

ಆಗಷ್ಟೇ ಸೂರ್ಯ ಮುಳುಗಿದ್ದ. ಸಂಜೆಗತ್ತಲು ಆವರಿಸುತ್ತಿತ್ತು. ಶಾಸ್ತ್ರಿಗಳ ಮನೆಯ ಮುಂದಿನ ತುಳಸಿ ಕಟ್ಟೆಯಲ್ಲಿ ಹಚ್ಚಿಟ್ಟ ಮೈಸೂರು ಸ್ಯಾಂಡಲ್ ಅಗರಬತ್ತಿಯ ಘಮ ದೊಡ್ಡ ಅಂಗಳವನ್ನು ದಾಟಿ ರಸ್ತೆಯವರೆಗೂ ಬೀರಿತ್ತು. ಅಲ್ಲಿ ಸಾಗುವವರು ಒಂದು ಕ್ಷಣ ನಿಂತು ಹೋಗಬೇಕು. ಹಾಗೆ..! ಶಾಸ್ತ್ರಿಗಳು ಮುಂದಿನ ಜಗುಲಿಯ ಮೇಲೆ ಚಾಪೆಯ ಮೇಲೆ ಕುಳಿತು ಹರಿಶ್ಚಂದ್ರ ಕಾವ್ಯವನ್ನು ಗಟ್ಟಿಯಾಗಿ ಓದುತ್ತಿದ್ದರು. ಆ ಪ್ರಸಂಗದಲ್ಲಿ ಮಹರ್ಷಿ ವಿಶ್ವಾಮಿತ್ರರು ಸೃಷ್ಟಿಸಿದ ಮೂವರು ಮಾಯಾಕನ್ಯೆಯರು ರಾಜಾ ಹರಿಶ್ಚಂದ್ರನನ್ನು ಕಾಡುತ್ತಿದ್ದ ಕಾವ್ಯವನ್ನು ಮತ್ತು ಅದರ ವ್ಯಾಖ್ಯಾನವನ್ನು ಬಹಳ ರಸವತ್ತಾಗಿ ಹೇಳುತ್ತಿದ್ದರು.
ಪತ್ನಿ ಸುಭದ್ರಮ್ಮ ಪಕ್ಕದಲ್ಲೇ ಮಲ್ಲಿಗೆಯನ್ನು ಕಟ್ಟುತ್ತಾ ಆಲಿಸುತ್ತಿದ್ದರು. ಇದು ಅವರ ದಿನಚರಿ. ಪ್ರತಿದಿನ ಕಾವ್ಯವಾಚನ ಮಾಡುವಾಗ ಪತ್ನಿ ತಮ್ಮ ಜೊತೆ ಕೂತು ಕೇಳಿಸಿಕೊಳ್ಳಬೇಕು. ಅವರ ಜೊತೆ ಮಧ್ಯೆ ಮಧ್ಯೆ ಸಣ್ಣ ಕೀಟಳೆ ಮಾಡಿ, ಅವರ ಮುನಿಸನ್ನ ಸಂಭ್ರಮಿಸಬೇಕು, ಒಂದು ಥರ ಮುದ್ದಣ್ಣ ಮನೋರಮೆಯ ಸಲ್ಲಾಪದಂತೆ! ಇದು ಶಾಸ್ತ್ರಿಗಳು ಮೊದಲಿಂದಲೂ ಅಭ್ಯಾಸ ಮಾಡಿಕೊಂಡು ಬಂದ ಪದ್ದತಿ. ಹೀಗಾಗಿ ಸುಭದ್ರಮ್ಮನಿಗೂ ಭಾಗವತ, ಕುಮಾರವ್ಯಾಸ ಭಾರತ ಎಲ್ಲ ಮಹಾಕಾವ್ಯಗಳ ಪರಿಚಯವಿತ್ತು. ಆಕೆಯೂ ಹಾಗೆ..! ದಿನ ನಿತ್ಯದ ಹಾಡುಗಳ ಜೊತೆ ಜೊತೆಗೆ ಗಮಕವನ್ನೂ ಅವರದ್ದೇ ಧಾಟಿಯಲ್ಲಿ ಹಾಡುತ್ತಿದ್ದರು. ಒಟ್ಟಾರೆ ಸಂಗೀತ ಸಾಹಿತ್ಯ ಇವೆರಡೂ ಕೂಡ ಆ ಮನೆಯಲ್ಲಿ ದೈವೀಕ ಕಳೆಯನ್ನು ತುಂಬಿದ್ದವು.
ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ಬೆಟ್ಟದಿಂದ ಮೇದು ಬಂದ ಹಸುಗಳನ್ನು ಗೊಂತಿಗೆ ಕಟ್ಟಿ, ಅವುಗಳ ಮುಂದೆ ಹುಲ್ಲನ್ನು ಹಾಕಿ, ತಲೆಗೆ ಸುತ್ತಿದ್ದ ಟವಲ್ ಅನ್ನು ತೆಗೆದು, ಕೊಡವಿ ಭುಜದ ಮೇಲೆ ಹಾಕಿಕೊಂಡು ಮನೆಯ ಪಕ್ಕದಿಂದ ಮುಂಬಾಗಿಲಿನ ಜಗುಲಿಯ ಹತ್ತಿರ ಬಂದು ನಿಂತ ಆಳು ಮಾದ. "ಅಯ್ಯಾರೆ, ಕೆಂದಿ ನಾಳೆ ನಾಳಿದ್ರಲ್ಲಿ ಕರಾ ಆಕುತ್ತೆ, ಮೇಯಾಕೆ ಬಿಡಾದ್ ಬ್ಯಾಡ. ಗೊಂತಾಗೇ ಇರ್ಲಿ" ಅಂದ. "ನಾಳೆ.... ಯಾರಿರ್ತಾರೆ..? ನಾವು ಬೆಳಗ್ಗೆನೆ ಮನೆ ಬಿಡ್ತೀವಿ.., ಸಂಜೆಗೆಲ್ಲ ಇಲ್ಲಿರ್ತೀವಿ.., ಆದ್ರೆ... ನೀನೂ ಇರಲ್ಲ ಅಂತಿದ್ಯ... ಮತ್ತೆ.. ಕೆಂದಿ ಗತಿ..?" ವಾಚನವನ್ನು ನಿಲ್ಲಿಸಿ ಕೇಳಿದರು ಶಾಸ್ತ್ರಿಗಳು.
