ಕ್ಷೇತ್ರ ಪುನರ್ ವಿಂಗಡಣೆಗೆ ನಿರ್ಧಾರ; ತಾಪಂ, ಜಿಪಂ ಚುನಾವಣೆ; ಸೀಮಾ ನಿರ್ಣಯ ಆಯೋಗ ರಚನೆಗೆ ಮುನ್ನುಡಿ

State assembly 2
ವಿಧಾನಸಭೆಯಲ್ಲಿ ಮಂಗಳವಾರ ಕಲಾಪ ವಿರಾಮ ವೇಳೆ ಸಚಿವರು ಹಾಗೂ ಶಾಸಕರ ಸಮಾಲೋಚನೆ.
Published on

ಬೆಂಗಳೂರು: ಕರ್ನಾಟಕ ಪಂಚಾಯತ್​ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ 2021 ಅನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದೆ. ಪ್ರಸ್ತುತ ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಜವಾಬ್ದಾರಿ ರಾಜ್ಯ ಚುನಾವಣೆ ಆಯೋಗದ್ದು. ಮುಂದಿನ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಪೂರಕವಾಗಿ ಆಯೋಗವು ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಕ್ಷೇತ್ರದ ಸಂಖ್ಯೆ ಹೆಚ್ಚಿಸಿತ್ತು. ಆದರೆ, ಈ ಪುನರ್ ವಿಂಗಡಣೆ ಕಾರ್ಯ ಸರಿಯಾಗಿ ನಡೆದಿಲ್ಲ ಎಂದು ಶಾಸಕರನೇಕರು ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಪ್ರಕರಣ ಮತ್ತು ನ್ಯಾಯಾಲಯದ ತೀರ್ಪನ್ನು ಮುಂದಿಟ್ಟುಕೊಂಡು ಸರ್ಕಾರ ಕಾನೂನು ತಿದ್ದುಪಡಿ ಮಾಡುವ ಮೂಲಕ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಗೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿಧೇಯಕ ಮಂಡಿಸಿದೆ.

ಆಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಅಥವಾ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿಯನ್ನು ನೇಮಿಸು ವುದು, ಗ್ರಾಮೀಣಾಭಿವೃದ್ಧಿ- ಪಂಚಾಯತ್ ರಾಜ್ ಇಲಾಖೆ ನಿವೃತ್ತ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರದ ತಜ್ಞರು ಸದಸ್ಯರಾಗಿರುತ್ತಾರೆ. ಪಂಚಾಯತ್​ರಾಜ್ ಇಲಾಖೆ ಆಯುಕ್ತರು ಪದನಿಮಿತ್ತ ಸದಸ್ಯರಾಗಿದ್ದು, ನಿರ್ದೇಶಕರು ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಆಯೋಗದ ಕೆಲಸವೇನು?: ಹಿಂದಿನ ಜನಗಣತಿಯಲ್ಲಿ ಖಚಿತಪಡಿಸಿದ ಜನಸಂಖ್ಯೆ ಆಧಾರದ ಮೇಲೆ ಪ್ರತಿಯೊಂದು ಗ್ರಾಪಂ, ತಾಪಂ ಮತ್ತು ಜಿಪಂಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲು ಆಯೋಗ ಶಿಫಾರಸು ಮಾಡಲಿದೆ. ಜತೆಗೆ ವಾರ್ಡ್ ಅಥವಾ ಕ್ಷೇತ್ರಗಳನ್ನಾಗಿ ವಿಂಗಡಿಸಲೂ ಶಿಫಾರಸು ಮಾಡುವುದು. ಪ್ರತಿಯೊಂದು ಗ್ರಾಪಂ ಅಥವಾ ತಾಪಂ ಅಥವಾ ಜಿಪಂ ವಾರ್ಡ್​ಗಳ ಅಥವಾ ಕ್ಷೇತ್ರ ಗಡಿಗಳನ್ನು ನಿರ್ಧರಿಸುವುದಕ್ಕಾಗಿ ಶಿಫಾರಸುಗಳನ್ನು ಮಾಡಲಿದೆ. ಸಾಕ್ಷಿಗಳಿಗೆ ಸಮನ್ಸ್ ನೀಡುವುದು, ಯಾವುದೇ ಸರ್ಕಾರಿ ಕಚೇರಿಯಿಂದ ಸಾರ್ವಜನಿಕ ದಾಖಲೆ ಹಾಜರುಪಡಿಸಲು ಆಜ್ಞೆ ಮಾಡಲು ಅವಕಾಶ ಕೊಡಲಾಗುತ್ತಿದೆ.

