

ರಾಜ್ಯ-ಮತ-ಬಡವ-ಶ್ರೀಮಂತ ಭೇದವಿಲ್ಲದೆ ಸಮಸ್ತರೂ ದೀಪಾವಳಿ ಆಚರಣೆ ಮರೆಯುವುದಿಲ್ಲ. ಕಾರ್ತಿಕ ಮಾಸದ ಆರಂಭವೆಂದರೆ ದಕ್ಷಿಣಾಯನ ಕಾಲ ಮುಗಿಯುತ್ತ ಬರುವ ಕಾರಣ ಆ ದಿನಗಳಲ್ಲಿ ಹಗಲು ಕಡಿಮೆ. ದೀರ್ಘರಾತ್ರಿಯ ಸಮಯಗಳು ಅವು. ಈ ಋತುಮಾನಕ್ಕೆ ಅನುಗುಣವಾಗಿ ಎಣ್ಣೆ ಸ್ನಾನ ಹಾಗೂ ದೀಪ ಬೆಳಗುವುದು ವೈಜ್ಞಾನಿಕವಾಗಿಯೂ ಮಹತ್ತ ್ವ್ದು.
ಮಹಾಕವಿ ಕಾಳಿದಾಸನು ‘ಉತ್ಸವಪ್ರಿಯಾಃ ಖಲು ಮನುಷ್ಯಾಃ’ ಎಂದಂತೆ ಮನುಷ್ಯರು ಉತ್ಸವ ಪ್ರಿಯರು. ಹಿಂದಿನಿಂದಲೂ ಇಂದಿನವರೆಗೂ ಕಾಲಘಟ್ಟಕ್ಕೆ ಅನುಸಾರವಾಗಿ ಅನೇಕ ಉತ್ಸವ, ಹಬ್ಬ ಹರಿದಿನಗಳನ್ನು ನಾವು ಆಚರಿಸುತ್ತಾ ಬಂದಿದ್ದೇವೆ. ಭಾರತ ದೇಶದಲ್ಲಿ ಧಾರ್ವಿುಕ ಉತ್ಸವ, ಹಬ್ಬಗಳಿಲ್ಲದ ದಿನವೇ ಇಲ್ಲವೇನೋ ಎನ್ನುವಂತೆ ಪ್ರತಿ ಕುಟುಂಬ, ಬೀದಿ, ಊರು-ಕೇರಿಗೆ ಸೀಮಿತವಾದ ಹಬ್ಬಗಳಿಂದ ಹಿಡಿದು, ದೇಶಾದ್ಯಂತ ಇದರ ಕಂಪು ಹರಡಿದೆ. ಇಂದಿನ ಯಾಂತ್ರಿಕ ಏಕತಾನತೆಯ ಜೀವನದಿಂದ ಬೇಸತ್ತ ಮನುಷ್ಯನಿಗೆ ಅವಶ್ಯವಾದ ಬದಲಾವಣೆಯನ್ನು ಮತ್ತು ಬದುಕಿನಲ್ಲಿ ಉಲ್ಲಾಸವನ್ನು ಹಬ್ಬ ಹರಿದಿನಗಳು ಹೆಚ್ಚಿಸುತ್ತವೆ. ಉದ್ಯೋಗದ ನಿಮಿತ್ತ ದೂರ ಇರುವ ಕುಟುಂಬಗಳನ್ನು ಒಂದಾಗಿಸುತ್ತದೆ. ತಮ್ಮ ಬಂಧು-ಮಿತ್ರರಿಗೆ ಮತ್ತು ಇತರರಿಗೆ ಕೃತಜ್ಞತೆ ಸಲ್ಲಿಸಲು ಹಬ್ಬ ಒಂದು ಸದವಕಾಶ. ದೀಪಾವಳಿ, ಹೋಳಿ, ಯುಗಾದಿ, ಗಣೇಶ ಚತುರ್ಥಿಯಂತಹ ಪರ್ವ ದಿನಗಳು ಹರ್ಷವನ್ನು ಹಿಗ್ಗಿಸಿ ಸಡಗರ, ಸಂಭ್ರಮಗಳನ್ನು ಬಾಳಿಗೆರೆಯುವ ಅಪೂರ್ವವಾದ ಅವಿಸ್ಮರಣೀಯ ಕ್ಷಣಗಳನ್ನು ಉಂಟುಮಾಡುತ್ತವೆ.
ದೀಪಾವಳಿ ನಮ್ಮ ದೇಶದ ಬಹು ದೊಡ್ಡ ಧಾರ್ವಿುಕ ಹಬ್ಬ. ಎಲ್ಲಾ ಜನಾಂಗದವರು ಯಾವುದೇ ಭೇದ ಭಾವವಿಲ್ಲದೇ ದೇಶದೆಲ್ಲೆಡೆ ಆಚರಿಸುವ ಹಬ್ಬ. ಹಿರಿಯರಿಂದ ಕಿರಿಯರವರೆಗೂ ಸಂಭ್ರಮವೋ ಸಂಭ್ರಮ. ಮಕ್ಕಳಿಗೆ ಹೊಸಬಟ್ಟೆ, ಉಡುಗೆ-ತೊಡುಗೆಯ ಸಂಭ್ರಮ. ಹೆಣ್ಣು ಮಕ್ಕಳಿಗೆ ಹೊಸ ಒಡವೆ-ಆಭರಣಗಳ ಸಡಗರ. ಯುವಕರಿಗೆ ಪಟಾಕಿ, ವಿವಿಧ ವಿನೋದಗಳ ವೈಭವ, ಭಕ್ಷ್ಯ-ಭೋಜ್ಯಗಳ ರಸದೌತಣ. ಹಿರಿಯರಿಗಂತೂ ಮಕ್ಕಳ ಸಂಭ್ರಮವನ್ನು ನೋಡಿ ಆನಂದಿಸುವ ಸಡಗರ. ರೈತರಿಗೆ ಸುಗ್ಗಿಯ ಸಂಭ್ರಮ. ನವದಂಪತಿಗಳಿಗೆ ನವ ಪರ್ವದ ಸಡಗರ. ಹೀಗೆ ಎಲ್ಲರಿಗೂ ಬಹು ಸಂಭ್ರಮದ ಹಬ್ಬ ದೀಪಾವಳಿ. ಇದರ ಹೆಸರೇ ಹೇಳುವ ಹಾಗೆ ಇದು ಬೆಳಕಿನ ಹಬ್ಬ. ದುಷ್ಟ ಶಕ್ತಿಯ ವಿರುದ್ಧ ಸತ್ಯದ ಗೆಲುವನ್ನು ಸಂಭ್ರಮಿಸುವ ಹಬ್ಬ. ದುಃಖದ ಕತ್ತಲನ್ನು ದೂರ ಮಾಡಿ ಆನಂದದ ಬೆಳಕಿನಿಂದ ಜಗ ಬೆಳಗುವ ಹಬ್ಬ.
ಆವಲೀ ಎಂಬ ಸಂಸ್ಕೃತ ಶಬ್ದದ ಮತ್ತೊಂದು ಅರ್ಥ ಮಾಲೆ ಎಂದು. ದೀಪಾವಳೀ ಎಂದರೆ ಬೆಳಕಿನ ಮಾಲೆ. ಉಪನಿಷತ್ತುಗಳು ‘ತಮಸೋ ಮಾ ಜ್ಯೋತಿರ್ಗಮಯ’ ಎಂದು ಬೆಳಕಿನ ಪಯಣವನ್ನು ಸಾರಿವೆ. ಸೂರ್ಯಚಂದ್ರರ ಪ್ರಕಾಶವನ್ನು ನಿತ್ಯವೂ ಸ್ವಾಗತಿಸಿ ಪೂಜಿಸುವ ನಾವು ಕಾರ್ತಿಕಮಾಸದ ಕತ್ತಲೆಯಲ್ಲಿ ಹಣತೆಯ ಪ್ರಕಾಶದಲ್ಲಿ ತುಂಬಿ ಬೆಳಕನ್ನು ಹರಡುತ್ತೇವೆ. ಭಾರತೀಯರ ಹಬ್ಬಗಳೆಂದರೆ ಮತ್ತೆ ಮತ್ತೆ ಪ್ರಕೃತಿಯೊಂದಿಗೆ ಒಂದಾಗುವುದೇ ಆಗಿದೆ. ನಗರದಲ್ಲಿ ವಾಸಿಸುವವರಿಗೆ ಪ್ರಕೃತಿಯೊಂದಿಗೆ ಬೆರೆಯುವುದು ಕಷ್ಟಕರ ಸಂಗತಿಯಾಗಿದೆ, ಪ್ರಯತ್ನ ಪೂರ್ವಕವಾಗಿ ಈ ನಂಟನ್ನು ಕಂಡುಕೊಳ್ಳಲು ಹಬ್ಬಗಳ ಆಚರಣೆ ನೆರವಾಗಬಹುದು.
