

ಶಿಕಾರಿಪುರ: ಪರೋಪಕಾರಾರ್ಥಂ ಇದಂ ಶರೀರಮ್ ಎಂಬ ವೇದ ವಾಣಿಯಂತೆ ನಾವು ಪರೋಪಕಾರ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ತನ್ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಪತ್ರಕರ್ತ ಕೆ.ಎಸ್.ಹುಚ್ರಾಯಪ್ಪ ಹೇಳಿದರು.
ಭಾನುವಾರ ಬಡಾವಣೆಯೊಂದರಲ್ಲಿ ಪರೋಪಕಾರಂ ಸಂಸ್ಥೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರೋಪಕಾರಂ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಜನಮನ ಸೆಳೆದಿವೆ. ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು.
ಪರೋಪಕಾರಂನ ಮಧುಕೇಶ್ವರ್ ಮಾತನಾಡಿ, ಸರ್ಕಾರ, ಅರಣ್ಯ ಇಲಾಖೆ ಅಥವಾ ಪುರಸಭೆ ಪರಿಸರ ರಕ್ಷಣೆ ಮಾಡಲಿ ಎಂದು ಕೈಕಟ್ಟಿ ಕೂರದೆ ಇದು ನಮ್ಮೆಲ್ಲರ ಹೊಣೆ ಎಂದು ಅರಿತು ಸ್ವಚ್ಛ ಸುಂದರ ಪರಿಸರ ನಿರ್ಮಿಸಲು ಮುಂದಾಗಬೇಕು. ಶಿಕಾರಿಪುರ ಪಟ್ಟಣದ ಸ್ವಚ್ಛತೆ ನಮ್ಮೆಲ್ಲರ ಆದ್ಯತೆಯಾಗಬೇಕು. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪರೋಪಕಾರಂ ಲಕ್ಷ್ಮಣ್ ಮಾತನಾಡಿ, ಇದು ನಮ್ಮ 323ನೇ ಸೇವಾಕಾರ್ಯ. ಸಂಘಟನೆಯ ಸದಸ್ಯರು ನಿಸ್ವಾರ್ಥದಿಂದ ಪಟ್ಟಣ ಸೇರಿ ಹಳ್ಳಿಗಳಲ್ಲಿಯೂ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ನಾವು ಪ್ರತಿ ಭಾನುವಾರ ಕಾರ್ಯಕ್ರಮ ಮಾಡುತ್ತೇವೆ. ನಾವು ಮುಂಗಾರಿನಲ್ಲಿ ಗಿಡಗಳನ್ನು ನೆಡುವ ಮತ್ತು ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶಿವಯ್ಯ ಶಾಸ್ತ್ರಿ, ಪ್ರಕಾಶ್, ಮಹೇಶ್ವರಸ್ವಾಮಿ, ಪ್ರಶಾಂತ್, ಗಿರಿಧರ್, ಶ್ರೀಧರ್, ಫಾರೂಕ್, ಶಾಂತಾರಾಮ, ಪೃಥ್ವಿರಾಜ್, ಕೆ.ವೆಂಕಟೇಶ್, ಪ್ರೇಮ್ ರಾಜೇಶ್, ಧರ್ಮಣ್ಣ, ಸಂತೋಷ್, ವಿಶ್ವನಾಥ್, ರಾಜು ದೀಕ್ಷಿತ್, ಮೌನೇಶ್, ದೇವೇಂದ್ರಪ್ಪ ಇತರರಿದ್ದರು.