

ಜಮ್ಮು: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿನ ಪವಿತ್ರ ಕ್ಷೇತ್ರ ಶ್ರೀ ವೈಷ್ಣೋದೇವಿ ಮಾರ್ಗದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಸಂಭವಿಸಿದ ಈ ಭೂಕುಸಿತದಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕತ್ರಾದಿಂದ ಪವಿತ್ರ ಕ್ಷೇತ್ರದಲ್ಲಿನ 12 ಕಿ.ಮೀ. ದೂರದ ಟ್ರೆಕ್ಕಿಂಗ್ ಮಾರ್ಗದ ಮಧ್ಯೆ ಈ ಭೂಕುಸಿತ ಸಂಭವಿಸಿದ್ದು, ದೊಡ್ಡ ಕಲ್ಲು-ಬಂಡೆಗಳು ಉರುಳಿ ಬಿದ್ದಿವೆ.
ಈ ಕ್ಷೇತ್ರಕ್ಕೆ ಎರಡು ಮಾರ್ಗಗಳಿದ್ದು, ಹಿಮಕೋಟಿ ಟ್ರೆಕ್ ಮಾರ್ಗದಲ್ಲಿನ ಯಾತ್ರೆ ಬೆಳಗ್ಗೆ ಸ್ಥಗಿತಗೊಂಡಿತ್ತು. ಹಳೇ ಮಾರ್ಗದಲ್ಲಿ ಮಧ್ಯಾಹ್ನ 1.30ರ ವರೆಗೆ ಯಾತ್ರೆ ನಡೆದಿದ್ದು, ಭಾರಿ ಮಳೆ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಯಾತ್ರೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಭಾರಿ ಮಳೆ, ಮೇಘಸ್ಪೋಟ, ಪ್ರವಾಹ ಹಾಗೂ ಭೂಕುಸಿತದ ಮುನ್ಸೂಚನೆ ಇದ್ದರೂ ಈ ಹಳೇ ಮಾರ್ಗದಲ್ಲಿ ಯಾತ್ರೆ ಮುಂದುವರಿಸಲಾಗಿತ್ತು. ‘ಹವಾಮಾನ ಇಲಾಖೆಯು ಭಾರಿ ಮಳೆ, ಪ್ರವಾಹ, ಮೇಘಸ್ಪೋಟ, ಭೂಕುಸಿತಗಳ ಬಗ್ಗೆ ಗಂಟೆಗೊಮ್ಮೆ ಮುನ್ಸೂಚನೆ ನೀಡಿದೆ. ಜಿಲ್ಲಾಡಳಿತ ಯಾತ್ರೆಯನ್ನು ಸ್ಥಗಿತಗೊಳಿಸದೆ ಕ್ರಿಮಿನಲ್ ನಿರ್ಲಕ್ಷ್ಯತೋರಿದೆ ಎಂಬ ದೂರು ಕೇಳಿಬಂದಿದೆ.