ಧಾರ್ವಿುಕವಾಗಿ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶೀ, ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪತ್ ದಿನಗಳಂದು ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ. ಮೊದಲನೇ ದಿನ ನರಕ ಚತುರ್ದಶೀ, ಎರಡನೇ ದಿನ ಲಕ್ಷ್ಮೀ ಪೂಜೆ ಮತ್ತು ಮೂರನೇ ದಿನ ಬಲಿ ಪಾಡ್ಯಮಿ ಅಥವಾ ಗೋಪಾಡ್ಯಮಿ. ಈ ಮೂರೂ ದಿನ ಅನೇಕ ಪೂಜಾ, ವಿಧಿ-ವಿಧಾನಗಳನ್ನು ಆಚರಿಸುತ್ತಾರೆ. ಕಾರ್ತಿಕ ಶುದ್ಧ ಪ್ರತಿಪತ್ ದಿನದಂದು ಆಚರಿಸುವ ಈ ಹಬ್ಬಕ್ಕೆ ಮೊದಲ ಮೂರು ದಿನಗಳ ಸಿದ್ಧತೆಯಿರುತ್ತದೆ. ಇದನ್ನೂ ಮತ್ತೊಂದು ಹಬ್ಬವಾಗಿಯೇ ಆಚರಿಸುವುದು ವಿಶೇಷ. ಆದ್ದರಿಂದ ದೀಪಾವಳಿಯು ಪರ್ವಾವಳಿಯೂ ಹೌದು. ಅಶ್ವಯುಜ ಮಾಸದ ಕೃಷ್ಣಪಕ್ಷದ ತ್ರಯೋದಶೀ ತಿಥಿಯನ್ನು ಧನ್ವಂತರಿ ತ್ರಯೋದಶೀ ಎಂದು ಪರಿಗಣಿಸಲಾಗುತ್ತದೆ. ಈಗ ಇದನ್ನು ರಾಷ್ಟ್ರಿಯ ಆಯುರ್ವೆದ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ಧನ್ ತೇರಸ್ ಎಂದು ಉತ್ತರಭಾರತದಲ್ಲಿ ಕರೆಯುತ್ತಾರೆ. ವಿಶೇಷವಾಗಿ ಸಮೃದ್ಧಿ ಮತ್ತು ಬುದ್ಧಿಯ ಪ್ರತೀಕವಾದ ಲಕ್ಷ್ಮೀ ಮತ್ತು ಗಣೇಶನನ್ನು ಪೂಜಿಸಿ ಹೊಸ ಬಟ್ಟೆ, ಪಾತ್ರೆ, ಚಿನ್ನ, ಬೆಳ್ಳಿಯನ್ನು ಖರೀದಿಸಿದರೆ ಜೀವನ ಸುಖಮಯವಾಗಿರುತ್ತದೆ ಎಂಬ ಪ್ರತೀತಿಯಿದೆ. ದಕ್ಷಿಣ ಭಾರತದಲ್ಲಿ ಈ ದಿನವನ್ನು ನೀರು ತುಂಬುವ ಹಬ್ಬ ಎಂದು ಆಚರಿಸುವುದು ಕಂಡು ಬರುತ್ತದೆ. ಸ್ನಾನದ ಮನೆಯ ಪರಿಕರಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿಸಿಡುತ್ತಾರೆ. ಇದರ ಹಿಂದಿನ ಭಾವವನ್ನು ಗ್ರಹಿಸಿದರೆ ಆಯುಧಗಳನ್ನು, ಪುಸ್ತಕಗಳನ್ನು ಪೂಜಿಸಿದಂತೆ ನಮ್ಮನ್ನು ಸ್ವಚ್ಛಗೊಳಿಸುವ ಪರಿಕರಗಳಿಗೂ ಕೃತಜ್ಞತೆ ಸಲ್ಲಿಸಿ ಪೂಜ್ಯ ಸ್ಥಾನಕ್ಕೇರಿಸುವುದು ಭಾರತೀಯ ಪರಂಪರೆ.
ಅಶ್ವಯುಜ ಕೃಷ್ಣಪಕ್ಷದ ಚತುರ್ದಶೀಯು ನರಕ ಚತುರ್ದಶೀ ಎಂದೇ ಪ್ರಸಿದ್ಧ. ಮಹಾವಿಷ್ಣುವಿನ ವರಾಹ ಅವತಾರದಲ್ಲಿ ಆತನ ದೇಹದ ಬೆವರು ನೆಲದ ಮೇಲೆ ಬಿದ್ದಾಗ ಹುಟ್ಟಿದ ರಾಕ್ಷಸ ನರಕಾಸುರ. ಇವನನ್ನು ಭೌಮಾಸುರ ಎಂದೂ ಕರೆಯುತ್ತಾರೆ. ಭೂದೇವಿಯ ಪ್ರಾರ್ಥನೆಯಂತೆ ವಿಷ್ಣುವಿನಿಂದ ಪಡೆದ ವೈಷ್ಣವಾಸ್ತ್ರದ ಮಹಿಮೆಯಿಂದ ದುರ್ಜಯನಾಗಿ ಪ್ರಾಗ್ಜೋತಿಷಪುರದಲ್ಲಿ ನೆಲೆಸಿದ್ದ. ಈತ ಮತ್ತು ಮುರಾಸುರ ಇಬ್ಬರೂ ಲೋಕಕಂಟಕರಾಗಿ ದೇವತೆಗಳಿಗೆ ಉಪಟಳ ಕೊಡುತ್ತಿದ್ದರು. ಇಂದ್ರನ ಪ್ರಾರ್ಥನೆಯಂತೆ ಶ್ರೀಕೃಷ್ಣನು ಪ್ರಾಗ್ಜೋತಿಷಪುರಕ್ಕೆ ಹೋಗಿ ಪಂಚಬಾಣಗಳಿದ ಪಂಚಶಿರನಾದ ಮುರನ ತಲೆಯನ್ನು ಕತ್ತರಿಸಿದ. ಮುರನ ಏಳು ಮಕ್ಕಳನ್ನೂ, ಪೀಠಾಸುರನನ್ನೂ ಸಂಹರಿಸಿದ. ಬಳಿಕ ನರಕಾಸುರ ಸೈನ್ಯಸಮೇತನಾಗಿ ಕೃಷ್ಣನ ಮೇಲೆ ಎರಗಿ, ಬಹಳವಾಗಿ ಹೋರಾಡಿ ಸತ್ತ. ನರಕಾಸುರನು ಸೆರೆಯಲ್ಲಿರಿಸಿದ್ದ ಹದಿನಾರು ಸಾವಿರ ರಾಜಪುತ್ರಿಯರನ್ನು ಬಿಡಿಸಿ, ಅವರ ಇಚ್ಛೆಯಂತೆ ಶ್ರೀಕೃಷ್ಣ ತಾನೇ ವರಿಸಿದ.
