3 ಭ್ರೂಣಗಳ ಸಾವು, 2 ಬಾರಿ ಎಸ್ಕೇಪ್! ‘ದೂವರ್ಸ್ ರಾಣಿ’ಗೆ ಸಂಕಷ್ಟ, ಹುಲಿ ಯೋಜನೆಗೆ ಹಿನ್ನಡೆ | Dooars Rani

Tiger Dooars Rani
ಬಕ್ಸಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡ ದೂವರ್ಸ್ ರಾಣಿ ಹುಲಿ
Published on: 

Buxa Tiger Reserve: ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಬಿಹಾರದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಿಂದ ಸ್ಥಳಾಂತರಿಸಲಾಗಿದ್ದ ಮೂರು ವರ್ಷದ ‘ದೂವರ್ಸ್ ರಾಣಿ’ ಹುಲಿ ಮೂರು ಭ್ರೂಣಗಳನ್ನು ಕಳೆದುಕೊಂಡಿದೆ. ಈ ಘಟನೆ ಹುಲಿ ಸ್ಥಳಾಂತರ ಯೋಜನೆಯ ಸಿದ್ಧತೆ ಮತ್ತು ನಿರ್ವಹಣೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಟಿ-138 ಎಂದು ಗುರುತಿಸಲಾದ ಈ ಹುಲಿಯನ್ನು ಸೆಪ್ಟೆಂಬರ್ 29ರಿಂದ ಅಕ್ಟೋಬರ್ 2ರ ನಡುವೆ ಬಕ್ಸಾಗೆ ಕರೆತರಲಾಗಿತ್ತು. ಸ್ಥಳಾಂತರಕ್ಕೂ ಮುನ್ನ ಆರು ಪಶುವೈದ್ಯರು ಮತ್ತು ತಜ್ಞರ ತಂಡ ಆರೋಗ್ಯ ತಪಾಸಣೆ ನಡೆಸಿದ್ದರೂ, ಹುಲಿ ಗರ್ಭಿಣಿಯಾಗಿರುವುದು ಪತ್ತೆಯಾಗಿರಲಿಲ್ಲ ಎನ್ನಲಾಗಿದೆ.

ಬಕ್ಸಾಗೆ ಬಂದ ಬಳಿಕ ಹುಲಿ ಸುಮಾರು 100 ಕಿಲೋಮೀಟರ್ ಪ್ರಯಾಣಿಸಿ ಅಸ್ಸಾಂನ ರೈಮೋನಾ ರಾಷ್ಟ್ರೀಯ ಉದ್ಯಾನಕ್ಕೆ ತೆರಳಿತ್ತು. ಬಳಿಕ ಅದನ್ನು ಪತ್ತೆಹಚ್ಚಿ ಮತ್ತೆ ಪಶ್ಚಿಮ ಬಂಗಾಳಕ್ಕೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಪ್ರಯಾಣದ ವೇಳೆ ಎರಡು ಬಾರಿ ಅರಿವಳಿಕೆ ನೀಡಲಾಗಿತ್ತು. ಕೆಲವೇ ದಿನಗಳ ನಂತರ ಹುಲಿಗೆ ಗರ್ಭಪಾತವಾಗಿದ್ದು, ಮೂರು ಭ್ರೂಣಗಳು ನಷ್ಟವಾಗಿವೆ.

ಭ್ರೂಣಗಳನ್ನು ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹುಲಿಯ ಸೆರೆ, ಅರಿವಳಿಕೆ, ದೀರ್ಘ ಪ್ರಯಾಣ ಮತ್ತು ಮರುಸೆರೆ ಗರ್ಭಪಾತಕ್ಕೆ ಕಾರಣವಾಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಇವುಗಳ ನಡುವೆ ನೇರ ಸಂಬಂಧ ಇರುವುದು ಇನ್ನೂ ದೃಢಪಟ್ಟಿಲ್ಲ. ಕೇಂದ್ರ ಮತ್ತು ರಾಜ್ಯ ಮಟ್ಟದ ತಂಡಗಳು ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿವೆ.

ಇನ್ನು ಅಸ್ಸಾಂನಿಂದ ಮರಳಿದ ಬಳಿಕ ಹುಲಿಯನ್ನು ಜಿಂಕೆಗಳಿಗಾಗಿ ನಿರ್ಮಿಸಿದ್ದ ಆವರಣದಲ್ಲಿ ಇರಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಹೊಸ ಆವರಣ ನಿರ್ಮಿಸಲು ಅನುದಾನ ಬಿಡುಗಡೆಯಾಗದ ಕಾರಣ ಲಭ್ಯವಿದ್ದ ವ್ಯವಸ್ಥೆಯನ್ನೇ ಬಳಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆವರಣದ ಕೆಳಭಾಗವನ್ನು ಅಗೆದು ಹುಲಿ ತಪ್ಪಿಸಿಕೊಂಡಿದೆ ಎಂಬ ವರದಿಗಳೂ ಇವೆ.

ಸದ್ಯ ದೂವರ್ಸ್ ರಾಣಿ ಬಕ್ಸಾ ಅರಣ್ಯ ಪ್ರದೇಶದಲ್ಲೇ ಇದ್ದು, ರೇಡಿಯೋ ಕಾಲರ್ ಮೂಲಕ ಅದರ ಚಲನವಲನ ಗಮನಿಸಲಾಗುತ್ತಿದೆ. ಸುಮಾರು 60 ಅರಣ್ಯ ಸಿಬ್ಬಂದಿ ಮತ್ತು ಮೂರು ತರಬೇತಿ ಪಡೆದ ಆನೆಗಳನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ಪಕ್ಷಿಗಳು ‘V’ ಆಕಾರದಲ್ಲೇ ಹಾರುವುದೇಕೆ ಗೊತ್ತಾ? ಇದರ ಹಿಂದಿದೆ ನಿಮ್ಮ ಹುಬ್ಬೇರಿಸುವ ವೈಜ್ಞಾನಿಕ ರಹಸ್ಯ | Birds Fly

ರಾಜಸ್ಥಾನದ ಸರಿಸ್ಕಾ ಮತ್ತು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಮರುಪರಿಚಯ ಯೋಜನೆ ಯಶಸ್ವಿಯಾಗಿತ್ತು. ಅದೇ ಮಾದರಿಯಲ್ಲಿ ಬಕ್ಸಾದಲ್ಲೂ ಹುಲಿಗಳ ಸಂತತಿ ಹೆಚ್ಚಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ದೂವರ್ಸ್ ರಾಣಿ ಪ್ರಕರಣ ಈಗ ಯೋಜನೆಯ ಸಿದ್ಧತೆ ಮತ್ತು ಅನುಷ್ಠಾನದ ಬಗ್ಗೆ ಚರ್ಚೆಗೆ ಕಾರಣವಾಗಿದೆ.