

ನವದೆಹಲಿ: ಕರೊನಾ ವೈರಸ್ ತೀವ್ರ ಹರಡುವಿಕೆಯಿಂದ ಭೀತಿಗೊಂಡಿರುವ ನಾಗರಿಕರ ಪರವಾಗಿ ಕೇಂದ್ರ ಸರ್ಕಾರ ಧಾವಿಸಿದ್ದು, ಎಟಿಎಂ ಕೇಂದ್ರಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡುವುದಕ್ಕೆ ವಿಧಿಸುತ್ತಿದ್ದ ಶುಲ್ಕವನ್ನು ಹಿಂದಕ್ಕೆ ಪಡೆದಿದೆ.
ಖಾತೆ ಹೊಂದಿರುವ ಬ್ಯಾಂಕ್ ಹೊರತಾಗಿ ಇತರೆ ಬ್ಯಾಂಕ್ಗಳ ಎಟಿಎಂನಲ್ಲಿ ಹಣ ಡ್ರಾ ಮಾಡಿದರೆ ಶುಲ್ಕ ಪಾವತಿ ಮಾಡಬೇಕಾಗಿತ್ತು. ಆದರೆ ಕರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶುಲ್ಕ ವಿಧಿಸುವುದನ್ನು ನಿಲ್ಲಿಸಿದೆ.
ಗ್ರಾಹಕರು ಯಾವುದೇ ಡೆಬಿಟ್ ಕಾರ್ಡ್ ಬಳಸಿ ಯಾವುದೇ ಎಟಿಎಂನಲ್ಲಿ ಶುಲ್ಕ ಇಲ್ಲದೆ ಹಣ ಪಾವತಿ ಮಾಡಬಹುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಎಲ್ಲ ಚಟುವಟಿಕೆಗಳಿಗೆ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಣ ಪಡೆಯಲು ತೊಂದರೆ ಎದುರಾಗಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.(ಏಜೆನ್ಸೀಸ್)