ಅಂದು ಶ್ರೀಕೃಷ್ಣನು ನರಕಾಸುರನನ್ನು ವಧಿಸಿದ ಸ್ಮರಣಾರ್ಥ ನರಕ ಚತುರ್ದಶೀ ಎಂದು ಹೇಳಲಾಗುತ್ತದೆ. ದೊಡ್ಡದಾದ ಶಬ್ದದೊಂದಿಗೆ ನರಕಾಸುರ ಬಿದ್ದು ಸತ್ತ ಕಾರಣ ಅದರ ಪ್ರತೀಕವಾಗಿ ಪಟಾಕಿ ಹಚ್ಚುವುದು ರೂಢಿಯಲ್ಲಿ ಬಂದಿದೆ. ಆದರೆ ಈಗ ಎಲ್ಲಾ ಸಂಭ್ರಮಾಚರಣೆಗಳಲ್ಲಿಯೂ ಪಟಾಕಿ ಅನಿವಾರ್ಯವಾಗಿ ಬಿಟ್ಟಿದೆ. ಹಿಂದಿನ ದಿನ ಸಿಂಗಾರಗೊಂಡ ಹಂಡೆಗಳಿಗೆ ಬೆಳಗಿನ ಜಾವವೇ ಉರಿ ಹಾಕಿ ನೀರನ್ನು ಕೊತ ಕೊತನೆ ಕುದಿಸಿ ಮನೆಯಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಚೆನ್ನಾಗಿ ಮೈತುಂಬಾ ಎಣ್ಣೆಯನ್ನು ಅಭ್ಯಂಜನ ಮಾಡುತ್ತಾರೆ. ಆಯುರ್ವೆದದಲ್ಲಿ ಅಭ್ಯಂಗ ಸ್ನಾನಕ್ಕೆ ವಿಶೇಷ ಮಹತ್ವವಿದೆ. ‘ಅಭ್ಯಂಗಂ ಆಚರೇತ ನಿತ್ಯಂ ಸ ಜರಾಶ್ರಮ ವಾತಃ’ ಆಯುರ್ವೆದದಲ್ಲಿ ಅಭ್ಯಂಗವನ್ನು ದಿನವೂ ಆಚರಿಸಲು ಸೂಚಿಸಿದ್ದಾರೆ. ಇದರಿಂದ ಮುಪ್ಪನ್ನು ಮುಂದೂಡಬಹುದಾಗಿದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಹಾಗೂ ಸಾಮಾನ್ಯ ವಾತ ರೋಗಗಳಾದ ಮೈ-ಕೈ ನೋವನ್ನು ತಡೆಯಬಹುದಾಗಿದೆ. ಚಳಿಗಾಲವು ಪ್ರಾರಂಭವಾಗುವ ಸಮಯವಾಗಿರುವುದರಿಂದ ಚರ್ಮದಲ್ಲಿ ರೂಕ್ಷತೆ ಹೆಚ್ಚಬಹುದಾಗಿದ್ದು, ಅದನ್ನು ತಡೆಯುವ ಸಲುವಾಗಿ ತೈಲಾಭ್ಯಂಜನವನ್ನು ಸೂಚಿಸಿದ್ದಾರೆ.
ನರಕ ಚತುರ್ದಶೀಯ ಹಿಂದಿನ ದಿನ ರಾತ್ರಿ ಮಾಡಿದ ಕಳ್ಳತನ ಪಾಪವಲ್ಲ ಎಂಬ ನಂಬಿಕೆ ಉತ್ತರ ಕನ್ನಡದಲ್ಲಿ ಇದೆ. ಆದ್ದರಿಂದ ಆ ರಾತ್ರಿ ಬೇರೆಯವರ ಮನೆಯ ಹಿತ್ತಲಿನ ತರಕಾರಿಗಳು, ತೋಟದ ತೆಂಗಿನಕಾಯಿ ಮುಂತಾದವುಗಳನ್ನು ಯುವಕರು ಕದಿಯುತ್ತಾರೆ. ಇದಕ್ಕೆ ಭೂರಗಳವು ಎನ್ನುತ್ತಾರೆ. ಎಂದರೆ ಕದ್ದು ತಂದಾದರೂ ಈ ಹಬ್ಬ ಮಾಡಬೇಕು ಎಂದು ಹಿಂದಿನ ಕಾಲದವರ ಮಾತು. ಚತುರ್ದಶೀಯ ದಿನ ಬೆಳಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ. ಮನುಷ್ಯರಷ್ಟೇ ಅಲ್ಲದೇ ಅಂದು ಹಸುಕರುಗಳಿಗೂ ಎಣ್ಣೆ ಎರೆಯುತ್ತಾರೆ. ಇದನ್ನು ಭೂರೆ ಹಬ್ಬ ಎಂದು ಕರೆಯುತ್ತಾರೆ.
ಅಭ್ಯಂಗ ಸ್ನಾನದ ಬಗ್ಗೆ ಶಾಸ್ತ್ರದಲ್ಲಿ ಇನ್ನೂ ಅನೇಕ ಉಲ್ಲೇಖಗಳಿವೆ.
ಚತುರ್ದಶೀ ಚಾಶ್ವಯುಜಶ್ಚ ಕೃಷ್ಣಾ ಸ್ವಾತ್ಯರ್ಕ್ಷಯುಕ್ತಾ ಚ ಭವೇತ್ ಪ್ರಭಾತೇ|
ಸ್ನಾನಂ ಸಮಭ್ಯಜ್ಯ ನರೈಸ್ತು ಕಾರ್ಯಂ ಸುಗಂಧತೈಲೇನ ವಿಭೂತಿಕಾಮೈಃ|| - ಸ್ಮೃದರ್ಪಣ
ಸ್ವಾತಿ ನಕ್ಷತ್ರಯುಕ್ತ ಆಶ್ವಿನಕೃಷ್ಣ ಚತುರ್ದಶಿಯಂದು ಪ್ರಾತಃಕಾಲದಲ್ಲಿ ಐಶ್ವರ್ಯದ ಅಭಿಲಾಷೆಯುಳ್ಳ ಮನುಷ್ಯರು ಸುಗಂಧಿತ ತೈಲ ಇತ್ಯಾದಿಗಳಿಂದ ಮರ್ದನ ಮಾಡಿಕೊಂಡು ಸ್ನಾನ ಮಾಡಬೇಕು.
ಆಶ್ವಯುಕ್ ಕೃಷ್ಣ ಪಕ್ಷಸ್ಯ ಚತುರ್ದಶ್ಯಾಂ ವಿಧೂದಯೇ |
ತಿಲೇನ ಕರ್ತವ್ಯಂ ಸ್ನಾನಂ ನರಕಭೀರುಣಾ || - ಪೃಥ್ವಿಚಂದ್ರೋದಯ
ಪೃಥ್ವಿಚಂದ್ರೋದಯದಲ್ಲಿ ಪದ್ಮಪುರಾಣದ ವಾಕ್ಯವು ಹೀಗಿದೆ - ನರಕಕ್ಕೆ ಹೋಗಲು ಹೆದರುವ ಮನುಷ್ಯನು ಆಶ್ವಿನ ಕೃಷ್ಣ ಚಂದ್ರೋದಯದಲ್ಲಿ ಎಳ್ಳೆಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡಬೇಕು.
ಪ್ರಾತಃ ಸ್ನಾನಂ ತು ಯಃ ಕುರ್ಯಾದ್ಯಮಲೋಕಂ ನ ಪಶ್ಯತಿ| - ಕಾಲಾದರ್ಶ
ಕಾಲಾದರ್ಶದಲ್ಲಿ ಹೀಗೆ ಬರೆದಿದೆ- ನರಕಭೀರುಗಳು ಮಂಗಳಸ್ನಾನವನ್ನು ಮಾಡಬೇಕು.
