ಉಳುತ್ತಿರುವವರಿಗೇ ಡೀಮ್ಡ್​ ಭೂಮಿ; 6 ಲಕ್ಷ ಹೆಕ್ಟೇರ್ ಭೂಮಿ ಕಂದಾಯ ಇಲಾಖೆಗೆ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿಗೆ

Vidhana Soudha vvani
Published on

ಬೆಂಗಳೂರು: ರಾಜ್ಯದ 9 ಲಕ್ಷ ಹೆಕ್ಟೇರ್ ಡೀಮ್್ಡ ಅರಣ್ಯದಲ್ಲಿ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿದ್ದು, ಈಗಾಗಲೇ ಈ ಭೂಮಿಯಲ್ಲಿ ಉಳುಮೆ ಮಾಡುತ್ತಿರುವವರಿಗೆ ಹಾಗೂ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಹಂಚಿಕೆ ಮಾಡಲು ಸರ್ಕಾರ ತೀರ್ವನಿಸಿದೆ. ಕಂದಾಯ ಸಚಿವ ಆರ್. ಅಶೋಕ್ ಸೋಮವಾರ ವಿಧಾನಸಭೆಯಲ್ಲಿ ಈ ವಿಷಯ ತಿಳಿಸಿದರು. ಪ್ರಶ್ನೋತ್ತರ ವೇಳೆ ಬಿಜೆಪಿಯ ಲಾಲಾಜಿ ಆರ್. ಮೆಂಡನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 6 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆ ವಶಕ್ಕೆ ಪಡೆಯುವ ಸಂಬಂಧ ಶೀಘ್ರವೇ ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರವನ್ನು ಸಲ್ಲಿಸಲಾಗುವುದು, ಈ ವಿಚಾರವಾಗಿ ಈಗಾಗಲೇ ಅರಣ್ಯ ಸಚಿವರೊಂದಿಗೆ ಸಭೆ ನಡೆಸಲಾಗಿದ್ದು, ಸರ್ಕಾರ ಭೂಮಿಯನ್ನು ಬಿಟ್ಟುಕೊಡಲು ಮುಕ್ತ ಮನಸ್ಸಿನಿಂದಿದೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಅಧಿಕಾರಿಗಳು 9 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್್ಡ ಫಾರೆಸ್ಟ್ ಎಂದು ಮಾಡಿಬಿಟ್ಟಿದ್ದಾರೆ. ಇದೀಗ ಡೀಮ್್ಡ ಅರಣ್ಯದಿಂದ ಕಂದಾಯ ಇಲಾಖೆಗೆ ಬಿಡಿಸಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಈಗಾಗಲೇ ಉಳುಮೆ ಮಾಡುತ್ತಿರುವವರಿಗೆ ಹಾಗೂ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಭೂಮಿ ಹಂಚಿಕೆ ಮಾಡುತ್ತೇವೆ. ಆದ್ದರಿಂದ ಇಂತಹ ಲಕ್ಷಾಂತರ ಜನರನ್ನು ಒಕ್ಕಲೆಬ್ಬಿಸುವ ಪ್ರಮೇಯ ಬರುವುದಿಲ್ಲವೆಂದು ಅಶೋಕ್ ತಿಳಿಸಿದರು. ಇದಕ್ಕೂ ಮುನ್ನ ಜೆಡಿಎಸ್​ನ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ ಸುಪ್ರಿಂಕೋರ್ಟ್​ಗೆ ಬಡವರ ಬಗ್ಗೆ ಕರುಣೆಯೇ ಇಲ್ಲ ಎಂದರು. ಹಾಗೆಯೇ ಗ್ರಾಮಾಂತರ ಪ್ರದೇಶದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ವಿುಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು 94ಸಿ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ 30/40, 40/60ಕ್ಕಿಂತ ಹೆಚ್ಚಿನ ಜಾಗವನ್ನು ಮಂಜೂರು ಮಾಡಿಕೊಡಬೇಕೆಂದು ಜೆಡಿಎಸ್​ನ ಲಿಂಗೇಶ್ ಹಾಗೂ ಸ್ಪೀಕರ್ ಸಚಿವರಿಗೆ ಮನವಿ ಮಾಡಿದರು.

ಬಗರ್​ಹುಕುಂ ಸಮಸ್ಯೆ ಇತ್ಯರ್ಥ: ಹೊಸ ತಾಲೂಕು ರಚನೆಯಾದ ಬಳಿಕ ಬಗರ್ ಹುಕುಂ ಸಾಗುವಳಿ ಅರ್ಜಿಗಳನ್ನು ವಿಭಜಿತ ತಾಲೂಕಿನಿಂದ ವರ್ಗಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ಭರವಸೆ ನೀಡಿದರು. 50 ಹೊಸ ತಾಲೂಕು ಘೊಷಣೆಯಾಗಿದ್ದು, ಇಂತಹ ಕಡೆ ಸಮಸ್ಯೆಯಾಗಿದೆ. ಅದನ್ನು ಬಗೆಹರಿಸಲು ಸೂಚಿಸಲಾಗುತ್ತದೆ. ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿರುವ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆ ಅಡಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 156 ವಿಧಾನಸಭಾ ಕ್ಷೇತ್ರಗಳಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳನ್ನು ರಚಿಸಲಾಗಿದೆ. ಈ ಪೈಕಿ 33 ವಿಧಾನಸಭಾ ಕ್ಷೇತ್ರಗಳು ನಿರ್ಬಂಧಿತ ವ್ಯಾಪ್ತಿಯೊಳಗೆ ಬರುವುದರಿಂದ ಬಗರ್ ಹುಕುಂ ಸಾಗುವಳಿ ಸಮಿತಿ ರಚಿಸಲು ಅವಕಾಶ ಇಲ್ಲ. ಉಳಿದ 35 ಕಡೆ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net