ತಮಿಳುನಾಡು ಪ್ರಕರಣ: ಡಿಎಂಕೆ, ರಾಜ್ಯಪಾಲರ ಸಚಿವಾಲಯ ಕಾರ್ಯದರ್ಶಿ ಮತ್ತು ಇತರ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ಮಹತ್ವದ ನಿರ್ದೇಶನ ನೀಡಿದೆ. ಸೀಮಾ ನಿರ್ಣಯ ಮಾಡುವಾಗ ಜನಸಂಖ್ಯೆ ಹಾಗೂ ಕ್ಷೇತ್ರದ ನಡುವಿನ ಅನುಪಾತವನ್ನು ನಿರ್ವಹಿಸುವ ಉದ್ದೇಶವು ಯಾವುದೇ ಸಂಶೋಧನೆ ಅಥವಾ ಪ್ರಸ್ತಾವನೆ ಇಲ್ಲದೆ ಪರಿಣಾಮಕಾರಿಯಾಗಿ ಸಾಧಿಸುವುದು ಸಾಧ್ಯವಾಗುವುದಿಲ್ಲ ಎಂದಿತ್ತು. ಈ ತೀರ್ಫಿನ ಆಧಾರದಲ್ಲಿ ಆಯೋಗ ರಚನೆಗೆ ಸರ್ಕಾರ ಮುಂದಾಗಿದೆ.

ಮಳೆಕೊಯ್ಲು ಮತ್ತಷ್ಟು ಬಿಗಿ: ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕವನ್ನು ಸರ್ಕಾರ ಮಂಡಿಸಿದ್ದು, ಮಳೆ ನೀರು ಕೊಯ್ಲು ರಚನೆ ವಿಷಯದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲು ಹೊರಟಿದೆ. ಕಾವೇರಿ ನೀರು ಅಥವಾ ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ಮಳೆ ನೀರು ಒಳಚರಂಡಿಗಳಲ್ಲಿ ಹರಿದು ಹೋಗುವುದನ್ನು ತಗ್ಗಿಸುವುದು, ನಗರ ಪ್ರವಾಹ ಇಳಿಸುವುದು, ಮೇಲ್ಮೈ ಮತ್ತು ಅಂತರ್ಜಲದ ಅಂಚುರಹಿತ ಮಾಲಿನ್ಯ ಮೂಲವನ್ನು ಕಡಿಮೆಗೊಳಿಸುವುದು, ಅಂತರ್ಜಲ ಪೂರಣ, ಅಂತರ್ಜಲ ಮಟ್ಟ ಅಥವಾ ಬೇಸಿಗೆಯ ತೀವ್ರ ಬೇಡಿಕೆಯನ್ನು ನಿರ್ವಹಿಸುವ ಕುರಿತು ವಿಧೇಯಕದಲ್ಲಿ ಪ್ರಸ್ತಾಪವಾಗಿದೆ.

ಬಂಧಿ ಗುರುತಿಸುವಿಕೆಗೆ ಹೊಸ ವಿಧಾನ: ಶಾಂತಿ ಭಂಗ ಮತ್ತು ಹಿಂಸಾಚಾರದ ಪರಿಣಾಮಕಾರಿ ನಿಗಾವಣೆ, ಪ್ರತಿಬಂಧಕ್ಕಾಗಿ ಅಪರಾಧಿಯ ರಕ್ತದ ಮಾದರಿ, ಡಿಎನ್​ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕಾ್ಯನಿನ ಮಾದರಿಯನ್ನು ಪಡೆದುಕೊಳ್ಳಲು ಕಾನೂನಿಗೆ ತಿದ್ದುಪಡಿ ಮಾಡಲಾಗುತ್ತಿದೆ. ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್​ಗಳ ಜತೆ ಪೊಲೀಸ್ ಸೂಪರಿಂಟೆಂಡೆಂಟ್ ಅಥವಾ ಪೊಲೀಸ್ ಉಪ ಆಯುಕ್ತರಿಗೆ ದಾಖಲೆ ಸಂಗ್ರಹಿಸಲು ಆದೇಶಿಸುವ ಅಧಿಕಾರ ನೀಡಲಾಗುತ್ತಿದೆ.

