

ನವದೆಹಲಿ: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಯುದ್ಧ ಚತುರ ರಫೇಲ್ ರಣಬೇಟೆಗಾರ ಗುರುವಾರ ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತು.
ಹರಿಯಾಣ ಅಂಬಾಲಾ ವಾಯುನೆಲೆಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಫ್ರಾನ್ಸ್ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಹಾಗೂ ಸೇನೆಯ ಹಿರಿಯ ಅಧಿಕಾರಿಗಳು ಭಾಗಿಯಾದರು. ರಫೇಲ್ ಸೇರ್ಪಡೆಗೂ ಮುನ್ನ ಯುದ್ಧ ವಿಮಾನಗಳಿಗೆ ಸಾಂಪ್ರದಾಯಿಕ ಸರ್ವಧರ್ಮ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ರಫೇಲ್ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನವನ್ನು ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರು ಕಣ್ತುಂಬಿಕೊಂಡರು.
ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆ್ಯರೋಸ್ಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು. ಈ ಅದ್ಧೂರಿ ಕಾರ್ಯಕ್ರಮಕ್ಕೆ ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಸಾಕ್ಷಿಯಾದರು.
59 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಸಮರ ವಿಮಾನಗಳನ್ನು ಫ್ರಾನ್ಸ್ನಿಂದ ಭಾರತ ಖರೀದಿಸುತ್ತಿದೆ. ಈ ಪೈಕಿ ಈ ಐದು ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿವೆ. ಫ್ರಾನ್ಸ್ನ ಡಸ್ಸಾಲ್ಟ್ ಏವಿಯೇಷನ್ ರಫೇಲ್ ವಿಮಾನಗಳನ್ನು ನಿರ್ವಿುಸಿದೆ. 2021ರೊಳಗೆ 36 ವಿಮಾನಗಳೂ ಭಾರತಕ್ಕೆ ಹಸ್ತಾಂತರವಾಗಲಿದೆ. (ಏಜೆನ್ಸೀಸ್)