ಅಪಾಮಾರ್ಗಾಮಾಥೋ ತುಂಬೀಂ ಪ್ರಪುನ್ನಾಟಮಥಾಪರಮ್
ಭ್ರಾಮಯೇತ್ ಸ್ನಾನಮಧ್ಯೇ ತು ನರಕಸ್ಯ ಕ್ಷಯಾಯ ವೈ|| ಪ.ಪು.
ಅಪಾಮಾರ್ಗ, ತುಂಬೀ ಹಾಗೂ ಚಕ್ರಮರ್ದ ಇವು ಮೂರನ್ನೂ ಸ್ನಾನ ಮಾಡುವಾಗ ನರಕದ (ನರಕಾಸುರನ) ನಾಶಕ್ಕಾಗಿ ಶರೀರದ ನಾಲ್ಕು ಕಡೆಗೆ ನಾಲ್ಕು ಎಡೆಗಳಲ್ಲಿ ರ್ಸ³ಸಿ ತಿರುಗಿಸಬೇಕು.
ಪೂರ್ವವಿದ್ದ ಚತುರ್ದಶ್ಯಾಂ ಕಾರ್ತಿಕಸ್ಯ ಸಿತೇ ಕರೇ | ಪಕ್ಷೇ ಪ್ರತ್ಯೂಷಸಮಯೇ ಸ್ನಾನಂ ಕುರ್ಯಾತ್ ಪ್ರಯತ್ನತಃ|| ಎನ್ನುವ ಸ್ಮೃದರ್ಪಣದ ಮಾತಿನಂತೆ ತ್ರಯೋದಶೀವಿದ್ಧ ಚತುರ್ದಶಿಯಂದು ಅಭ್ಯಂಗವನ್ನು ಮಾಡಬೇಕು.
ತತಃ ಪ್ರದೋಷಸಮಯೇ ದೀಪಾನ್ ದದ್ಯಾನ್ಮನೋರಮಾನ್| ಬ್ರಹ್ಮ ವಿಷ್ಣು ಶಿವಾದೀನಾಂ ಭವನೇಷು ಮಠೇಷು ಚ|| ಸ್ಕ.ಪು.
ಬ್ರಾಹ್ಮೇ ಅಮಾವಾಸ್ಯಾಚತುರ್ದಶ್ಯೋಃ ಪ್ರದೋಷೇ ದೀಪದಾನತಃ | ಯಮಮಾರ್ಗಾಧಿಕಾರೇಭ್ಯೋ ಮುಚ್ಯತೇ ಕಾರ್ತಿಕೇ ನರಃ|| - ದಿವೋದಾಸ
ಇದೇ ದಿನ ಚತುರ್ದಶಿಯಂದು ಪ್ರದೋಷದ ಸಮಯದಲ್ಲಿ (ಸಂಜೆಗತ್ತಲಾವರಿಸಿದಾಗ) ದೀಪದಾನ ಮಾಡಬೇಕು, ಎಂದರೆ ದೀಪ ಬೆಳಗಿಸಬೇಕು. ಪ್ರದೋಷದ ಸಮಯದಲ್ಲಿ ಬ್ರಹ್ಮ-ವಿಷ್ಣು, ಮಹೇಶ್ವರರ ಗುಡಿ ದೇವಸ್ಥಾನಗಳಲ್ಲಿ ಸುಂದರವಾದ ದೀಪಗಳನ್ನು ಬೆಳಗಿಸಬೇಕು ಎಂದು ಸ್ಕಂದ ಪುರಾಣದ ವಾಕ್ಯವಿದೆ. ಕಾರ್ತಿಕ ಮಾಸದ ಅಮಾವಾಸ್ಯಾ ಹಾಗೂ ಚತುರ್ದಶಿಯಂದು ಪ್ರದೋಷ ಸಮಯದಲ್ಲಿ ದೀಪದಾನ ಮಾಡಿದರೆ ಎಂದರೆ ದೀಪ ಹಚ್ಚಿದರೆ ಮನುಷ್ಯನು ಯಮಮಾರ್ಗದ ಗಾಢಾಂಧಕಾರದಿಂದ ಮುಕ್ತನಾಗುತ್ತಾನೆ. ಹೀಗೆ ಚತುರ್ದಶಿಯಂದು ಅಭ್ಯಂಗ ಸ್ನಾನ, ದೀಪದಾನ ಮತ್ತು ತರ್ಪಣಗಳು ವಿಹಿತವಾಗಿವೆ.
ಆಶ್ವಯುಜ ಮಾಸದ ಅಮಾವಾಸ್ಯೆಯಂದು ಪ್ರಾತಃಕಾಲ ಅಭ್ಯಂಗ ಸ್ನಾನ ಮತ್ತು ಸಂಜೆ ಲಕ್ಷ್ಮೀಪೂಜೆಯು ಶಾಸ್ತ್ರವಿಹಿತವಾಗಿದೆ.
ಪ್ರತ್ಯೂಷ ಆಶ್ವಯುಗ್ದರ್ಶೆ ಕೃತಾಭ್ಯಂಗಾದಿಮಂಗಲಃ|
ಭಕ್ತಯ ಪ್ರಪೂಜಯೇದ್ದೇವಿಮಲಕ್ಷ್ಮೀವಿನಿವೃತ್ತಯೇ|| - ಕಾಲಾದರ್ಶ
ಸ್ವಾತೀಸ್ಥಿತೆ ರವಾವಿಂದುರ್ಯದಿ ಸ್ವಾತಿಗತೋಭವೇತ್| ಪಂಚತ್ವಗುದಕಸ್ನಾಯೀ ಕೃತಾಭ್ಯಂಗ ವಿಧಿರ್ನರಃ| ನೀರಾಜಿತೋ ಮಹಾಲಕ್ಷ್ಮೀಮರ್ಚಯನ್ ಶ್ರಿಮಶ್ನುತೇ | - ಪುಷ್ಕರಪುರಾಣ
ಪುಷ್ಕರ ಪುರಾಣದಲ್ಲಿ - ಸೂರ್ಯ ಹಾಗೂ ಚಂದ್ರರು ಸ್ವಾತಿ ನಕ್ಷತ್ರದಲ್ಲಿದ್ದಾಗ ಪಂಚತ್ವಚೆಯ ಜಲದಿಂದ (ಅಶ್ವತ್ಥ, ಉದುಂಬರ, ಪಕ್ಷ, ಆಮ್ರ ಹಾಗೂ ವಟ) ಅಭ್ಯಂಗ ಸ್ನಾನ ಮಾಡಿದರೆ ಆ ಮಂಗಳಸ್ನಾನ ಮಾಡಿ, ನೀರಾಜನ (ಆರತಿ) ಹಾಗೂ ಲಕ್ಷ್ಮೀ ಪೂಜೆ ಮಾಡಿ ಸಂಪತ್ತನ್ನು ಸಂಪಾದಿಸುತ್ತಾನೆ. ಭವಿಷ್ಯ ಪುರಾಣದಲ್ಲಿ ಅಮಾವಾಸ್ಯೆಯು ಸಾಯಾಹ್ನವ್ಯಾಪಿನಿಯಾದ ದಿನ ಪ್ರದೋಷ ಕಾಲದಲ್ಲಿ ಲಕ್ಷ್ಮೀ ಪೂಜೆಯನ್ನು ಹೇಳಲಾಗಿದೆ. ಎರಡೂ ದಿನವಿದ್ದಾಗ ಪರದಿನದಂದು ಆಚರಿಸಬೇಕು.