(ಬೆಂಗಳೂರಲ್ಲಿ ದೂರದ ಸಂಬಂಧಿಯ ಮಗನ ಮದುವೆ. ಎರಡು ದಿನ ಮುಂಚೆ ನಮ್ ಜೊತೆ ಇರ್ಬೇಕು ಎಂದು ಒತ್ತಾಯ ಮಾಡಿದ್ದ. ಆದರೆ ಶಾಸ್ತ್ರಿಗಳು ಎಂದೂ ಒಂದು ರಾತ್ರಿ ಹೊರಗಡೆ ಉಳಿದವರಲ್ಲ..! ಬೆಳಗ್ಗೆ ಮುಂಚೆ ಹೊರಟು ಅಲ್ಲಿ ಕಾರ್ಯಕ್ರಮ ಮುಗಿಸಿ, ಸಂಜೆಗೆ ವಾಪಸ್..!)
"ಅದ್ರ ಯೋಚ್ನೆ ಮಾಡ್ಬೇಡ್ರಿ..., ನಾನು ಕಾಳಂಗೆ ಏಳಿವ್ನಿ.., ಇಲ್ಲೇ ಇತ್ತಾನೆ. ನೀವು ಆಯಾಗಿ ಓಗ್ಬನ್ನಿ."
"ನೀನ್ಯಾವಾಗ ಬರ್ತೀಯಾ?"
"ಎಲ್ಡ್ ದಿನ ಆಯ್ತದೆ ಅಯ್ಯ.."
" ಸರಿ.., ದುಡ್ಡೇನಾರಾ ಬೇಕಿತ್ತಾ..,? "
"ಬ್ಯಾಡ ಬುಡಿ... ನೀವು ಬಂದ್ ಮ್ಯಾಕೆ ಕಾಳನ್ನ ವಸಿ ನೋಡ್ಕಳಿ.."
"ಅದು ಮಾಡಾಣ..., ಸರಿ ನೀನು ಹೊರಡು."
"ಆಗ್ಲಿ ಅಯ್ಯ.. ಬತ್ತೀನಿ.." ಎಂದು ಮತ್ತೆ ಹೆಗಲ ಮೇಲಿಂದ ಟವಲ್ ತೆಗೆದು ತಲೆಗೆ ಸುತ್ತುತ್ತಾ ನಡೆದ ಮಾದಪ್ಪ.
ಸೀತಾರಾಮ ಶಾಸ್ತ್ರಿಗಳು ಹಳ್ಳಿಯಲ್ಲೇ ದೊಡ್ಡ ಕುಳ. ಹತ್ತೆಕರೆ ನೀರಾವರಿ ಜಮೀನು, ಐದೆಕರೆ ಅಡಕೆ ತೋಟ, ಸ್ವಲ್ಪ ದೊಡ್ಡದಾದ ಪಡಸಾಲೆ ಮನೆ. ಕೆಲಸಕ್ಕೆ ಆಳು ಕಾಳು.., ಓಡಾಡಲು ಕಾರು ಇಟ್ಟುಕೊಂಡಿರುವ ಇವರು ಈಗ ತಮ್ಮ ಮನೆಯಲ್ಲಿ ಇಬ್ಬರೇ! ಮಗ ಪ್ರದ್ಯುಮ್ನ ಲಂಡನ್ ನಲ್ಲಿ ಸೆಟಲ್ ಆಗಿದ್ದಾನೆ. ಮಗಳು ಪೂರ್ವಿಕ ಡಿಫೆನ್ಸ್ನಲ್ಲಿ ಇದ್ದಾಳೆ. ಅವ್ರ ಫ್ಯಾಮಿಲಿ ಡೆಲ್ಲಿಯಲ್ಲಿ ಇದೆ. ಎರಡು ವರ್ಷಕ್ಕೊಮ್ಮೆ ಮಗ ತನ್ನ ಫ್ಯಾಮಿಲಿ ಜೊತೆ ಬಂದು, ಒಂದು ತಿಂಗಳ ಕಾಲ ಜೊತೆ ಇದ್ದು ಹೋಗ್ತಾನೆ. ಸಾಧ್ಯವಾದಾಗ ಇವರನ್ನೂ ಕರೆಸಿಕೊಳ್ಳುತ್ತಾನೆ. ಆದರೆ, ಶಾಸ್ತ್ರಿಗಳಿಗೆ ತಿಂಗಳಾನುಗಟ್ಟಳೆ ಮನೆ ಬಿಟ್ಟು ಹೋಗುವುದೇ ಕಷ್ಟ.
