ಅಂಗನವಾಡಿ ಸುವರ್ಣ ಮಹೋತ್ಸವಕ್ಕೆ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ | Progress review meeting at divisional level

Hebbalkar meeting
Published on

ಬೆಂಗಳೂರು: ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭಗೊಂಡು ಅಕ್ಟೋಬರ್‌ಗೆ 50 ವರ್ಷಗಳು ತುಂಬಲಿವೆ. ಈ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ವಿಕಾಸ ಯೋಜನೆ ಬೆಂಗಳೂರು ಮತ್ತು ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಈಗಾಗಲೇ ಒಂದು ಸುತ್ತಿನ ಚರ್ಚೆಯಾಗಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸಿಬ್ಬಂದಿ ಸಹಿತ ಒಂದು ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುವ ಕನಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ವಿಭಾಗಮಟ್ಟದಲ್ಲಿ ಪರಿಶೀಲನೆ

ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಇನ್ನುಮುಂದೆ ವಿಭಾಗದಲ್ಲಿ ನಡೆಸಲು ತೀರ್ಮಾನ ಮಾಡಿದ್ದು, ಇಲಾಖೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಮರ್ಪಕ ನಿರ್ವಹಣೆಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆ ನ್ಯಾಯಮೂರ್ತಿ ವೇಣುಗೋಪಾಲ್ ಗೌಡ ಸಮಿತಿ ಪ್ರಶಂಸೆ ವ್ಯಕ್ತಪಡಿಸಿದೆ. ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ದಕ್ಷತೆ, ಪರಿಶ್ರಮ ನಿರಂತರ ಕಾಯ್ದುಕೊಳ್ಳಬೇಕು ಎಂಬ ಮಾತು ಸೇರಿಸಿದರು.

ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಾಸಿಕ ಗೌರವಧನ ಒಂದು ಸಾವಿರ ರೂ.ಗೆ ಏರಿಸಲಾಗಿದೆ. ಕೇಂದ್ರ ಸರ್ಕಾರದ ಮನವೊಲಿಸಿದ ಪರಿಣಾಮ ಕರ್ನಾಟಕಕ್ಕೆ ಅತಿ ಹೆಚ್ಚು 3,800 ಮಿನಿ ಅಂಗನವಾಡಿ ಕೇಂದ್ರಗಳು ಮಂಜೂರಾಗಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಗ್ರ ಶಿಶು ವಿಕಾಸ ಯೋಜನೆ ಭಾಗವಾಗಿರುವ ಪೋಷನ್ ಟ್ರ್ಯಾಕರ್ ಅನ್ವಯ ವಿವಿಧ ಸೂಚ್ಯಂಕಗಳು, ವಿವಿಧ ಲೆಕ್ಕ ಶೀರ್ಷಿಕೆಯಡಿ ಅನುದಾನ ಬಿಡುಗಡೆ, ಖರ್ಚು, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕಾರ್ಯಕರ್ತೆಯರ ನೇಮಕ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಕುರಿತು ಮಾಹಿತಿ ಪಡೆದು, ಸಾಧಿಸಿದ ಪ್ರಗತಿ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚರ್ಚಿಸಿದರು.

ಎಲ್‌ಕೆಜಿ, ಯುಕೆಜಿಗೆ ಒತ್ತು

ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ, ಯುಕೆಜಿ)ಗಳನ್ನು ಪ್ರಾರಂಭಿಸುವುದು ಇಲಾಖೆಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಎಲ್‌ಕೆಜಿ, ಯುಕೆಜಿ ಆರಂಭಿಸಲು ಉಪ ನಿರ್ದೇಶಕರು, ಸಿಡಿಪಿಒಗಳು ಸೇರಿ ಇಲಾಖೆ ಎಲ್ಲ ಅಧಿಕಾರಿಗಳು ಮುತುವರ್ಜಿವಹಿಸಬೇಕು. ಇಲಾಖೆ ಉಳಿವಿಗೂ ಎಲ್‌ಕೆಜಿ, ಯುಕೆಜಿ ಸಹಕಾರಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ನಿರ್ದೇಶಕ ರಾಘವೇಂದ್ರ, ಜಂಟಿ ನಿರ್ದೇಶಕ ಬಿ.ಎಚ್.ನಿಶ್ಚಲ್, ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್ ಇನ್ನಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net