ನು ಬಹುತೇಕ ಸದಸ್ಯರು ಪ್ರಕಟಿಸಿದ್ದಾರೆ.

ಕಾಲೇಜುಗಳೇ ಪರೀಕ್ಷೆ ನಡೆಸಲು ಅವಕಾಶ ನೀಡುವುದರಿಂದ ವಿಶ್ವವಿದ್ಯಾಲಯಗಳ ಪರೀಕ್ಷೆ ಗುಣಮಟ್ಟ ಕುಸಿಯಬಹುದು. ಅಲ್ಲದೆ, ಈ ರೀತಿ ದೊರೆಯುವ ಅಂಕಗಳನ್ನು ಗ್ರೇಡ್​ಗೆ ಪರಿಗಣಿಸುವುದು ಕೂಡ ಅಸಾಧ್ಯ ಎನ್ನುವ ಅಭಿಪ್ರಾಯ ಸಮಿತಿ ಸದಸ್ಯರಿಂದ ವ್ಯಕ್ತವಾಗಿದೆ ಎಂದು ಅಧಿಕೃತ ಮೂಲ ತಿಳಿಸಿದೆ.

ಪ್ರತ್ಯೇಕ ಪರೀಕ್ಷೆಗೆ ವ್ಯವಸ್ಥೆ: ಲಾಕ್​ಡೌನ್, ಸೀಲ್​ಡೌನ್, ಕ್ವಾರಂಟೈನ್, ಐಸೋ ಲೇಷನ್ ಸಹಿತ ಬದಲಾದ ಸಂಕಷ್ಟದ ಪರಿಸ್ಥಿತಿಯಿಂದ ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ತಪ್ಪಿಸಿಕೊಳ್ಳುವ ಪರಿಸ್ಥಿತಿ ನಿರ್ವಣವಾಗಬಾರದು. ಇಂತಹ ಕಾರಣಗಳಿಂದ ಯಾವುದೇ ವಿದ್ಯಾರ್ಥಿ ಪರೀಕ್ಷೆ ವಂಚಿತನಾದರೆ ಆತನ ಭವಿಷ್ಯಕ್ಕೆ ತೊಂದರೆಯಾಗದಂತೆ ತಕ್ಷಣ ಪ್ರತ್ಯೇಕ ಪರೀಕ್ಷೆಗೆ ವ್ಯವಸ್ಥೆಯಾಗಬೇಕು ಎನ್ನುವ ಸಲಹೆ ಕೇಳಿಬಂದಿದೆ. ದೇಶವನ್ನು ಪ್ರತಿನಿಧಿಸಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆಗೆ ಅವಕಾಶವಿದೆ ಎನ್ನುವ ನಿದರ್ಶನವನ್ನು ಮೇಲಿನ ಸಲಹೆಗೆ ಪೂರಕವಾಗಿ ಉಲ್ಲೇಖಿಸಲಾಗಿದೆ. ಎಲ್ಲ ವಿವಿಗಳಿಗೆ ಅನ್ವಯವಾಗುವ ರೀತಿ ಕಾಮನ್ ಕ್ಯಾಲೆಂಡರ್ ರೂಪಿಸುವಂತೆ ಉನ್ನತ ಶಿಕ್ಷಣ ಸಚಿವರು ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದಾರೆ. ತಜ್ಞರ ಸಮಿತಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಉನ್ನತ ಶಿಕ್ಷಣ ಪರಿಷತ್ತು ಸ್ಪಷ್ಟ ತೀರ್ವನಕ್ಕೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net