

ಹನೂರು: ತಾಲೂಕಿನ ನೇಕಾರರ ದೊಡ್ಡಿಯಲ್ಲಿ ಮಂಗಳವಾರ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಜಿಂಕೆಯನ್ನು ಗ್ರಾಮಸ್ಥರೇ ರಕ್ಷಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು.
ಸಮೀಪದ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಿಂದ ಬೆಳಗ್ಗೆ ಜಿಂಕೆಯೊಂದು ಗ್ರಾಮದತ್ತ ಆಗಮಿಸಿತ್ತು. ಈ ವೇಳೆ ಬೀದಿ ನಾಯಿಗಳ ಹಿಂಡು ಜಿಂಕೆಯನ್ನು ಸುತ್ತುವರಿದು ದಾಳಿ ನಡೆಸುತ್ತಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳನ್ನು ಗದರಿಸಿ ಓಡಿಸಿದರು. ಆದರೆ ಜಿಂಕೆಯ ಕೊಂಬಿನ ಭಾಗದಲ್ಲಿ ಸ್ವಲ್ಪ ಪ್ರಮಣದಲ್ಲಿ ಗಾಯವಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ ಕೆಲಕಾಲ ಜಿಂಕೆಯನ್ನು ಉಪಚರಿಸಿದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಜಿಂಕೆಗೆ ಅಗತ್ಯ ಚಿಕಿತ್ಸೆ ನೀಡಿ ಕೊಂಡೊಯ್ದರು. ಚೇತರಿಸಿಕೊಂಡ ಬಳಿಕ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.