ಕಾರ್ತಿಕ ಶುಕ್ಲ ಪ್ರತಿಪದೆಯಂದು ಗೋವುಗಳ ಕ್ರೀಡೆಯನ್ನು, ಪೂಜೆಯನ್ನು ಮತ್ತು ಇದೇ ರಾತ್ರಿಯಂದು ಬಲಿಯ ಪೂಜೆಯನ್ನು ಹೇಳಲಾಗಿದೆ. ಹಬ್ಬ ಹರಿದಿನಗಳನ್ನು ಆಯಾ ದಿನವೇ ಆಚರಿಸಲು ಒಂದು ಪೌರಾಣಿಕ ಹಿನ್ನೆಲೆ ಇದ್ದೇ ಇರುತ್ತದಷ್ಟೆ. ಈ ದೀಪಾವಳಿ ಹಬ್ಬಕ್ಕೂ ಹಾಗೇ. ಬಲಿ ಚಕ್ರವರ್ತಿಯು ರಾಕ್ಷಸ ರಾಜನಾಗಿದ್ದು ಒಂದೊಮ್ಮೆ ತನ್ನ ಪರಾಕ್ರಮದಿಂದ ಸ್ವರ್ಗಲೋಕವನ್ನೂ ಗೆದ್ದ. ಆಗ ದೇವತೆಗಳೆಲ್ಲರೂ ಓಡಿ ಹೋಗಿದ್ದರಿಂದ ಸ್ವರ್ಗ ಬಿಕೋ ಎನ್ನುತ್ತಿತ್ತು. ಇದೇ ಸಂದರ್ಭದಲ್ಲಿ ಅವನು ಈಗಾಗಲೇ ಕೈಗೊಂಡಿದ್ದ ಅಶ್ವಮೇಧ ಯಜ್ಞವು ಪೂರ್ಣಗೊಳ್ಳುತ್ತಿತ್ತು. ಆಗ ದೇವತೆಗಳ ಪ್ರಾರ್ಥನೆಯಂತೆ, ಆ ಯಜ್ಞಭೂಮಿಗೆ ಬಾಲಕ ವಾಮನ ವಟು ರೂಪದಲ್ಲಿ ಬಂದ ಮಹಾವಿಷ್ಣು ಬಲಿ ಚಕ್ರವರ್ತಿಯಲ್ಲಿ ಮೂರು ಹೆಜ್ಜೆಯಷ್ಟು ಭೂಮಿಯನ್ನು ದಾನವಾಗಿ ಬೇಡಿದ. ಬ್ರಾಹ್ಮಣ ವಟುವಿನ ಭಿಕ್ಷೆಯನ್ನು ಅಲಕ್ಷಿಸಲಾಗದೇ ತಕ್ಷಣ ಬಲಿಚಕ್ರವರ್ತಿ ಮೂರು ಅಳತೆಯನ್ನು ತೋರು ಎಂದಾಕ್ಷಣ ವಾಮನ ತ್ರಿವಿಕ್ರಮನಾಗಿ ಬೆಳೆದು ನಿಂದು ಒಂದೊಂದು ಹೆಜ್ಜೆಗೆ ಒಂದೊಂದು ಲೋಕವನ್ನೇ ಅಳೆದನಂತೆ. ಮೂರನೇ ಹೆಜ್ಜೆಯಿಡಲು ತಾವಿಲ್ಲದೇ ನಿಂತವನಿಗೆ ತನ್ನ ತಲೆಯನ್ನು ತೋರಿದ ಬಲಿಯ ಅನುಪಮ ತ್ಯಾಗದ ಅಳಿಯದ ನೆನಹುಗಳು ಈ ದೀಪಾವಳಿ ಪರ್ವಾಚರಣೆಯ ಮೂಲ ಸ್ರೋತ.
ಹೀಗೆ ಮೂರನೇ ಹೆಜ್ಜೆಗೆ ಬಲಿ ಚಕ್ರವರ್ತಿಯ ತಲೆಯ ಮೇಲಿಟ್ಟ ಪಾದದಿಂದ ಅವನನ್ನು ಶಾಶ್ವತವಾಗಿ ಪಾತಾಳಕ್ಕೆ ತಳ್ಳಿದ ವಾಮನ, ಬಲಿಗೆ ಪ್ರತಿ ವರ್ಷವೂ ಕಾರ್ತಿಕ ಪಾಡ್ಯದ ಈ ದಿನ ತನ್ನ ರಾಜ್ಯವನ್ನು ನೋಡಿ ಹೋಗಲು ಅನುಮತಿ ಇತ್ತ. ಅದರಂತೆ ಸುಗ್ಗಿಯ ಈ ಸಮಯಕ್ಕೆ ಸರಿಯಾಗಿ ತಾನು ಮೊದಲು ರಾಜ್ಯಭಾರ ಮಾಡಿದ್ದ ಭೂಲೋಕವನ್ನು ನೋಡಿ ಬಲಿ ಆನಂದಿಸುವ ಕಾಲ ಇದು.
ಕೃತ್ವೈತತ್ಸರ್ವಮೇವೇಹ ರಾತ್ರೌ ದೈತ್ಯಪತೇ ರ್ಬಲೇಃ|
ಪೂಜಾಂ ಕುರ್ಯಾನ್ನೃಃ ಸಾಕ್ಷಾದ್ಭೂಮೌ ಮಂಡಲಕೇ ಶುಭೇ||
ಬಲಿಮಾಲಿಖ್ಯ ದೈತ್ಯೇಂದ್ರಂ ವರ್ಣಕೈಃ ಪಂಚರಂಗಕೈಃ|
ಗೃಹಸ್ಯ ಮಧ್ಯೆ ಶಾಲಾಯಾಂ ವಿಶಾಲಾಯಾಂ ತತೋರ್ಚಯೇತ್||
ಲೋಕೈಶ್ಚಾಪಿ ಗೃಹಸ್ಯಾಂತಃ ಶಯ್ಯಾಯಾಂ ಶುಕ್ಲತಂಡುಲೈಃ|
ಸಂಸ್ಥಾಪ್ಯ ಬಲಿರಾಜಾನಂ ಫಲೈಃ ಪುಷ್ಪಸ್ತು ಪೂಜಯೇತ್|| - ಭವಿಷ್ಯ ಪುರಾಣ
ರಾಜನು ರಾತ್ರಿಯ ಸಮಯದಲ್ಲಿ ತನ್ನ ಗೃಹದ ಮಧ್ಯದಲ್ಲಿ ಸ್ವತಃ ತಾನೇ ಬಲಿಯ ಪೂಜೆಯನ್ನು ಮಾಡಬೇಕು. ಮನೆಯ ಮಧ್ಯೆ ಐದು ವರ್ಣಗಳಿಂದ ದೈತ್ಯೇಂದ್ರನಾದ ಬಲಿಯ ಚಿತ್ರವನ್ನು ಬರೆದು ಅವನನ್ನು ಪೂಜಿಸಬೇಕು. ಇತರ ಜನರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಹಾಸು ವಸ್ತ್ರದ ಮೇಲೆ ಬಲಿಯ ಚಿತ್ರವನ್ನು ಸ್ಥಾಪಿಸಿ ಅಕ್ಕಿಯಿಂದ ಹಾಗೂ ಫಲಪುಷ್ಪಗಳಿಂದ ಬಲಿಯನ್ನು ಪೂಜಿಸಬೇಕು ಎಂದು ಪೂಜಾ ವಿಧಾನವನ್ನು ವಿವರಿಸಲಾಗಿದೆ.
ತಥಾ ಬಲಿಮುದ್ದಿಶ್ಯ ದೀಯಂತೇ ದಾನಾನಿ ಕುರು ನಂದನ|
ಯಾನಿ ತಾನ್ಯಕ್ಷಯಾಣ್ಯಾಹುರ್ಮಯೈವಂ ಸಂಪ್ರದರ್ಶಿತಮ್|
ಬಲಿಯ ಹೆಸರಿನಲ್ಲಿ ನೀಡಲ್ಪಡುವ ದಾನಗಳೆಲ್ಲ ಅಕ್ಷಯವಾಗುತ್ತವೆ ಎನ್ನುವುದು ಪುರಾಣಗಳ ಹೇಳಿಕೆ.