10 ಸಾವಿರ ಕೋಟಿ ರೂ. ಪೂರಕ ಅಂದಾಜು ಮಂಡನೆ

ಬೆಂಗಳೂರು: ಆಯವ್ಯಯದಲ್ಲಿ ನಿಗದಿ ಮಾಡಿದ್ದಕ್ಕಿಂತ ಹೆಚ್ಚುವರಿಯಾಗಿ ಖರ್ಚು ಮಾಡಲು ಸರ್ಕಾರ 10,265.33 ಕೋಟಿ ರೂ. ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲು ಮಂಗಳವಾರ ಮಂಡಿಸಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆಗೆ 13 ಕೋಟಿ ರೂ. ವೆಚ್ಚ, ಸಿಎಂ ಬಾಲಸೇವಾ ಯೋಜನೆಗೆ 1 ಕೋಟಿ 68 ಲಕ್ಷ ರೂ. ಹೆಚ್ಚುವರಿ ಅನುದಾನ, ಹೈಕೋರ್ಟ್ ಆದೇಶದನ್ವಯ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಕ್ಕೆ 25 ಕೋಟಿ ರೂ., ಅನ್ನಭಾಗ್ಯ ಯೋಜನೆಗಾಗಿ 60 ಕೋಟಿ ರೂ. ಹೆಚ್ಚುವರಿ ಅನುದಾನ, ಕೋವಿಡ್​ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲು ಅನುದಾನ, ಅತಿವೃಷ್ಟಿಯಿಂದ ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ದುರಸ್ಥಿಗೆ ಕೇಂದ್ರದ ಅನುದಾನ 62 ಕೋಟಿ ರೂ. ಹೊಂದಾಣಿಕೆ, ಹಾವೇರಿಯ ವಿವಿಧ ಟ್ರಸ್ಟ್, ಮಠ, ದೇವಾಲಯಗಳ ಕಾಮಗಾರಿಗಳಿಗೆ 1 ಕೋಟಿ 18 ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಸಿಎಂ ಘೊಷಿತ ಸ್ವಾತಂತ್ರೊ್ಯೕತ್ಸವ ಅಮೃತ ಶಾಲಾ ಸೌಲಭ್ಯ ಯೋಜನೆಗೆ 75 ಕೋಟಿ ರೂ., ನೀರಾವರಿ ಇಲಾಖೆ ಪಡೆದಿರುವ ಬ್ಯಾಂಕ್ ಸಾಲ ತೀರಿಸಲು 5 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಿ ನಿವಾಸದ ದೂರವಾಣಿ, ನೀರು, ವಿದ್ಯುತ್ ವೆಚ್ಚಕ್ಕಾಗಿ 15 ಲಕ್ಷ ರೂ., ಶಾಸಕರ ಭವನದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ 1 ಕೋಟಿ 45 ಲಕ್ಷ ರೂ., ವಿಧಾನಪರಿಷತ್ ಸರ್ಕಾರಿ ಮುಖ್ಯಸಚೇತಕ ಮಹಾಂತೇಶ್ ಕವಟಗಿಮಠಗೆ ಹೊಸ ವಾಹನ ಖರೀದಿಗೆ 23 ಲಕ್ಷ ರೂ., ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರ ಪಡೆದ ಸಾಲದ ಬಡ್ಡಿ ಪಾವತಿಗಾಗಿ 6 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.