ಮಗಳು ಮಾತ್ರ ವರ್ಷಕ್ಕೊಮ್ಮೆ ಫ್ಯಾಮಿಲಿ ಜೊತೆ ಬಂದು ಸಂತೋಷವಾಗಿದ್ದು ಹೋಗ್ತಾಳೆ. ಇಬ್ಬರೂ ಪ್ರತಿದಿನ ವಿಡಿಯೋ ಕಾಲ್ ನಲ್ಲಿ ಇವರ ಆರೋಗ್ಯ ವಿಚಾರಿಸಿ ಮೊಮ್ಮಕ್ಕಳ ಜೊತೆ ಮಾತಾಡಿಸಿ ಖುಷಿ ಪಡಿಸ್ತಾರೆ. ಆದರೆ, ಸಮಯಕ್ಕೆ ಆಗೋನು ಮಾತ್ರ ಮಾದಪ್ಪ. ನಂಬಿಕಸ್ತ ಆಳು. ಅವನಿಗೆ ಬುದ್ದಿ ಬಂದಾಗಿನಿಂದ ಅವರ ಮನೆಯ ಜೀತ ಮಾಡಿಕೊಂಡೇ ಬೆಳೆದವನು. ಈಗ ಅವನಿಗೆ ಆಸುಪಾಸು ಅರವತ್ತರ ಸಮೀಪ. ಆದರೆ ಕಟ್ಟು ಮಸ್ತಾದ ಆಳು. ಅವನು ಆಳು ಎಂದ ಮಾತ್ರಕ್ಕೆ ಬಡವನೇನಲ್ಲ! ಅವನೂ ಸ್ವಲ್ಪ ಜಮೀನು ಇಟ್ಕೊಂಡಿದ್ದಾನೆ!
ಮಗ ಬೆಂಗಳೂರಿನ ಒಂದು ಕಂಪನಿಯಲ್ಲಿದ್ದಾನೆ! ಮನೆಗೆ ಬೇಕಾದ ಎಲ್ಲ ಆಧುನಿಕ ವಸ್ತುಗಳೂ ಅವನ ಮನೆಯನ್ನು ಅಲಂಕರಿಸಿವೆ. ಆದರೆ ಮಾದಪ್ಪ ಮಾತ್ರ ಶಾಸ್ತ್ರಿಗಳ ಮನೆ ಕೆಲಸ ಬಿಡಲಾರ. ಇಂದಿನ ಅವನ ಪರಿಸ್ಥಿತಿಗೆ ಶಾಸ್ತ್ರಿಗಳೇ ಕಾರಣ. ಆ ಕಾಲದಿಂದಲೂ ತನ್ನ ಮನೆಯ ಬಗ್ಗೆ ಮುತುವರ್ಜಿ ವಹಿಸಿ, ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಈ ದಿನ ನಾಲ್ಕು ಜನರಂತೆ ನಾವಿರೋದಕ್ಕೆ ಕಾರಣ ಶಾಸ್ತ್ರಿಗಳು ಎಂಬ ಗೌರವ. ನಂಬಿಕೆ. ಅದು ನಿಜವೂ ಹೌದು. ಆ ಒಂದು ಕೃತಜ್ಞತೆ ಇಂದಿಗೂ ಅವನನ್ನು ಶಾಸ್ತ್ರಿಗಳ ಮನೆಯಲ್ಲಿ ಆಳಾಗಿರುವಂತೆ ಮಾಡಿದೆ. ಅವನ ಜೊತೆ ಅವನ ಹೆಂಡತಿಯೂ ಈ ಮನೆ ಕೆಲಸಕ್ಕೆ ಕೈ ಜೋಡಿಸುವುದು ಅನಿವಾರ್ಯ ಆಗಿದೆ.
****
ಆಧುನಿಕತೆಯ ಜೊತೆ ತಮ್ಮನ್ನು ಹೊಂದಿಸಿಕೊಂಡಿದ್ದರೂ. ಹಳ್ಳಿಮನೆಯಲ್ಲಿ ಮಾತ್ರ ಶಾಸ್ತ್ರ ಸಂಪ್ರದಾಯಗಳಿಗೆ ಕೊಂಚವೂ ಲೋಪ ಬರದಂತೆ ಕಾಯ್ದಿದ್ದರು. ಹೊರಗಿನಿಂದ ಯಾರಾದರೂ ಅಭ್ಯಾಗತರು ಬಂದರೆ ಬಹಳ ಆತ್ಮೀಯವಾಗಿ ಉಪಚರಿಸುತ್ತಿದ್ದರು. ಆದರೆ ಅವರಿಗೆ ತಿಂಡಿ ಕಾಫಿ ನೀಡಿದ ತಟ್ಟೆ ಲೋಟಗಳೆಲ್ಲವಕ್ಕೂ ಪ್ರತ್ಯೇಕ ಸ್ಥಾನ. ಅವುಗಳಿಗೆ ಇವರ ಅಡುಗೆ ಮನೆಯಲ್ಲಿ ಜಾಗವಿಲ್ಲ. ಇಷ್ಟು ವರ್ಷ ಮನೆ ಮಗನಂತೆ ಇರುವ ಮಾದಪ್ಪ ಕೂಡ ಪಡಸಾಲೆಯ ಮಧ್ಯದವರೆಗೆ ಎಂದೂ ಹೋಗಿಲ್ಲ. ಮಾದನ ಹೆಂಡತಿ ಗೌರ ತೊಳೆದಿಟ್ಟ ಪಾತ್ರೆಯನ್ನು ಸುಭದ್ರಮ್ಮ ಹುಳಿ ನೀರು ಚುಮುಕಿಸದೇ ಒಳಗಿಡುತ್ತಿರಲಿಲ್ಲ. ಅವಳು ಕಿತ್ತು ತಂದ ಹೂಗಳನ್ನೂ ನೀರು ಚುಮುಕಿಸಿಯೇ ಒಳ ತೆಗೆದುಕೊಳ್ಳುತ್ತಿದ್ದರು.