ಯಾ ಕುಹೂಃ ಪ್ರತಿಪನ್ಮಿಶ್ರಾ ತತ್ರ ಗಾಃ ಪೂಜಯೇನ್ನೃ|
ಪೂಜನಾತ್ತ್ರೀಣಿ ವರ್ಧಂತೇ ಪ್ರಜಾ ಗಾವೋ ಮಹೀಪತಿಃ||
ತಥಾ ಪ್ರತಿಪದ್ದರ್ಶಸಂಯೋಗೇ ಕ್ರೀಡನಂ ತು ಗವಾಂ ಮತಮ್| - ನಿರ್ಣಯಾಮೃತ
ನಿರ್ಣಯಾಮೃತದಲ್ಲಿ - ಹೇ! ರಾಜನ್! ಅಮಾವಾಸ್ಯಾ ಸಂಯುಕ್ತ ಪ್ರತಿಪದೆಯಂದು ಗೋವುಗಳ ಪೂಜೆ ಮಾಡಿದರೆ ರಾಜ್ಯ-ಪ್ರಜೆ ಹಾಗೂ ಗೋವುಗಳ ತ್ರಿವಿಧ ಕ್ಷೇಮ ಉಂಟಾಗುತ್ತದೆ. ದ್ವಿತೀಯಾ ತಿಥಿಯಂದು ಗೋಕ್ರೀಡನ (ಗೋಪೂಜೆ) ನಡೆದರೆ ಅದರಿಂದ ದೇಶದ ವಿನಾಶ ಉಂಟಾಗುತ್ತದೆ ಎಂದು ವಿಧಿ ನಿಷೇಧಗಳನ್ನು ತಿಳಿಸಲಾಗಿದೆ.
ಗವಾಂ ಕ್ರೀಡಾದಿನೇ ಯತ್ರ ರಾತ್ರೌ ದೃಶ್ಯೇತ ಚಂದ್ರಮಾಃ|
ಸೋಮ ರಾಜಾ ಪಶೂನ್ ಹಂತಿ ಸುರಭೀಃ ಪೂಜಕಾಂಸ್ತಥಾ||
ಪೂರ್ವವಿದ್ದಾ ಪ್ರಕರ್ತವ್ಯಾ ಶಿವರಾತ್ರಿರ್ಬಲೇರ್ದಿನಮ್|
ಬಲ್ಯುತ್ಸವಂಚ ಪೂರ್ವದ್ಯುರುಪವಾಸವದಾಚರೇತ್| - ಪುರಾಣಸಮುಚ್ಚಯ
ಇತ್ಯಾದಿ ಪುರಾಣ ವಚನಗಳಂತೆ ಪೂರ್ವವಿದ್ಧ (ಅಮಾವಾಸ್ಯಾಯುಕ್ತ) ಪ್ರತಿಪದೆಯಂದು ಇದನ್ನು ಆಚರಿಸಬೇಕು. (ಶಿವರಾತ್ರಿ ಹಾಗೂ ಬಲಿಪಾಡ್ಯಮಿಯನ್ನು ಪೂರ್ವವಿದ್ಧ ತಿಥಿಯಂದು ಆಚರಿಸಬೇಕು.)
ಉತ್ತರ ಕನ್ನಡ ಮತ್ತು ಕೊಂಕಣ ಪ್ರದೇಶದಲ್ಲಿ ಈ ಹಬ್ಬವನ್ನು ದೊಡ್ಡ ಹಬ್ಬ ಎಂದೇ ಕರೆಯುತ್ತಾರೆ. ಏಕೆಂದರೆ ಈ ಹಬ್ಬದಲ್ಲಿಯೇ ರೈತರು ತಮ್ಮ ಆಯುಧಗಳಿಗೆ, ಮನೆಯ ಹೊಸ್ತಿಲು ಬಾಗಿಲು, ತುಳಸಿ ಕಟ್ಟೆ, ವಾಹನಗಳು, ಮತ್ತು ಮುಖ್ಯವಾಗಿ ಗೋವುಗಳಿಗೆ ಪೂಜೆ ಮಾಡುವ ಹಬ್ಬ ಇದಾಗಿದೆ. ಕೃಷಿಕರ ಸಂಭ್ರಮದ ಹಬ್ಬವಿದು. ಒಂದು ಬಿದಿರಿನ ಬುಟ್ಟಿಯಲ್ಲಿ ಸೌತೆಕಾಯಿಯನ್ನು ಇಟ್ಟು ಅದಕ್ಕೇ ಬಿಳಿ ಮತ್ತು ಕೆಂಪು ಬಣ್ಣದ ಮಣ್ಣಿನ ನಾಮ ಬಳಿದು ಸಿಂಗರಿಸಿ ದೇವರ ಮುಂದೆ ಇಡುತ್ತಾರೆ. ಇದು ಬಲಿಯ ಪ್ರತೀಕ. ಹಬ್ಬದ ದಿನ ವಿಶೇಷವಾಗಿ ಕಡುಬು, ವಡೆ ಮತ್ತು ಹೋಳಿಗೆಯನ್ನು ಮಾಡಿ ನೈವೇದ್ಯ ಮಾಡುತ್ತಾರೆ. ಹೊಸ ಭತ್ತದ ಕದಿರನ್ನು ಕೊಯ್ದು ತಂದು ಅದನ್ನೂ ಪೂಜೆ ಮಾಡುತ್ತಾರೆ.
ಬಲಿ ಪಾಡ್ಯಮಿಯ ದಿನ ಗೋವುಗಳಿಗೆ ವಿಶೇಷವಾದ ಪೂಜೆ ಸಲ್ಲುತ್ತದೆ. ಅವುಗಳಿಗೆ ಸ್ನಾನ ಮಾಡಿಸಿ, ಅಲಂಕಾರ- ಆರತಿ ಮಾಡಿ, ಅಡಿಕೆ ದಂಡೆ ಕಟ್ಟಿ ನೈವೇದ್ಯ ತಿನ್ನಿಸಿ ಅವುಗಳನ್ನು ಮೇಯಲು ಬಿಡುತ್ತಾರೆ. ರಾತ್ರಿ ಮನೆಗೆ ಬಂದ ಗೋವುಗಳಿಗೆ ಪುನಃ ದೃಷ್ಟಿ ತೆಗೆದು ಒಳ ಬರಮಾಡಿಕೊಳ್ಳುತ್ತಾರೆ. ಮತ್ತೆ ಆರತಿ ಮಾಡಿ ಅವುಗಳ ದಂಡೆ ಬಿಚ್ಚುತ್ತಾರೆ. ಪೂಜೆಯ ಪ್ರತಿಯೊಂದು ಹಂತದಲ್ಲಿಯೂ ಹಳ್ಳಿಯ ಹೆಂಗಸರ ಸುಂದರ ಅರ್ಥಭರಿತ ಹಾಡು ಈ ಹಬ್ಬದಲ್ಲಿ ಅತ್ಯಂತ ಖುಷಿ ಕೊಡುವ ಸಂಗತಿ. ರಾತ್ರಿ ಮನೆಯ ಸುತ್ತಲೂ ಮತ್ತು ದಾರಿಯಲ್ಲಿ ದೀಪ ನೆಟ್ಟು ಬಲಿಯನ್ನು ಕಳುಹಿಸಿಕೊಡುತ್ತಾರೆ. ಮುಂದಿನ ವರುಷ ಮತ್ತೆ ಬಾ ಎಂದು ಮನೆಯ ಮಕ್ಕಳು ಕೂಗಿ ಹೇಳುತ್ತಾರೆ. ಬಿಂಗಿ ಎಂದು ಕರೆಯುವ ಒಂದು ಗುಂಪು ಮನೆ ಮನೆಗೆ ತೆರಳಿ ಜಾನಪದ ಮಟ್ಟಿನ ಪದ್ಯಗಳನ್ನು ಹಾಡುತ್ತಾರೆ.
