ಏರೋ ಇಂಡಿಯಾಕ್ಕೆ ಬೆಂಗಳೂರಿನದ್ದೇ ಆತಿಥ್ಯ: ಫೆಬ್ರವರಿಯಲ್ಲಿ ನಡೆಯಲಿದೆ ಏರ್​ಷೋ

Aero_India_2019
Published on

ನವದೆಹಲಿ: ಏರೋ ಇಂಡಿಯಾ ಷೋ 2021 ಅನ್ನು ಬೆಂಗಳೂರಿನಲ್ಲೇ ಆಯೋಜಿಸುವುದಕ್ಕೆ ರಕ್ಷಣಾ ಸಚಿವಾಲಯ ತೀರ್ಮಾನಿಸಿದೆ. ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಎಕ್ಸಿಬಿಷನ್ ಎಂದು ಪರಿಗಣಿಸಲ್ಪಟ್ಟಿರುವ ಈ ಷೋ ಫೆಬ್ರವರಿಯಲ್ಲಿ ನಡೆಯಲಿದೆ.

ಮೂಲಗಳ ಪ್ರಕಾರ, ಈ ಪ್ರದರ್ಶನದ ಮುಖ್ಯ ಕಾರ್ಯಕ್ರಮವು ಫೆಬ್ರವರಿ 3-5ರ ತನಕ ನಡೆಯಲಿದೆ. ಏರ್​ಷೋ ಕಾರ್ಯಕ್ರಮವು ಫೆಬ್ರವರಿ 6 ಮತ್ತು 7 ರಂದು ನಡೆಯಲಿದ್ದು, ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಈ ಷೋ ಸಂಬಂಧ ಆಂತರಿಕ ಸಭೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ನಡೆಸಿದ್ದರು. ಯಲಹಂಕಾ ವಾಯುನೆಲೆಯಲ್ಲಿ ಈ ಕಾರ್ಯಕ್ರಮವನ್ನು ಎಂದಿನಂತೆ ಆಯೋಜಿಸುವುದಕ್ಕೆ ಸಿದ್ಧತೆ ನಡೆಸುವ ವಿಚಾರ ಚರ್ಚೆಗೆ ಒಳಗಾಗಿದೆ. ಕರೊನಾ ವೈರಸ್ ಸೋಂಕಿಗೆ ಸಂಬಂಧಪಟ್ಟ ನಿಯಮ ಪಾಲನೆ ಮಾಡುತ್ತ ಈ ಕಾರ್ಯಕ್ರಮ ಆಯೋಜಿಸಲು ತೀರ್ಮಾನವಾಗಿದೆ.

ಏರ್​ ಷೋ 1996ರಲ್ಲಿ ಆರಂಭವಾಗಿದ್ದು, ಅಲ್ಲಿಂದ ಇಲ್ಲಿವರೆಗೆ ಏರ್​ಷೋ ಆತಿಥ್ಯವನ್ನು ಬೆಂಗಳೂರು ವಹಿಸುತ್ತ ಬಂದಿದೆ. ಆದ್ದರಿಂದ ಯಲಹಂಕ ವಾಯುನೆಲೆ ಏರ್​ಷೋ ಗೆ ಸಂಬಂಧಿಸಿದ ಸಾಂಪ್ರದಾಯಿಕ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಇಂಡಸ್ಟ್ರಿಯ ಹೂಡಿಕೆಗೆ ಭಾರತ ಸರಿಯಾದ ಸ್ಥಳ ಎಂಬುದನ್ನು ಸರ್ಕಾರ ಬಿಂಬಿಸಲಿದೆ. ಆ ಮೂಲಕ ಪ್ರಾದೇಶಿಕವಾಗಿ ರಕ್ಷಣಾ ಕೈಗಾರಿಕೆಗೆ ಉತ್ತೇಜನ ನೀಡುವ ಕೆಲಸಕ್ಕೆ ಮುಂದಾಗಿದೆ. ಮಾಹಿತಿಗೆ - ಏರೋ ಇಂಡಿಯಾ ಷೋ 2021 (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net