ಇವರ ಮಡಿ ಮೈಲಿಗೆಯ ಬಗ್ಗೆ ಇಡೀ ಹಳ್ಳಿಗೇ ಗೊತ್ತು. ಯಾರೂ ಅವರಿಗೆ ಎದುರಾಡುತ್ತಿರಲಿಲ್ಲ. ಹೀಗಾಗಿ ಶಾಸ್ತ್ರಿಗಳ ಶಿಸ್ತು, ಅವರ ಗಂಭೀರ ನಡವಳಿಕೆಯಿಂದ ಹಳ್ಳಿಯ ಜನರಲ್ಲಿ ಇವರ ಮೇಲೆ ಅಪಾರ ಭಕ್ತಿ, ಗೌರವ. ಆದರೆ ಗೌರನಿಗೆ ಮಾತ್ರ ಅಸಮಾಧಾನ. "ಇವ್ರುಗುಳೇನು ಕ್ಯಾತಾರದಿಂದ ಇಳಿದ್ ಬಂದಾರೇನೂ? ಮಗ ಮಗ್ಳೂ ಬೇಕೂಂದಾಗ ಬತ್ತಾರಾ? ನಾವೇ ತಾನೆ ಅವ್ರ ಜತೆ ಇರಾದು? ಅವ್ರ ಮನೆ, ವಲ ಎಲ್ಲ ನಾವೇ ತಾನೆ ಮಾಡ್ಬೇಕು?! ನಿರ್ವಾಕಿಲ್ಲದ್ ಮಡಿ..!
ಒಂದಿನ ಓಗ್ದಿದ್ರೆ ಅಟ್ಟಿಗೂ ಬಾಕ್ಲೀಗೂ ಅನ್ನೆರಡ್ ಸಲ ಓಡಾಡಿರ್ತಾರೆ, ನೀನೊಬ್ಬ ಕೋಲೆ ಬಸ್ವ.., ಆಯಪ್ಪ ಏಳಿದ್ದುಕ್ಕೆಲ್ಲ ಊ.. ಅನ್ಕಂಡು ಮೂಗೆತ್ತು ದುಡ್ದಂಗೆ ದುಡೀತೀಯ.., ಏಟ್ ಏಳಿದ್ರೂ ಇಟೇಯಾ.." ಎಂದು ಆಗಾಗ್ಗೆ ಮೂಗು ಮುರೀತಾಳೆ. ಅವಳ ಅಸಮಾಧಾನಕ್ಕೆ ಕಾರಣವೂ ಇದೆ. ಅದು ಇವತ್ತಿನ ಸಮಾಚಾರವಲ್ಲ.., ಸುಮಾರು ಹದಿನೈದ್ ಇಪ್ಪತ್ತು ವರ್ಷಗಳೇ ಆಗಿದೆ ಆ ಘಟನೆ ನಡೆದು, ಆದ್ರೂ ಗೌರ ಮರೆಯೋದಿಲ್ಲ. ಆಗಾಗ್ಗೆ ನೆನಪು ಮಾಡ್ಕೊಂಡು ಗಂಡನ ಹತ್ತಿರ ಧುಮುಗುಟ್ಟುತ್ತಾಳೆ. ಆದ್ರೆ ಅವ್ರ ಮನೆ ಕಸ ಮುಸುರೆನ ಬಾಯ್ ಮುಚ್ಕೊಂಡು ಮಾಡ್ತಾಳೆ.
****
ಆ ದಿನ ಆದದ್ದೂ ಇದೆ! "ಗೌರಾ... ಇವತ್ತು ಅಯ್ಯಾರ್ ಮನಿಗೆ ಇತ್ಲುಕಡೆ ದೊಡ್ಡ ಕುಂಬ್ಳ ಐತಲ್ಲ, ತಗಂಡೋಗು" ಮಾದ ಹೆಂಡತಿಗೆ ಹೇಳಿದ. "ಏ ನೀನೇ ಓತ್ತಿಯಲ್ಲ... ತಕ್ಕಂಡೋಗೂ..? ನಂಗ್ ಬ್ಯಾರೆ ಕೆಲ್ಸ ಐತೆ.." "ಆಕುಲ್ಲ... ತ್ವಾಟ್ ತಾವ ಕಳೆ ಕೀಳ್ತಾವ್ರೆ ನಾ ಓಯ್ತೀನಿ.. ನಾಳಿಕೆ ಇರೇರ ಪೂಜೆ ಅಂತೆ..., ಓಗ್ ಕೊಟ್ಬಾ..." ಎಂದು ಹೇಳಿ ಕುಡುಗೋಲು ಕೈಯಲ್ಲಿ ಹಿಡಿದು ಹೊರ ನಡೆದಿದ್ದ. "ಅವ್ವಾ ನಾ ಬತ್ತೀನಿ ನಡ್ಯವ್ವಾ.. ಬಾಳ ಬೆಳದೈತೆ.., ನಿಂಗೆ ಒರಾಕಾಕುಲ್ಲ.." ಎಂದು ಏಳು ವರ್ಷದ ಮಗ ಶಂಕರ ಹಿತ್ತಲಿಂದ ದೊಡ್ಡ ಕುಂಬಳಕಾಯಿ ಹೊತ್ತು ತಂದಿದ್ದ.