ಕಾರ್ವಿುಕ ಕಟ್ಟಡಕ್ಕೆ ಆಸ್ಕರ್ ಹೆಸರಿಡಿ: ಸೋಮವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಹಾಗೂ ಇತ್ತೀಚೆಗೆ ನಿಧನರಾದ ಚಿತ್ರನಟ ಸಂಚಾರಿ ವಿಜಯ್ಗೆ ವಿಧಾನಸಭೆ ಸಂತಾಪ ಸೂಚಿಸಿತು. ಸ್ಪೀಕರ್ ಮಂಡಿಸಿದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಸ್ಕರ್ ವಿಭಿನ್ನ ಮತ್ತು ಅಪರೂಪದ ರಾಜಕಾರಣಿ. ರಾಜಕಾರಣ ಪ್ರಾರಂಭದಲ್ಲಿರುವ ಆದರ್ಶ, ಹಲವು ವರ್ಷಗಳ ಬಳಿಕ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತೇವೆ. ಆದರೆ, ಆಸ್ಕರ್ ಬದಲಾಗಲಿಲ್ಲ ಎಂದರು. ಒಂದು ಕಾಲದಲ್ಲಿ ಕಾಂಗ್ರೆಸ್- ಜೆಡಿಎಸ್​ನಲ್ಲಿ ಏನಾದರೂ ಚರ್ಚೆ ಆಗಬೇಕಿದ್ದರೆ, ಇವರ ನೇತೃತ್ವದಲ್ಲಿ ಆಗುತ್ತಿತ್ತು ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು. ಕಟ್ಟಡ ಕಾರ್ವಿುಕರ ಕಲ್ಯಾಣ ನಿಧಿ ಸ್ಥಾಪನೆಗೆ ಕಾರಣೀಭೂತರಾದ ಆಸ್ಕರ್ ಫರ್ನಾಂಡಿಸ್ ಹೆಸರು ಅಜರಾಮರವಾಗಿರಬೇಕು. ರಾಜ್ಯದ ಕಾರ್ವಿುಕ ಇಲಾಖೆ ಕಚೇರಿ ಕಟ್ಟಡಕ್ಕೆ ಆಸ್ಕರ್ ಹೆಸರಿಡ ಬೇಕು ಎಂದು ಎಚ್.ಕೆ.ಪಾಟೀಲ್ ಸರ್ಕಾರಕ್ಕೆ ವಿನಂತಿಸಿದರು.

ಅವಸರ ಮತ್ತು ಅಧಿಕಾರ: ವಿಜಯಪುರದಲ್ಲಿ ಸ್ಥಾಪಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ನಿರ್ದೇಶಕರ ಕಚೇರಿ ವಿಷಯದಲ್ಲಿ ಸ್ವಾರಸ್ಯಕರ ಚುಟುಕು ಚರ್ಚೆಗೆ ವಿಧಾನಸಭೆ ಸಾಕ್ಷಿಯಾಯಿತು. ಅಪರ ನಿರ್ದೇಶಕರಿಗೆ ನಿರ್ದೇಶಕರ ಅಧಿಕಾರದ ಸಮಪ್ರಭಾರ ನೀಡಿಲ್ಲ, ಕಚೇರಿಯ ಎಲ್ಲ ಹುದ್ದೆಗಳ ಭರ್ತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸುತ್ತಿದ್ದರು. ಈ ವಿಷಯದತ್ತ ಸರ್ಕಾರದ ಗಮನಸೆಳೆದಿದ್ದ ಕಾಂಗ್ರೆಸ್​ನ ಶಿವಾನಂದ ಪಾಟೀಲ್ ಮಧ್ಯೆ ಮಾತನಾಡಲು ಎದ್ದು ನಿಂತಾಗ, ಇಷ್ಟೇ ಅವಸರ ನೀವು ಅಧಿಕಾರದಲ್ಲಿದ್ದಾಗ ಮಾಡಿದ್ದರೆ ಈ ಸಮಸ್ಯೆ ಇರುತ್ತಿದ್ದಿಲ್ಲ ಎಂದು ಬೊಮ್ಮಾಯಿ ಕಾಲೆಳೆದರು. ದಿಢೀರ್ ಅಧಿಕಾರ ಹೋಗುತ್ತದೆ ಎಂದು ಗೊತ್ತಾಗಲಿಲ್ಲವೆಂದು ಶಿವಾನಂದ್ ಪಾಟೀಲ್ ನೀಡಿದ ಪ್ರತ್ಯುತ್ತರಕ್ಕೆ ಸದನದಲ್ಲಿ ನಗು ಸದ್ದು ಮಾಡಿತು. ನಿಮಗೆ (ಸಿಎಂ) ಅರ್ಥವಾಗಿರಬೇಕು ಎನಿಸುತ್ತದೆ ಎಂದು ಸ್ಪೀಕರ್ ನಗೆಚಟಾಕಿ ಹಾರಿಸಿದರು. ಹಠಾತ್ತನೆ ಹೋದದ್ದಲ್ಲ, ಈಗ ಹೋದೀತು, ಆಗ ಹೋದೀತು ಎಂದು ದಿನ ದೂಡುತ್ತಾ 3-4 ತಿಂಗಳಾದ ಬಳಿಕ ನಿಮ್ಮ (ಶಿವಾನಂದ ಪಾಟೀಲ್) ಅಧಿಕಾರ ಹೋಯಿತು ಎಂದು ಬೊಮ್ಮಾಯಿ ಕಿಚಾಯಿಸಿದರು.

