ಸರ್ವಾಧಿಕಾರಿ ಧೋರಣೆಯಿಂದಲೇ ಬಿಜೆಪಿಗೆ ಸೋಲು; ಶಾಸಕ ರೇಣುಕಾಚಾರ್ಯ

renukacharya
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಡೆಗಣನೆ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ ಅಂತಹ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಣೆ. ಪಕ್ಷದ ಒಳಗಿರುವವರ ಸರ್ವಾಧಿಕಾರಿ ಧೋರಣೆಯಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಯಿತು ಎಂದು ಪಕ್ಷದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಬಿಜೆಪಿಯನ್ನು ನಿಯಂತ್ರಿಸುತ್ತಿರುವ ವ್ಯಕ್ತಿಯೇ ಹೊಸಬರಿಗೆ ಟಿಕೆಟ್ ಕೊಡಿಸಿದರು. ತಾವು ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಿನಿಂದಲೂ ಪಾಠ ಕಲಿಯದೇ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಕಿಡಿಕಾರಿದರು.

ಪ್ರಮುಖ ನಾಯಕರು ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಭೆ ನಡೆಸುವ ಔಚಿತ್ಯವೇನಿತ್ತು ?. ಪಕ್ಷ ಕಟ್ಟಿದವರೇ ಸಭೆಯಲ್ಲಿ ಇಲ್ಲದಂತೆ ನೋಡಿಕೊಳ್ಳುವುದು ದುರಹಂಕಾರವನ್ನು ಎತ್ತಿ ತೋರಿಸುತ್ತದೆ. ಇರುವ ವಿಷಯವನ್ನೇ ಹೇಳಿದರೆ ನೋಟಿಸ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂಬರುವ ಚುನಾವಣೆಯಲ್ಲಿ ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳಿರುವೆ, ವರಿಷ್ಠರ ವಿವೇಚನೆಗೆ ಬಿಟ್ಟದ್ದು. ಆದರೆ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿ ನನ್ನ ವಿರುದ್ಧವೂ ಅಪಪ್ರಚಾರ ಮಾಡಲಾಗುತ್ತದೆ. ಹೀಗೆ ಅಪಪ್ರಚಾರದ ಮೂಲಕ ಪಕ್ಷದಿಂದ ಹೊರದಬ್ಬುವ ಹುನ್ನಾರ ಹೂಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ನನ್ನನ್ನು ಸೇರಿಸಿಕೊಂಡು ಕಾಂಗ್ರೆಸ್ ಏನು ಸಾಧಿಸಲು ಸಾಧ್ಯ ? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net