ಅವನಿಗೆ ಶಾಸ್ತ್ರಿಗಳ ಮನೆಗೆ ಹೋಗೋದೇ ಸಂಭ್ರಮ. ಪ್ರದ್ಯುಮ್ನ, ಪೂರ್ವಿಕಾ ಇವನಿಗಿಂತ ದೊಡ್ಡವರು. ಪ್ರೀತಿಯಿಂದ ಮಾತಾಡಿಸ್ತಾರೆ, ತಿನ್ನೋಕೆ ಸುಭದ್ರಮ್ಮ ಮಾಡಿದ ಕುರುಕುಲು.., ಹಣ್ಣು.., ಎಲ್ಲ ಕೈ ತುಂಬ ಸಿಗತ್ತೆ.. ಅನ್ನೋ ಆಸೆ. ಹಾಗಾಗಿ ಸಣ್ಣ ಅವಕಾಶ ಸಿಕ್ಕರೂ ಬಿಡುವವನಲ್ಲ. ಆ ದಿನ ಖುಷಿಯಾಗಿ ಕುಂಬಳಕಾಯಿ ಹೊತ್ತು ಅವ್ವನ ಜೊತೆ ಸೀದ ಹಿತ್ತಿಲ ಬಾಗಿಲ ಕಡೆ ಹೋದ. ಬಾಗಿಲ ಬಳಿ ದಪ್ಪ ಕುಂಬಳಕಾಯಿ ಇಟ್ಟು, ಬಾಗಿಲವಾಡ ಹಿಡಿದು ಬಗ್ಗಿ ಒಳಗಡೆ ಕಣ್ ಹಾಯಿಸಿದ್ದ.., 'ಪ್ರದ್ಯುಮ್ನ ಹೊರ ಬರಬಹುದು' ಎಂದು. ಗೌರ ಹಿತ್ತಲಿನಲ್ಲಿ ಹಾಕಿದ್ದ ರಾಶಿ ಪಾತ್ರೆಯ ಹತ್ತಿರ ನಡೆದಳು. ಅಷ್ಟರಲ್ಲಿ ದೂರದಲ್ಲಿ ಜಗಳವಾಡುತ್ತಿದ್ದ ಬೀದಿನಾಯಿಯೊಂದು ಬೊಗಳುತ್ತಾ ಇವನೆಡೆಗೆ ಓಡಿ ಬಂದಿತ್ತು.
ಹೆದರಿದ ಶಂಕರ ಅಲ್ಲಿಂದ ಅಮ್ಮನ ಹತ್ತಿರ ಓಡುವ ಭರದಲ್ಲಿ ಮಾರನೆ ದಿನದ ವೈದಿಕಕ್ಕೆ ಹರವಿದ್ದ ಮಡಿ ಬಟ್ಟೆಗಳಲ್ಲಿ ಶಾಸ್ತ್ರಿಗಳ ಪಂಚೆಯನ್ನು ಎಳೆದು ನಾಯಿಯ ಮೇಲೆ ಬಿಸಾಕಿಬಿಟ್ಟ! ಆದರೆ ಆ ತಂತಿಯಲ್ಲಿ ಹರವಿದ್ದ ಮತ್ತೆ ನಾಲ್ಕು ಪಂಚೆಗಳು, ಮೇಲ್ಹೊದಿಕೆ.., ಕೈ ವಸ್ತ್ರಗಳೆಲ್ಲ ಮೈಲಿಗೆ ಯಾಗಿಬಿಟ್ಟಿತು. ಅಲ್ಲೇ ಗರಿಕೆ ಕೊಯ್ಯುತ್ತಿದ್ದ ಶಾಸ್ತ್ರಿಗಳಿಗೆ ನಖ ಶಿಖಾಂತರ ಉರಿಯಿತು..., "ಕತ್ತೆ ಭಡವಾ...., ಮಡಿ ಬಟ್ಟೆನೆಲ್ಲಾ ಮುಟ್ಟಿ ಮೈಲಿಗೆ ಮಾಡಿದ್ಯಲ್ಲೋ..?" ಎಂದರಚಿ.., ಅಲ್ಲಿದ್ದ ಒಂದು ಕೋಲು ಹಿಡಿದು ಧಾವಿಸಿಯೇ ಬಿಟ್ಟರು. ಹೆದರಿದ ಶಂಕರ ಓಡಿ ಅವರಮ್ಮನ ಬೆನ್ನು ತಬ್ಬಿಬಿಟ್ಟ. ಮಗ ಬೆಚ್ಚಿದ್ದು ನೋಡಿ ಗೌರನಿಗೆ ಬಹಳ ಸಂಕಟ ಆಯ್ತು.
ಅಪ್ಪಿ ಹಿಡಿದು "ಅಯ್ಯಾ, ಮಗ ಎದ್ರಕಂಡೀತೆ..., ಬುಡ್ರಯ್ಯ.., ನಾನು ಮತ್ತೆ ಸೆಣದು ಕೊಡ್ತೀನಿ..." ಎಂದು ಅಂಗಲಾಚಿದಳು." "ನೀನೆಂಥ ಮಾಡ್ತೀಯಾ...? ನಾನು ಮತ್ತೆ ಸ್ನಾನ ಮಾಡಿ ಮಡಿ ಹರವಬೇಕು.." ಎಂದು ಧುಮುಗುಟ್ಟುತ್ತಾ ಹೋಗಿದ್ದರು. ಮನೆಗೆ ಬಂದ ಶಂಕರನಿಗೆ ಕೆಂಡಾಮಂಡಲ ಜ್ವರ. ದೃಷ್ಟಿ ನಿವಾಳಿಸಿ, ಕೆಂಡ ನಿವಾಳಿಸಿರೂ ಕಡಿಮೆ ಆಗ್ಲಿಲ್ಲ ಅವತ್ತು. ಪದೇ ಪದೇ ಬೆಚ್ಚುತ್ತಿದ್ದ ಮಗು. ಆಗ ಮಾದನ ಹತ್ತಿರ ರೋಷದಿಂದ ಹೇಳಿದ್ದಳು, "ನಿಮ್ ಅಯ್ಯಾರ ಮಡಿಗಷ್ಟು ಮಣ್ಣಾಕ.., ಮಗ ಬಟ್ಟೆ ಮುಟ್ಟಿದ್ದಕ್ಕೆ ಎದ್ರಿಸ್ ಬಿಟ್ನಲ್ಲ ಆ ಯಪ್ಪ..., ನಮ್ಮನೆ ತಿಪ್ಪೆಲಿ ಬೆಳ್ದಿದ್ ಕುಂಬ್ಳಕಾಯಿ ಮಡಿಗೆ ಬತ್ತಾದಾ..? ಅದ್ಯಾವ ಸೀಮೆ ಮಡೀ..? ನಮ್ಮನೆ ಬಚ್ಚಲು ನೀರು ತಿಪ್ಪೆಗೆ ಓಗಾದಲ್ವಾ?? ಅದು ಮಡಿ ಎಂಗಾಯ್ತದೆ.? ಇನ್ಮ್ಯಾಲೆ ಆ ಮನಿ ಕಡೆ ತಲೆ ಆಕುಲ್ಲ ನಾನು.." ಎಂದು ಸಿಡಿದಿದ್ದಳು. ಆದ್ರೆ ಹಾಗಾಗಲು ಸಾಧ್ಯವೆ ಇಲ್ಲ, ಮರುದಿನ ಮುಖ ದಪ್ಪ ಮಾಡಿಕೊಂಡೇ ಬಂದಿದ್ದಳು. ಅಂದಿನಿಂದ ಅವರ ಮಡಿ ಬಗ್ಗೆ ಅಸಮಾಧಾನ ಅವಳಿಗೆ. ಇದೆಲ್ಲ ಕಳೆದು ಹೋದ ಮಾತುಗಳು.