ಸಚಿವರನ್ನು ಪರಿಚಯಿಸಿದ ಮುಖ್ಯಮಂತ್ರಿ: ಸಿಎಂ ಬಸವರಾಜ ಬೊಮ್ಮಾಯಿ ನೂತನ ಸಚಿವರನ್ನು ವಿಧಾನಸಭೆಗೆ ಖಾತೆ ಸಹಿತ ಪರಿಚಯಿಸಿದರು. ಹೊಸ ಸಚಿವರನ್ನು ಪರಿಚಯಿಸುವ ಶಿಷ್ಟಾಚಾರದಂತೆ ಸ್ಪೀಕರ್ ಪರಿಚಯ ಮಾಡಿಕೊಡಲು ಸೂಚಿಸಿದರು. ಆ ಪ್ರಕಾರ, ಬೊಮ್ಮಾಯಿ ಅವರು 29 ಸಚಿವರನ್ನು ಪರಿಚಯಿಸಿದರು.

ಮಂತ್ರಿಗಳೇನು ಅನಾಥ ಮಕ್ಕಳಾ?: ಸಚಿವರನ್ನು ಸಭಾನಾಯಕರು ಅಥವಾ ಮುಖ್ಯಮಂತ್ರಿ ಪರಿಚಯಿಸಬೇಕು. ಆದರೆ, ಸಭಾನಾಯಕರೇ ಬಂದಿಲ್ಲ. ಇದರಿಂದಾಗಿ ಸಚಿವರೇನು ಅನಾಥ ಮಕ್ಕಳಾ? ಎಂದು ಸಿ.ಎಂ.ಇಬ್ರಾಹಿಂ ಪರಿಷತ್​ನಲ್ಲಿ ನಗೆ ಚಟಾಕಿ ಹಾರಿಸಿದರು. ಮಧ್ಯೆ ಪ್ರವೇಶಿಸಿದ ಸಭಾಪತಿ, ತಮ್ಮನ್ನು ತಾವು ಪರಿಚಯಿಸಿಕೊಳ್ಳಿ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜಗೆ ಸೂಚಿಸಿದರು. ಒಂದೇ ರಸ್ತೆಯನ್ನು 5-6 ಇಲಾಖೆಯವರು ಅಗೆಯುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಎಂದು ಇಬ್ರಾಹಿಂ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಬಸವರಾಜ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದರು.

