

ಕೋಲಾರ: "ರಾಷ್ಟ್ರನಾಯಕರಿಗೆ ಸಂಸತ್ನಲ್ಲಿ ಗೌರವ ಸಮರ್ಪಣೆ'' ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕದಿಂದ ಕೋಲಾರದ ಎಂ. ಸ್ಫೂರ್ತಿ ಆಯ್ಕೆಯಾಗಿದ್ದು, ನಾಳೆ(ನ.19) ಸಂಸತ್ನಲ್ಲಿ ಭಾಷಣ ಮಾಡಲಿದ್ದಾರೆ.
ಶಿಕ್ಷಣ ಸಚಿವಾಲಯ, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವಾಲಯ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಸಂಸದೀಯ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿವೆ.
ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್.ಮುರಳೀಧರ್ ಮತ್ತು ಎಸ್.ಎನ್. ವಾಣಿಶ್ರೀ ದಂಪತಿಯ ಪುತ್ರಿ ಸ್ಫೂರ್ತಿ ಪ್ರಸ್ತುತ ಬೆಂಗಳೂರಿನ ಬಿಎಂಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ನೆಹರು ಯುವ ಕೇಂದ್ರ ಸಂಘಟನೆ ಆಯೋಜಿಸಿದ್ದ 2021-22ನೇ ಸಾಲಿನ ಯೂತ್ ಪಾಲಿರ್ಮೆಂಟ್ ಸ್ಪರ್ಧೆಯಲ್ಲಿ ವಿಜೇತೆಯಾಗಿರುವ ಸ್ಫೂರ್ತಿ ನ.19ರಂದು ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆಯಲ್ಲಿ ಭಾಷಣ ಮಾಡಲಿದ್ದಾರೆ. ದೇಶದ ವಿವಿಧ ರಾಜ್ಯಗಳ ಯುವ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿರುವ ಈ ಕಾರ್ಯಕ್ರಮದಲ್ಲಿ ಸ್ಫೂರ್ತಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.