******
ಬೆಳಗಿನ ಆರು ಘಂಟೆ. ಶಾಸ್ತ್ರಿಗಳು ತಮ್ಮ ಪ್ರಾತಃವಿಧಿಗಳನ್ನು ಮುಗಿಸಿ, ಸ್ನಾನ, ಸಂಧ್ಯಾವಂದನೆ ಜೊತೆಗೆ ದೇವರಿಗೆ ಸಣ್ಣ ಪೂಜೆಯನ್ನೂ ಮಾಡಿ ಮುಗಿಸಿ, ಬಿಳಿ ಕಚ್ಚೆಪಂಚೆ, ಬಿಳಿ ಜುಬ್ಬ, ಅದರ ಮೇಲೆ ಜರಿ ಅಂಚಿನ ಶಲ್ಯವನ್ನು ಹೊದ್ದಿದ್ದರು. ಕಾರನ್ನ ಶೆಡ್ನಿಂದ ಹೊರ ತಂದು, ರಸ್ತೆಯಲ್ಲಿ ನಿಲ್ಲಿಸಿ ಮೆತ್ತನೆಯ ಬಟ್ಟೆಯಲ್ಲಿ ಮುಂದಿನ ಗ್ಲಾಸ್, ಕಾರಿನ ಟಾಪ್ ಎಲ್ಲ ಒರೆಸಿದ್ರು. ಪ್ರತಿದಿನ ಮಾದಪ್ಪ ಒರೆಸಿರ್ತಾನೆ. ಎಲ್ಲದ್ರೂ ಹೊರಡೋವಾಗ ಇದೊಂದು ಅಭ್ಯಾಸ ಅಷ್ಟೆ.
ಸುಭದ್ರಮ್ಮ ಕಡು ನೀಲಿ ಬಣ್ಣದ ಕಡ್ಡಿಯಂಚಿನ ಜರಿ ಸೀರೆ ಉಟ್ಟು, ತುರುಬಿಗೆ ಮಲ್ಲಿಗೆ ಮುಡಿದು, ಮದುವೆಗೆ ಹೊರಡಲು ತಯಾರಿ ಮಾಡಿಕೊಂಡೇ ತುಳಸಿ ಪೂಜೆ ಮಾಡಲು ಬಂದವರು,
ಕಾರಿಗೂ ಅರಿಸಿನ ಕುಂಕುಮ ಏರಿಸಿ, ಒಳಗಿರುವ ಗಣಪತಿಗೂ ಹೂ ಅಕ್ಷತೆ ಏರಿಸಿ, ಊದುಬತ್ತಿ ಬೆಳಗಿ ಒಳ ನಡೆದರು. ಅಷ್ಟರಲ್ಲಿ ಕಾಳ ಖಾಕಿ ಚಡ್ಡಿ, ಬಣ್ಣದ ಬನೀಯನ್, ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಬಂದ. "ಅಯ್ಯ.., ಮಾದ ಎಲ್ಲ ಏಳವ್ನೆ.., ನಾನಿತ್ತೀನಿ ಓಗ್ ಬನ್ನಿ" ಎಂದ. "ಹುಷಾರು...., ಸಂಜೆ ಆರಕ್ಕೆಲ್ಲ ಇರ್ತೀನಿ.., ರಾಸನ್ನ ತೋಟಕ್ಕೆ ಬಿಟ್ಟು ಬಾ.., ನಾಲಕ್ಕಕ್ಕೆ ಹೋಗಿ ವಾಪಸ್ ಹೊಡ್ಕೊಂಡು ಬಾ.., ದಿಡ್ಡಿ ಬಾಗ್ಲು ಸರಿ ಹಾಕ್ಕೊಂಡ್ಬಾ.. ಇಲ್ಲಾಂದ್ರೆ ಊರ ದನ ನುಗ್ತಾವೆ.." ಎಂದು ಹೇಳಿದ್ರು. "ಆಗ್ಲಿ ಅಯ್ಯ.., ನೀವು ಓಗ್ಬನ್ನಿ.. ಉಸಾರು.." ಎಂದು ಹಿತ್ತಲ ಕಡೆ ನಡೆದ. ಮನೆಗೆ ಬೀಗ ಹಾಕಿದ ಸುಭದ್ರಮ್ಮ ಕೈಯಲ್ಲಿ ಉಡುಗೊರೆಯನ್ನು ಹಿಡಿದು ಕಾರಿನ ಮುಂದಿನ ಸೀಟಲ್ಲಿ ಪವಡಿಸಿ ಬಿಟ್ಟರು. ಶಾಸ್ತ್ರಿಗಳು ಕಾರನ್ನೇರಿ ಚಲಾಯಿಸತೊಡಗಿದರು.