ಬೊಮ್ಮಾಯಿ-ರೇವಣ್ಣ ಜುಗಲ್​ಬಂದಿ: ಹೊಳೆನರಸಿಪುರ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂಬ ಸಂಗತಿಯನ್ನು ಎಚ್.ಡಿ.ರೇವಣ್ಣ ಸಿಎಂ ಗಮನಕ್ಕೆ ತಂದರು. ಮುಖ್ಯಮಂತ್ರಿಯವರು ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ನಮಗೆ ಹೊಳೆನರಸೀಪುರ ಮುಖ್ಯ. ಪದೇಪದೆ ರಾಜಕೀಯ ದ್ವೇಷ ಮಾಡುವುದಾದರೆ ಮಾಡಿ, ನಾವು ಎದುರಿಸುತ್ತೇವೆ ಎಂಬ ರೇವಣ್ಣ ಹೇಳಿಕೆ ಸಿಎಂಗೆ ಕಸಿವಿಸಿ ತಂದಿತು. ‘ನೀವು ಎಲ್ಲ ಸರ್ಕಾರದಲ್ಲೂ ಹೀಗೆ ಕೆಲಸ ಮಾಡಿಸಿಕೊಳ್ಳುತ್ತೀರಿ, ಹಣವನ್ನೂ ಬಿಡುಗಡೆ ಮಾಡಿಸಿಕೊಂಡು ರಾಜಕೀಯ ಲಾಭಕ್ಕೆ ಮಾತನಾಡುವುದು ಸರಿಯಲ್ಲ. ನೀವು ಯಾವ ಸರ್ಕಾರದಲ್ಲಿ ಎಷ್ಟೆಷ್ಟು ಅನುದಾನ ಪಡೆದಿದ್ದೀರಿ ಎಂಬ ದಾಖಲೆ ಇದೆ ಎಂದು ರೇವಣ್ಣರ ಬಾಯಿ ಮುಚ್ಚಿಸಿದರು.

ಜೆಡಿಎಸ್ ಧರಣಿ: ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿತ ವಿಷಯವಾಗಿ ನಿಯಮ 60ರಡಿ ಚರ್ಚೆಗೆ ಅವಕಾಶ ಕೊಡಬೇಕೆಂದು ಜೆಡಿಎಸ್ ಶಾಸಕರು ಪಟ್ಟುಹಿಡಿದು ಸ್ಪೀಕರ್ ಪೀಠದ ಮುಂದೆ ಮಂಗಳವಾರ ಧರಣಿ ನಡೆಸಿದರು.

ಮಂಡನೆಯಾದ ವಿಧೇಯಕಗಳು

  1. ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ
  2. ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ
  3. ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ
  4. ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ
  5. ಕರ್ನಾಟಕ ಕೃಷಿಸಂಬಂಧಿ ಕೀಟಗಳು ಮತ್ತ ರೋಗಗಳ (ತಿದ್ದುಪಡಿ) ವಿಧೇಯಕ
  6. ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ಕಾಯ್ದೆ
  7. ಕರ್ನಾಟಕ ಪೌರಸಭೆಗಳು ಮತ್ತು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ

ಗ್ಯಾಸ್, ಸೀಮೆಎಣ್ಣೆ ವಿತರಣೆಗೆ ಕ್ರಮ: ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಕ್ಕೆ ಕೇಂದ್ರದ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸೌಲಭ್ಯ ಒದಗಿಸುವುದು ಹಾಗೂ ಬೆಳಕಿಗಾಗಿ ಕನಿಷ್ಠ ಮೂರು ಲೀಟರ್ ಸೀಮೆಎಣ್ಣೆ ವಿತರಣೆಗೆ ಕ್ರಮ ಜರುಗಿಸಲಾಗುವುದು ಎಂದು ಸಚಿವ ಉಮೇಶ ಕತ್ತಿ ತಿಳಿಸಿದರು. ಪರಿಷತ್​ನಲ್ಲಿ ಶಾಂತಾರಾಮ ಸಿದ್ದಿ, ಸರ್ಕಾರ ನೀಡುತ್ತಿರುವ 1 ಲೀ. ಸೀಮೆಎಣ್ಣೆ ರಾತ್ರಿ ಬೆಳಕಿನ ಬಳಕೆಗೂ ಸಾಲುತ್ತಿಲ್ಲ. ಹೀಗಾಗಿ ಕನಿಷ್ಠ 3 ಲೀ. ವಿತರಿಸಬೇಕು. ಅಡುಗೆ ಅನಿಲವೂ ಸಿಗುತ್ತಿಲ್ಲ ಎಂದು ಗಮನ ಸೆಳೆದರು. ಇದಕ್ಕೆ ದನಿಗೂಡಿಸಿದ ತೇಜಸ್ವಿನಿ, ಸೋಲಾರ್ ವ್ಯವಸ್ಥೆ ಕಲ್ಪಿಸಲು ಹಿನ್ನೆಡೆ ಆಗುತ್ತಿರುವ ಕಾರಣ ಸೀಮೆಎಣ್ಣೆ ವಿತರಣೆ ಅನಿವಾರ್ಯ ಎಂದರು.

