ದೇಗುಲ ಮಸೂದೆಗೆ ಸೋಲು| ಮೇಲ್ಮನೇಲಿ ಬಿದ್ದುಹೋದ ಧಾರ್ವಿುಕ ತಿದ್ದುಪಡಿ ವಿಧೇಯಕ

Untitled design (5)
Published on

ವಿಜಯವಾಣಿ ಸುದ್ದಿಜಾಲ, ಬೆಂಗಳೂರು

ವಾರ್ಷಿಕ 10 ಲಕ್ಷದಿಂದ 1 ಕೋಟಿ ರೂ.ವರೆಗೆ ಆದಾಯವಿರುವ ದೇಗುಲಗಳಿಗೆ ಶೇ.5 ಹಾಗೂ ಒಂದು ಕೋಟಿಗೂ ಮೇಲ್ಪಟ್ಟ ಆದಾಯವಿರುವ ದೇಗುಲಗಳಿಗೆ 10 ಶೇ. ‘ತೆರಿಗೆ’ ವಿಧಿಸುವ ಸರ್ಕಾರದ ಕರ್ನಾಟಕ ಹಿಂದೂ ಧಾರ್ವಿುಕ ಸಂಸ್ಥೆಗಳು ಮತ್ತು ಧರ್ವದಾಯ ದತ್ತಿಗಳ ತಿದ್ದುಪಡಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲಾಗಿದ್ದು, ಆಡಳಿತ ಪಕ್ಷ ತೀವ್ರ ಮುಜುಗರ ಅನುಭವಿಸಿತು. ವಿಧಾನ ಸಭೆಯಲ್ಲಿ ಸರಾಗವಾಗಿ ಅನುಮೋದನೆಗೊಂಡಿದ್ದ ಈ ವಿಧೇಯಕವನ್ನು ಮೇಲ್ಮನೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳು ಧ್ವನಿಮತದಿಂದ ಸೋಲಿಸಿ ಸರ್ಕಾರಕ್ಕೆ ಸವಾಲಾದವು. ಎರಡು ದಿನ ಕೆಳಗೆ ಸೌಹಾರ್ದ ಮೀಸಲು ವಿಧೇಯಕಕ್ಕೂ ಪರಿಷತ್ತಿನಲ್ಲಿ ಇದೇ ರೀತಿ ಸೋಲಾಗಿತ್ತು.

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ವಿಧಾನ ಪರಿಷತ್​ನಲ್ಲಿ ವಿಧೇಯಕ ಮಂಡನೆ ಮಾಡಿ, ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳ ಆದಾಯದಲ್ಲಿ ಶೇ.10ರಷ್ಟು ಹಣವನ್ನು ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಪ್ರತಿ ವರ್ಷ 60 ಕೋಟಿ ರೂ. ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. 40 ಸಾವಿರ ಅರ್ಚಕರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಬಿಲ್ ರೂಪಿಸಲಾಗಿದೆ ಎಂದು ಸದನಕ್ಕೆ ಮನವರಿಕೆ ಮಾಡಲು ಯತ್ನಿಸಿದರು.