****
ದಾರಿಯುದ್ದಕ್ಕೂ ಇಂದಿನ ಮದುವೆ ಬಗ್ಗೆ ಶಾಸ್ತ್ರಿಗಳ ಮಾತೆ! ಆ ದಿನ ದೂರದ ಸಂಬಂಧಿ ನಾರಾಯಣ ಬಂದವನೇ ಇವರಿಬ್ಬರಿಗೆ ಉಡುಗೊರೆ ನೀಡಿ, ಆಹ್ವಾನ ಪತ್ರಿಕೆ ಕೊಟ್ಟು ನಮಸ್ಕರಿಸಿ ಕರೆದಿದ್ದ. ಇನ್ವಿಟೇಷನ್ ತೆರೆದು ನೋಡಿ, ಹುಡುಗಿಯ ಪೂರ್ವಾಪರ ವಿಚಾರಿಸಿದ್ದರು ಶಾಸ್ತ್ರಿಗಳು. ಮುಜುಗರದಿಂದಲೇ ಹೇಳಿದ್ದರು," ಸೀತಣ್ಣ..., ಹುಡುಗಿ ನಮ್ ಜನ ಅಲ್ಲ.., ಈಗಿನ ಕಾಲದ ಮಕ್ಳು.. ಲವ್ ಮಾಡ್ಕೊಂಡು ಕೊನೆಗೆ ನಮ್ಮ ತನಕ ತರ್ತಾರೆ. ಏನ್ ಮಾಡೋದೂ.., ಅವ್ರ ಇಷ್ಟದಂತೆ ನಡೀಬೇಕು.., ಇಲ್ಲ ಅಂದ್ರೆ ಮನೆ ಬಿಟ್ಟೇ ಹೋಗ್ತಾರೆ. ಇರೋನು ಒಬ್ನೇ ಮಗ.., ಏನ್ಮಾಡ್ಲಿ..? "ಅಂತ ಏನೇನೋ ಬಡಬಡಿಸಿ.. "ನಮ್ ಶಾಸ್ತ್ರದ ಪ್ರಕಾರವೇ ಮದುವೆ ಆಗೋದು. ಅಡಿಗೆಯೋರೂ ನಮ್ಮೋರೇ..!
ಬನ್ನಿ ಆಶೀರ್ವಾದ ಮಾಡಿ ಹೋಗಿ.. ತಪ್ಪಿಸಬೇಡಿ.." ಎಂದು ಕಾಲಿಗೆ ನಮಸ್ಕರಿಸಿ ಕರೆದಿದ್ದ. ಆಗ ಶಾಸ್ತ್ರಿಗಳು, "ನಾಣಿ.., ಏನೂ ಮಾಡೋಕಾಗಲ್ವೋ.., ಈಗಿನ ಕಾಲ್ದಲ್ಲಿ ಹುಡುಗಿಯರು ಸಿಗೋದೇ ಕಷ್ಟ, ಅಂಥಾದ್ರಲ್ಲಿ ಅವ್ರೇ ನೋಡ್ಕೊಂಡಿದ್ದಾರೆ ಅಂದ್ಮೇಲೆ ಹುಡುಗಿ ಹುಡುಕೋ ಕಷ್ಟ ತಪ್ತು ಬಿಡು. ಯಾವ ಜಾತಿಯಾದ್ರೇನೂ..? ಮುಖ್ಯ ತಿಂದುಣ್ಣೋ ಜಾತಿಯಾಗ್ಬಾರ್ದು ಅಷ್ಟೇ.." ಎಂದು ಅವರಿಗೆ ಸಮಾಧಾನ ಹೇಳಿ, ಖಂಡಿತ ಬರುವುದಾಗಿ ಮಾತು ಕೊಟ್ಟಿದ್ದರು.
***
ಕನ್ವೆನ್ಷನ್ ಹಾಲ್ ತಲುಪಿದಾಗ ಆಗಲೇ ಧಾರೆ ಮಂಟಪದಲ್ಲಿ ಪುರೋಹಿತರುಗಳು ಕಾಶಿಯಾತ್ರೆಗೆ ಸಿದ್ಧತೆ ಮಾಡುತ್ತಿದ್ದರು. ಇವರನ್ನು ನೋಡಿದ ನಾರಾಯಣ ಓಡೋಡಿ ಬಂದು ಬಹಳ ಸಂಭ್ರಮದಿಂದ ಸ್ವಾಗತಿಸಿದ. "ಸೀತಣ್ಣ... ಅತ್ತಿಗೆಮ್ಮ.., ನೀವು ಬಂದದ್ದು ಬಹಳ ಸಂತೋಷವಾಯ್ತು.., ಬನ್ನಿ ಮೊದಲು ತಿಂಡಿ ಆಗ್ಬಿಡ್ಲಿ.., ಒಂಭತ್ತಕ್ಕೆ ಮಹೂರ್ತ. ಇವ್ಳುನ್ನೂ ಕರ್ಕೊಂಡ್ಬರ್ತೀನಿ.., ಒಟ್ಟಿಗೆ ತಿಂಡಿ ಮಾಡೋಣ.." ಎಂದು ಅವರಿಬ್ಬರನ್ನೂ ಮುಂದಿನ ಕುರ್ಚಿಯ ಮೇಲೆ ಕೂರಿಸಿ ಅತ್ತ ನಡೆದ. ಅಲ್ಲಿ ಕುಳಿದು ಮಂಟಪದ ಕಡೆ ಕಣ್ಣಾಯಿಸಿದ ಸುಭದ್ರಮ್ಮನಿಗೆ ದೊಡ್ಡ ಜರಿ ಗಾಢ ಬಣ್ಣದ ಸೀರೆಯುಟ್ಟ ಹೆಂಗಸೊಬ್ಬಳು ಮಂಟಪದ ಹತ್ತಿರ ಕಳಸದ ತಟ್ಟೆಯನ್ನು ಹಿಡಿದು ನಿಂತಿದ್ದಳು.