ಅಧಿವೇಶನ ವಿಸ್ತರಣೆಗೆ ಒಪ್ಪದ ಸರ್ಕಾರ

ಬೆಂಗಳೂರು: ವಿಧಾನಮಂಡಲದ ಅಧಿವೇಶನವನ್ನು ಹತ್ತು ದಿನಗಳ ಕಾಲ ವಿಸ್ತರಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಗೆ ಸರ್ಕಾರ ಒಪ್ಪಿಕೊಂಡಿಲ್ಲ. ಮಂಗಳವಾರ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್, ಅಧಿವೇಶನ ವಿಸ್ತರಣೆಗೆ ಬೇಡಿಕೆಯನ್ನಿಟ್ಟಿತು. ಅಧಿವೇಶನ ಈಗ ನಿಗದಿಯಾಗಿರುವಂತೆ ಸೆ.23ರ ತನಕ ಮಾತ್ರ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೊಮ್ಮಾಯಿ ವಾದವನ್ನು ಒಪ್ಪದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಆದ್ದರಿಂದ 20 ದಿನಗಳ ಕಾಲ ಅಧಿವೇಶನ ನಡೆಯಬೇಕಾಗಿದೆ. 2-3 ವರ್ಷಗಳಿಂದ ವರ್ಷಕ್ಕೆ 20 ದಿನವೂ ನಡೆಯುತ್ತಿಲ್ಲ ಎಂದು ಕಿಡಿಕಾರಿದರು. ನಿಯಮವಾಳಿಗಳಂತೆ ಸದನ ನಡೆಸಿದರೆ ನಮ್ಮ ಸಹಕಾರ ಇರುತ್ತದೆ. ತರಾತುರಿಯಲ್ಲಿ ವಿಧೇಯಕಗಳನ್ನು ತಂದರೆ ಅದನ್ನು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಭೆಯಲ್ಲಿ ಹೇಳಿದರು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ವನವಾಗದೆ ಸದನದ ಕಾರ್ಯಸೂಚಿಯಲ್ಲಿ 4 ವಿಧೇಯಕಗಳ ಮಂಡನೆಗೆ ಸರ್ಕಾರ ಮುಂದಾಗಿದೆ. ಇದು ಸರಿಯೇ? ಈ ರೀತಿ ನಿಯಮಾವಳಿಗಳನ್ನು ಬಿಟ್ಟು ಸದನ ನಡೆಸಬೇಡಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಈ ಹಂತದಲ್ಲಿ ಸಿದ್ದರಾಮಯ್ಯರನ್ನು ಸಮಾಧಾನ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ, ‘ಸಿದ್ದರಾಮಣ್ಣ ಇದೆಲ್ಲ ಇದ್ದದ್ದೆ ಹಿಂದೆಯೂ ಆಗಿದೆ. ಎಲ್ಲವನ್ನು ಸರಿ ಮಾಡೋಣ ಬಿಡಿ. ಸುಗಮ ಕಲಾಪಕ್ಕೆ ಸಹಕಾರ ನೀಡಿ’ ಎಂದು ಹೇಳಿದರೆನ್ನಲಾಗಿದೆ. ಕಲಾಪ ಸಲಹಾ ಸಮಿತಿಯಲ್ಲಿ ಯಾವ ಯಾವ ವಿದೇಯಕಗಳ ಮಂಡನೆ, ಯಾವ ಯಾವ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆದು, ಸುಗಮ ಕಲಾಪ ನಡೆಸುವ ಸಂಬಂಧ ತೀರ್ವನಗಳನ್ನು ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net