ತಮಿಳುನಾಡಿನಲ್ಲಿ ಬಲಿಗೆ ಸೆಗಣಿಯ ಕೋಟೆ ಕಟ್ಟಿ ಅದಕ್ಕೆ ಕೇಸರಿ ಬಣ್ಣದ ಹೂವುಗಳನ್ನು ಹಾಕಿ ಸಿಂಗರಿಸುವ ಪದ್ಧತಿ ಇದೆ. ದಕ್ಷಿಣ ಕರ್ನಾಟಕದಲ್ಲಿ ಸಿಹಿಯನ್ನು ವಿನಿಮಯ ಮಾಡಿಕೊಳ್ಳುವುದು, ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು ಪಟಾಕಿ ಹಚ್ಚಿ ಸಂಭ್ರಮಿಸುವ ದಿನವಾಗಿ ಕಾಣುತ್ತದೆ. ಅಂಗಡಿ ಮಂಗಟ್ಟುಗಳವರು ಅಮಾವಾಸ್ಯೆಯ ಲಕ್ಷ್ಮೀ ಪೂಜೆಯನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸುತ್ತಾರೆ. ಅಂದಿನಿಂದ ಲೆಕ್ಕಪತ್ರಗಳನ್ನು ಹೊಸದಾಗಿ ಪ್ರಾರಂಭ ಮಾಡುತ್ತಾರೆ. ಅದರಲ್ಲಿಯೂ ಉತ್ತರ ಮತ್ತು ಮಧ್ಯ ಭಾರತದವರು ಲಕ್ಷ್ಮೀ ಪೂಜೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.
ದೀಪಾವಳಿಯ ಐದನೇ ದಿನ ಕಾರ್ತಿಕ ದ್ವಿತೀಯ ಅಥವಾ ಸೋದರ ಬಿದಿಗೆ / ಭ್ರಾತೃದ್ವಿತೀಯಾ ಎಂದು ಆಚರಿಸಲಾಗುತ್ತದೆ. ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇರುವುದರಿಂದ, ಬಹುತೇಕ ಸಹೋದರರು ಎಲ್ಲೇ ಇದ್ದರೂ ಈ ದಿನ ತಮ್ಮ ಸಹೋದರಿಯರ ಮನೆಗೆ ಭೇಟಿ ನೀಡುತ್ತಾರೆ. ಹಾಗೆ ಮನೆಗೆ ಬಂದ ಸಹೋದರನಿಗೆ, ಸಹೋದರಿಯು ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುವ ಸಂಪ್ರದಾಯವಿದೆ. ಇನ್ನು ಮಹಾರಾಷ್ಟ ಮತ್ತು ಅನೇಕ ಉತ್ತರ ಭಾರತದ ರಾಜ್ಯಗಳಲ್ಲಿ ಇದೇ ಹಬ್ಬವನ್ನು ಭಾಯಿ ದೂಜ್ ಎಂದು ಕರೆದು ಸಹೋದರನನ್ನು ಸತ್ಕರಿಸುವ ಸಂಪ್ರದಾಯವಿದೆ. ದೀಪಾವಳಿ ಹಬ್ಬದ ಎರಡನೇ ದಿನದಿಂದ ಆರಂಭಿಸಿ, ಕಾರ್ತಿಕ ಮಾಸವಿಡೀ ತಮ್ಮ ಮನೆಗಳ ಮುಂದೆ ದೀಪದ ಹಣತೆಗಳನ್ನು ಹಚ್ಚಿ ಇಡುತ್ತಾರೆ. ಈಗೆಲ್ಲಾ ಬಗೆಬಗೆಯ ವಿದ್ಯುತ್ ದೀಪಾಲಂಕಾರಗಳು, ದೀಪದ ಬುಟ್ಟಿಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ.
ಈ ಹಬ್ಬದ ವಿಶೇಷವೆಂದರೆ ಜೈನರು, ಬೌದ್ಧರು ಮತ್ತು ಸಿಕ್ಖರೂ ಕೂಡ ಈ ಹಬ್ಬವನ್ನು ಆಚರಿಸುತ್ತಾರೆ. ಅದರಲ್ಲಿಯೂ ಗುಜರಾತ್ ಮತ್ತು ರಾಜಸ್ಥಾನದ ವ್ಯಾಪಾರಿಗಳಿಗೆ ಧನ್ ತೇರಸ್ ಮತ್ತು ಲಕ್ಷ್ಮೀ ಪೂಜೆ ಮತ್ತೂ ಮಹತ್ವದ್ದು. ಅವರಲ್ಲಿ ಕಡ್ಡಾಯವಾಗಿ ಹೊಸ ಬಟ್ಟೆ ತೊಡುವ ಮತ್ತು ಸಿಹಿಯನ್ನು ಮಾಡಿ ಹಂಚುವ ಸಂಪ್ರದಾಯವಿದೆ. ಇದಕ್ಕಾಗಿ ಹೆಂಗಸರು ಒಂದು ತಿಂಗಳಿನಿಂದ ತಯಾರಿ ನಡೆಸಿರುತ್ತಾರೆ. ಪಟಾಕಿಯನ್ನಂತೂ ಕಡ್ಡಾಯವಾಗಿ ದೊಡ್ಡವರು ಮಕ್ಕಳೂ ಎಲ್ಲರೂ ಹಚ್ಚುತ್ತಾರೆ.
ಕೊನೆಯ ದಿನವನ್ನು ದೀಪಾವಳಿ ಎಂದು ಆಚರಿಸುವ ಸಂಪ್ರದಾಯವಿದೆ. ಮೂರು ದಿನಗಳ ಈ ಹಬ್ಬದಲ್ಲಿ ವಿವಿಧ ಧಾರ್ವಿುಕ ಆಚರಣೆಗಳಿದ್ದರೂ ಇದನ್ನು ದೀಪಾವಳಿ ಎಂದೇ ಕರೆಯುತ್ತೇವೆ. ಇದಕ್ಕೆ ಕಾರಣ ದೀಪ.
ಇಷಾಸಿತಚತುರ್ದಶ್ಯಾಮಿಂದುಕ್ಷಯತಿಥಾವಪಿ| ಊರ್ಜಾದೌ ಸ್ವಾತಿ ಸಂಯುಕ್ತೇ ತದಾ ದೀಪಾವಲೀ ಭವೇತ್|| ಕುರ್ಯಾತ್ಸಂಲಗ್ನಮೇತಚ್ಚ ದೀಪೋತ್ಸವದಿನತ್ರಯಮ್ ದೀಪೈರ್ನೀರಾಜನಾದತ್ರ ಸೈಷಾ ಪಾದೀಪಾವಲೀ ಸ್ಮ ೃಾ|| - ಮತ್ಸ್ಯ ಪುರಾಣ
ದೀಪಾವಳಿ ಎಂದರೆ ದೀಪಗಳ ಸಾಲು ಎಂದರ್ಥ. ಪ್ರತಿ ಹಬ್ಬದಲ್ಲೂ, ಅದೇಕೆ, ಪ್ರತಿ ದಿನವೂ ಸಹ ದೀಪವನ್ನು ಬೆಳಗಿಸುತ್ತೇವೆ. ದೀಪಕ್ಕೆ ಧಾರ್ವಿುಕ ಆಚರಣೆಯಲ್ಲಿ ವಿಶಿಷ್ಟ ಸ್ಥಾನವಿದೆ. ದೀಪ ಎಂದರೆ ತಾನೂ ಬೆಳಗಿ ಬೇರೆಯವರನ್ನು ಬೆಳಗಿಸುವುದು ಎಂದರ್ಥ. (ದೀಪಯತಿ ಸ್ವಂ ಪರಂ ಚ ಇತಿ ದೀಪಃ) ದಿನವೂ ದೀಪ ಬೆಳಗಿದರೆ ದೀಪಾವಳಿಯಲ್ಲ. ಆದರೆ ಕಾರ್ತಿಕ ಮಾಸದಲ್ಲಿ ಬೆಳಗುವ ದೀಪಕ್ಕೆ ತುಂಬಾ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ಭಕ್ತಿಯಿಂದ ದೀಪ ಬೆಳಗಿಸಿ ಅರ್ಪಿಸಿದರೆ ಇಹಲೋಕ ಪರಲೋಕಗಳಲ್ಲೂ ಸಹ ಅಪಾರ ಪುಣ್ಯ ಪ್ರಾಪ್ತಿ ಎಂದು ಪುರಾಣಗಳು ಸಾರಿ ಹೇಳುತ್ತವೆ.