'ಎಲ್ಲೋ ನೋಡಿದಂತಿದೆ..!' ಅನ್ನಿಸ್ತು. ದಿಟ್ಟಿಸಿ ನೋಡಿದರು.." ರೀ... ರೀ.. ಇಲ್ನೋಡಿ.., ಅಲ್ಲಿ ನಿಂತಿರೋಳು ನಮ್ ಗೌರನ ಥರ ಕಾಣ್ತಿದ್ದಾಳೆ ಅಲ್ವಾ..?" ಆಶ್ಚರ್ಯದಿಂದ ಪಿಸು ದನಿಯಲ್ಲಿ ಕೇಳಿದರು. ಇವರು ತೋರಿದ ಕಡೆ ನೋಡಿದ ಶಾಸ್ತ್ರಿಗಳು, "ಭ್ರಮೆ ನಿನಗೆ..,ಅವ್ಳ್ ಯಾಕೆ ಬರ್ತಾಳೆ..?" ಎಂದು ಹುಬ್ಬು ಗಂಟ್ಹಾಕಿದರು. ಹಾಗೇ ಕಣ್ಹಾಯಿಸುತ್ತಾ.., ಅತ್ತ ಕಡೆ ತಿರುಗಿದಾಗ, ಬಿಳಿ ಪಂಚೆ, ಬಿಳಿ ಶರಟು ಮೇಲೆ ಶಲ್ಯ ಹೊದ್ದವನೊಬ್ಬ ಮಂಟಪದ ಕಡೆಗೆ ಬರ ತೊಡಗಿದ್ದ. ಕಣ್ಣು ಕಿರಿದಾಗಿಸಿಕೊಂಡು ನೋಡಿದ ಶಾಸ್ತ್ರಿಗಳು ಸ್ವಲ್ಪ ಮೆಲು ಗಂಭೀರದ ದನಿಯಲ್ಲಿ, "ಲೇ.. ಅಲ್ನೋಡು.., ಅವ್ನು.. ನಮ್ ಮಾದ ಅಲ್ವೇ...!?
" ಹೌದೂಂತಿನಿ..., ಇದೇನ್ರೀ ಇವ್ರಿಲ್ಲಿ..!?" ಸುಭದ್ರಮ್ಮನಿಗೆ ಏನೋ ಅವಘಡ ನಡೆದಿದೆ. ಎನ್ನೋ ಆತಂಕ. "ಮಾದಾ...., ಏ.. ಏನೋ... ನೀನ್... ನೀನಿಲ್ಲಿ...!!? " ಆಶ್ಚರ್ಯದ ಜೊತೆಗೆ ಗಾಭರಿಯಲ್ಲಿ ಕೇಳಿದರು. ಮಾದನೂ ಅನಿರೀಕ್ಷಿತವಾಗಿ ಶಾಸ್ತ್ರಿಗಳನ್ನು ಅಲ್ಲಿ ನೋಡಿ ಹೌಹಾರಿದ. "ಅ.... ಅ... ಅಯ್ಯಾ.., ನೀವೇನಯ್ಯಾ.. ಇಲ್ಲಿ..? ನೀವು ನಿಮ್ ನೆಂಟ್ರು ಮನೆ ಮದ್ವೆಗೆ ಒಂಟಿದ್ರಲ್ಲ..!? " ಗಡಬಡಿಸಿದ "ನನ್ ಕಥೆ ಬಿಡು.. ನೀನೇನಿಲ್ಲಿ..? "ರೇಗೇ ಬಿಟ್ಟರು ಶಾಸ್ತ್ರಿಗಳು.
"ಅಯ್ಯಾ.., ನನ್ ಬಾಮೈದ್ನನ್ ಮಗ್ಳು ಅಯ್ಯ.., ಬಾಳ ಓದ್ಕಂಡವ್ಳೆ.., ಉಡ್ಗ ನಮ್ ಜನ ಅಲ್ಲ.., ಮೆಚ್ಕಂಡ್ ಮದ್ವೆ ಮಾಡ್ಕಾತವ್ಳೆ... " ದೂರ ಕೈ ಕಟ್ಟಿ ನಿಂತು ತಲೆ ತಗ್ಗಿಸಿ ಇಷ್ಟು ಹೇಳೋದ್ರಲ್ಲಿ ಬೆವೆತಿದ್ದ. ಶಾಸ್ತ್ರಿಗಳ ಮುಖ ವಿವರ್ಣವಾಯ್ತು ನಾಳೆ ಹಳ್ಳಿಯಲ್ಲಿ ನಡೆಯುವ ಚಿತ್ರಣ ತಂಡೋಪ ತಂಡವಾಗಿ ಕಣ್ಮುಂದೆ ಬಂತು. ಮುಖ ಬೆವೆತಿತು.., ಏನೊಂದೂ ಮಾತಾಡದೆ ಸುಭದ್ರಮ್ಮನ ನಡುಗುವ ಕೈ ಹಿಡಿದವರೆ ಅಕ್ಷರಶಃ ಎಳೆದುಕೊಂಡೇ ಛತ್ರದಿಂದ ಹೊರಗೆ ನಡೆದುಬಿಟ್ಟರು.