ಕೊಳ್ಳೇಗಾಲ: ತಾಲೂಕಿನ ಜಾಗೇರಿಯ ಪಾಸ್ಕಲ್ ನಗರದಲ್ಲಿ ಶನಿವಾರ ವಾಂತಿಯಿಂದ ನಿತ್ರಾಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಆರೋಗ್ಯ ಚೇತರಿಕೆ ಕಂಡಿದೆ.
ಜಾಗೇರಿ ಪಾಸ್ಕಲ್ ನಗರದ ಖಾಸಗಿ ಪ್ರೌಢಶಾಲೆಯಲ್ಲಿ 9ನೇತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ಜೆಸಿಮಾಂಟೊ ಹಾಗೂ ಮೈಕಲ್ ಪೆರಿಯಾನಾಯಗಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಶನಿವಾರ ತರಗತಿ ಮುಗಿಸಿಕೊಂಡು ಶಾಲೆಯ ಹೊರಗೆ ವಾಂತಿ ಮಾಡಿಕೊಂಡು ನಿತ್ರಾಣಗೊಂಡಿದ್ದನ್ನು ಕಂಡ ಗ್ರಾ.ಪಂ. ಸದಸ್ಯ ಆರೋಗ್ಯಸ್ವಾಮಿ ತಕ್ಷಣವೇ ತಮ್ಮ ಕಾರಿನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ವಿದ್ಯಾರ್ಥಿ ಜೆಸಿಮಾಂಟೊ ತಾಯಿ ಪೌಲಿನ್ ವಿಜಯವಾಣಿಗೆ ಪ್ರತಿಕ್ರಿಯಿಸಿ, ಇಬ್ಬರು ಮಕ್ಕಳ ಆರೋಗ್ಯ ಚೇತರಿಕೆ ಕಂಡಿದೆ. ವಾಂತಿ ಮಾಡಿಕೊಂಡು ಆಸ್ಪತ್ರೆ ಸೇರಿರುವುದನ್ನು ಕಂಡು ನಮಗೆ ಭಯವಾಗಿತ್ತು. ಪೊಲೀಸರು ಮಕ್ಕಳನ್ನು ಪ್ರಶ್ನಿಸಿದಾಗ ಜ್ಯೂಸ್ ಕುಡಿದಿದ್ದೇವೆ ಎಂದು ಮಕ್ಕಳು ಹೇಳುತ್ತಿದ್ದಾರೆ. ಊರಲ್ಲಿ ಮದ್ಯ ಸೇವನೆ ಮಾಡಿದ್ದರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ನಾವು ಮಕ್ಕಳಿಗೆ ಹಣ ಕೊಡುವುದಿಲ್ಲ. ಎಷ್ಟು ಸಾರಿ ಕೇಳಿದರೂ ಮಕ್ಕಳು ಜ್ಯೂಸ್ ಕುಡಿದಿದ್ದೇವೆ ಎನ್ನುತ್ತಿದ್ದಾರೆ ಎಂದರು.
ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಚಲುವರಾಜ್ ಮಾತನಾಡಿ, ಮಕ್ಕಳ ಹೇಳಿಕೆ ಸಂಗ್ರಹಿಸಲಾಗುತ್ತಿದೆ. ಆಸ್ಪತ್ರೆಯಯಲ್ಲಿ ವರದಿ ಬಳಿಕ ಕಾರಣ ಏನೆಂಬುದು ತಿಳಿಯಲಿದೆ ಎಂದರು.