ತಾವರ್ದYಂತಿ ಪುಣ್ಯಾನಿ ಸ್ವರ್ಗೆ ಮರ್ತಯ ರಸಾತಲೇ|
ಯಾವತ್ತು ಜ್ವಲತೇ ದೀಪಃ ಕಾರ್ತಿಕೇ ಕೇಶವಾಗ್ರತಃ|| - ಪದ್ಮ ಪುರಾಣ
ಇನ್ನು ಕಾರ್ತಿಕ ಮಾಸದಲ್ಲಿ ದೀಪದಾನ ಮಾಡುವುದರಿಂದ ಪಿತೃಗಳಿಗೆ ನರಕದಿಂದ ಮುಕ್ತಿ ಎನ್ನುವುದು ಪುರಾಣದ ಸಾರ.
ದೀಪಂ ದಾಸ್ಯಂತಿ ಯೇ ಪುತ್ರಾಸ್ತುಷ್ಟ್ಯರ್ಥಂ ಚಕ್ರಪಾಣಿನಃ|
ಕಾರ್ತಿಕೇ ತೈಮುನಿಶ್ರೇಷ್ಠ ನರಕಾದುದ್ಧೃಾ ವಯಮ್| - ಪದ್ಮ ಪುರಾಣ
ಕಾರ್ತಿಕ ಮಾಸದಲ್ಲಿ ವಿಷ್ಣು ಪ್ರೀತಿಕರವಾದ ದೀಪದಾನದಿಂದ ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಏಕಾದಶಿಯಂದು ಉಪವಾಸ ಮಾಡಿ ವಿಷ್ಣುವಿಗೆ ಗಂಧ, ಧೂಪ, ದೀಪಗಳನ್ನು ಸಮರ್ಪಿಸಿದರೆ ತಾಮಿಸ್ರನರಕದಿಂದ ಮುಕ್ತಿ. ಈ ಪ್ರಕಾರವಾಗಿ ಆಚರಿಸಿ ಬಲಿರಾಜನು ವಿಷ್ಣು ಲೋಕವನ್ನು ಸೇರಿದನು ಎಂದು ವಾಮನ ಪುರಾಣದಲ್ಲಿ ಹೇಳಲಾಗಿದೆ.
ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ಸಾಯಂಕಾಲ ಆಕಾಶ ದೀಪ ಬೆಳಗಿಸುವುದು ಶ್ರೇಯಸ್ಕರ ಎನ್ನುವುದು ಧಾರ್ವಿುಕ ನಂಬಿಕೆ. ಕಾರ್ತಿಕ ಮಾಸ ಆರಂಭವಾಗುವುದು ಗೋಪಾಡ್ಯಮಿಯಂದು. ಆದ್ದರಿಂದ ಅದನ್ನು ದೀಪಾವಳಿಯೆಂದು ಆಚರಿಸುತ್ತೇವೆ. ಅಂದಿನಿಂದ ಆರಂಭಿಸಿ ಒಂದು ತಿಂಗಳು ಅಂದರೆ ಕಾರ್ತಿಕ ಮಾಸ ಮುಗಿಯುವವರೆಗೂ ಮನೆಗಳಲ್ಲಿ ದಿನವೂ ದೀಪ ಬೆಳಗಿಸುತ್ತಾರೆ. ಹೀಗೆ ದೀಪಗಳಿಂದ ದೇವನನ್ನು ಆರಾಧಿಸುವ ಹಬ್ಬ ದೀಪಾವಳಿ.
ರಾಜ್ಯ-ಮತ-ಬಡವ-ಶ್ರೀಮಂತ ಭೇದವಿಲ್ಲದೇ ಸಮಸ್ತರೂ ಇದರ ಆಚರಣೆ ಮರೆಯುವುದಿಲ್ಲ. ಕಾರ್ತಿಕ ಮಾಸದ ಆರಂಭವೆಂದರೆ ದಕ್ಷಿಣಾಯನ ಕಾಲ ಮುಗಿಯುತ್ತಾ ಬರುವ ಕಾರಣ ಆ ದಿನಗಳಲ್ಲಿ ಹಗಲು ಕಡಿಮೆ. ದೀರ್ಘರಾತ್ರಿಯ ಸಮಯಗಳು ಅವು. ಅಲ್ಲದೇ ಶೀತಕಾಲದ ಆರಂಭವೂ ಆಗಿರುತ್ತದೆ. ಈ ಋತುಮಾನಕ್ಕನುಗುಣವಾಗಿ ಎಣ್ಣೆ ಸ್ನಾನ ಹಾಗೂ ದೀಪ ಬೆಳಗುವುದು ವೈಜ್ಞಾನಿಕವಾಗಿಯೂ ಮಹತ್ತ್ವದ್ದು. ಈ ಸಮಯ ಶತ್ರುವಿನಾಶವನ್ನು ನೆನಪಿಸುವ ಕಾಲ. ಈ ದಿನದಂದೇ ಶ್ರೀರಾಮ ಅಯೋಧ್ಯೆಗೆ 14 ವರ್ಷಗಳ ವನವಾಸ ಮತ್ತು ರಾವಣ ವಧೆ ಮುಗಿಸಿ ತೆರಳಿದ ಎಂದು ಪ್ರತೀತಿ. ಆದ್ದರಿಂದ ಅಯೋಧ್ಯೆಯ ಜನ ಇಡೀ ಮಾರ್ಗಗಳ ತುಂಬೆಲ್ಲ ಎಣ್ಣೆಯ ದೀಪ ಹಚ್ಚಿ ಶ್ರೀರಾಮನನ್ನು ಸ್ವಾಗತಿಸಿದರಂತೆ. ಸಿಹಿ ತಿನ್ನಿಸಿ ಸಂಭ್ರಮಿಸಿದರಂತೆ. ಅದರ ನೆನಪಿನಲ್ಲಿ ಅವತ್ತು ಎಲ್ಲ ಭಾರತೀಯರು ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲ ಕಾರ್ವಿುಕರನ್ನು ಹಾಗೂ ಕೆಲಸಗಾರರನ್ನು ಸ್ಮರಿಸಿ ಅವರಿಗೆ ಉಡುಗೊರೆ, ಸಿಹಿ ನೀಡಿ ಕೃತಜ್ಞತೆ ಅರ್ಪಿಸುವ ಪರಿಪಾಠ ಇತ್ತೀಚೆಗೆ ಕಾರ್ಯಕ್ಷೇತ್ರಗಳಲ್ಲಿ ಸಾಮಾನ್ಯವಾಗಿದೆ.
ಯಾವ ಚಿತ್ಶಕ್ತಿಯದು
ಸೂರ್ಯನಲಿ ಬೆಳಕಾಗಿ
ತಾರೆಯಲಿ ಹೊಳಪಾಗಿ
ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ,
ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ
ಹರಿಯುತಿರೆ, ಕಿರಿಹಣತೆ ಕಿರಿದಾದರೇನು?
ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು?
ಎಂಬ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲುಗಳಂತೆ ಎಷ್ಟೇ ಕಷ್ಟ ದುಃಖ ದುಮ್ಮಾನಗಳಿದ್ದರೇನು, ವರುಷಕ್ಕೊಮ್ಮೆ ಬರುವ ಈ ಬೆಳಕಿನ ಹಬ್ಬದ ಕಿರುಹಣತೆಯ ಸೊಡರಿನ ಬೆಳಕು ಅಜ್ಞಾನದ ದುಃಖದ ಕತ್ತಲೆಯನ್ನು ದೂರ ಮಾಡಲಿ.