ವಿಧೇಯಕದಲ್ಲೇನಿತ್ತು? ದೇವಸ್ಥಾನಗಳಿಂದ ಸಾಮಾನ್ಯ ಸಂಗ್ರಹಣಾ ನಿಧಿಯ ಮೊತ್ತ ಹೆಚ್ಚಿಸುವುದು, ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದು ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಶಾಸ್ತ್ರದಲ್ಲಿ ಕೌಶಲವುಳ್ಳ ವಿಶ್ವಕರ್ಮ ಸಮಾಜದ ವ್ಯಕ್ತಿ ಸೇರ್ಪಡೆಯ ಉದ್ದೇಶದಿಂದ ಸರ್ಕಾರ ಕರ್ನಾಟಕ ಹಿಂದು ಧಾರ್ವಿುಕ ಸಂಸ್ಥೆಗಳು ಮತ್ತು ಧರ್ವದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದು, ಬುಧವಾರ ವಿಧಾನಸಭೆಯಲ್ಲಿ ಅನುಮೋದನೆಗೊಂಡಿತ್ತು. ಆದರೆ, ದೇಗುಲಗಳ ವರಮಾನಕ್ಕೆ ತಕ್ಕಂತೆ ಶೇ. 5 ಮತ್ತು 10ರಷ್ಟು ಕೊಡುಗೆ ನಿಧಿ ಸಂಗ್ರಹಿಸುವ ತಿದ್ದುಪಡಿ ವಿವಾದಕ್ಕೆ ಕಾರಣವಾಗಿತ್ತು. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ, ದೇವಾಲಯಗಳ ಹಣಕ್ಕೂ ಕೈಹಾಕಿದೆ ಎಂದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.

34 ಸಾವಿರ ಸಿ ದರ್ಜೆಯ ದೇವಸ್ಥಾನಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ಅರ್ಚಕರಿದ್ದಾರೆ. 34,165 ದೇವಸ್ಥಾನಗಳ ಅರ್ಚಕರ ಮನೆ ಕಟ್ಟಲು ಅನುದಾನ ನೀಡುತ್ತೇವೆ. ಅರ್ಚಕರ ಮಕ್ಕಳ ಶಾಲಾ ಕಾಲೇಜು ಅಧ್ಯಯನಕ್ಕೆ ಸ್ಕಾಲರ್​ಶಿಪ್ ನೀಡಲು 5 ಕೋಟಿ ಹಣ ಮೀಸಲಿಡುತ್ತೇವೆ. ಅರ್ಚಕರು ಮೃತಪಟ್ಟರೆ -ಠಿ;2 ಲಕ್ಷ ನೀಡುತ್ತೇವೆ ಎಂದು ವಿವರಿಸಿದರು.

ಆದರೆ, ಇದಕ್ಕೆ ಒಪ್ಪದ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರವೇ ದೇವಸ್ಥಾನ ಅಭಿವೃದ್ಧಿಗಾಗಿ 100 ಕೋಟಿ ಕೊಡಲಿ. ಮುಜರಾಯಿ ದೇವಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡಿದ ಬಳಿಕ ಅವರೇ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ತಮ್ಮ ಪಟ್ಟಿಗೆ ಕಟ್ಟುಬಿದ್ದ ಹಿನ್ನೆಲೆಯಲ್ಲಿ ಪರಸ್ಪರ ಮಾತುಕತೆಯ ಮೂಲಕ ಒಟ್ಟಾಭಿಪ್ರಾಯಕ್ಕೆ ಬರುವಂತೆ ಸಲಹೆ ನೀಡಿ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಎಂ.ಕೆ. ಪ್ರಾಣೇಶ್ 15 ನಿಮಿಷ ಸದನ ಮುಂದೂಡಿದರು. ಮಾತುಕತೆಯಲ್ಲಿಯೂ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸದನ ಮತ್ತೆ ಸಮಾವೇಶಗೊಂಡಾಗ ವಿಧೇಯಕವನ್ನು ಧ್ವನಿಮತಕ್ಕೆ ಹಾಕಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧ್ವನಿಮತದಲ್ಲಿಯೇ ವಿಧೇಯಕವನ್ನು ಸೋಲಿಸಿದರು.

ವಿಧೇಯಕ ಸ್ವಾಗತಿಸಿದ ನಂಜುಂಡಿ ಬಿಜೆಪಿ ವಿಧೇಯಕ ವಿರೋಧಿಸಿದರೆ, ಅದೇ ಪಕ್ಷದ ಕೆ.ಪಿ. ನಂಜುಂಡಿ ಮಾತ್ರ ಮಸೂದೆಯನ್ನು ಸ್ವಾಗತಿಸಿ ಸದನದಲ್ಲಿಯೇ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net