

ನವದೆಹಲಿ: ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಪ್ರವೇಶ ಹಾಗೂ ಅರ್ಹತಾ ಪರೀಕ್ಷೆ (ನೀಟ್) ಹಾಗೂ ವೃತ್ತಿಪರ ಕೋರ್ಸ್ಗಳ ಜಾಯಿಂಟ್ ಎಂಟ್ರೆನ್ಸ್ ಟೆಸ್ಟ್ ( ಜೆಇಇ-ಮೇನ್) ಭವಿಷ್ಯ ಶುಕ್ರವಾರ (ಜು.3) ನಿರ್ಧಾರವಾಗಲಿದೆ.
ಜೆಇಇ ಮೇನ್ ಪರೀಕ್ಷೆ ಜುಲೈ 18-23ರವರೆಗೆ ಹಾಗೂ ನೀಟ್ ಜುಲೈ 26 ರಂದು ನಿಗದಿಯಾಗಿದೆ. ಕೋವಿಡ್ ಪ್ರಕರನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳು ನಡೆಯುತ್ತವೆಯೋ ಇಲ್ಲವೋ ಎಂಬ ಬಗ್ಗೆ ಹೆಚ್ಚು ಪ್ರಶ್ನೆ, ಸಂಶಯಗಳು ಉದ್ಭವವಾಗಿವೆ.
ಈ ಪರೀಕ್ಷೆಗಳನ್ನು ಆಯೋಜಿಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕಾರಿಗಳು ಸೇರಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು, ಶುಕ್ರವಾರದೊಳಗೆ ವರದಿ ನೀಡಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.
ಜುಲೈನಲ್ಲಿ ಎರಡೂ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವೇ ಎಂಬ ಪ್ರಶ್ನೆಯೂ ಎದುರಾಗಿದೆ. ಈ ನಡುವೆ, ಬಾಕಿ ಉಳಿದಿದ್ದ ಸಿಬಿಎಸ್ಸಿ ಹಾಗೂ ಐಸಿಎಸ್ಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಹೀಗಾಗಿ ಈ ಪ್ರವೇಶ ಪರೀಕ್ಷೆಗಳು ನಡೆಯುತ್ತವೆ ಎಂಬ ಅನುಮಾನ ವ್ಯಕ್ತವಾಗಿದೆ.
ಪಾಲಕರು, ವಿದ್ಯಾರ್ಥಿಗಳ ಮನವಿ ಹಾಗೂ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ಶುಕ್ರವಾರದೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಪೋಖ್ರಿಯಾಲ್ ಹೇಳಿದ್ದಾರೆ. ವರದಿ ಮೇಲೆಯೇ ಇವೆರಡು ಪರೀಕ್ಷೆಗಳ ಭವಿಷ್ಯ ನಿರ್ಧಾರವಾಗುವುದಂತೂ ಖಚಿತ.