

ನವದೆಹಲಿ: ಫ್ರಾನ್ಸ್ನಿಂದ ಭಾರತಕ್ಕೆ ಆಗಮಿಸಿರುವ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲು ಅಂಬಾಲಾ ವಾಯುನೆಲೆಯಲ್ಲಿ ಸಿದ್ಧವಾಗಿವೆ.
ರಕ್ಷಣಾ ಸಚಿವ ರಾಜನಾಥ ಸಿಂಗ್, ಫ್ರಾನ್ಸ್ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹರಿಯಾಣದ ಅಂಬಾಲ ವಾಯುನೆಲೆಯತ್ತ ತೆರಳಿದ್ದಾರೆ. ಕಾರ್ಯಕ್ರಮದಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಸಹ ಹಾಜರಿರಲಿದ್ದಾರೆ. ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆ್ಯರೋಸ್ಗೆ ಔಪಚಾರಿಕವಾಗಿ ಭಾರತೀಯ ವಾಯುಪಡೆಗೆ ಸೇರಿಸಲಿದ್ದಾರೆ.
ಕಾರ್ಯಕ್ರಮದ ಬಳಿಕ ರಾಜನಾಥ ಸಿಂಗ್ ಹಾಗೂ ಪಾರ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದು, ರಕ್ಷಣಾ ಸಹಕಾರ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಹಿಂದು ಮಹಾಸಾಗರ ಮತ್ತು ಶಾಂತ ಸಾಗರದಲ್ಲಿ ಸಹಕಾರ, ಜಂಟಿ ಸಮರಾಭ್ಯಾಸ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
59 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಸಮರ ವಿಮಾನಗಳನ್ನು ಫ್ರಾನ್ಸ್ನಿಂದ ಭಾರತ ಖರೀದಿಸುತ್ತಿದೆ. ಈ ಪೈಕಿ ಈ ಐದು ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿವೆ. ಫ್ರಾನ್ಸ್ನ ಡಸ್ಸಾಲ್ಟ್ ಏವಿಯೇಷನ್ ರಫೇಲ್ ವಿಮಾನಗಳನ್ನು ನಿರ್ವಿುಸಿದೆ. 2021ರೊಳಗೆ 36 ವಿಮಾನಗಳೂ ಭಾರತಕ್ಕೆ ಹಸ್ತಾಂತರವಾಗಲಿದೆ. (ಏಜೆನ್ಸೀಸ್)