ಎಫ್​ಡಿಎನಲ್ಲೂ ಡೀಲ್?; ಪೆನ್ಸಿಲ್​ನಿಂದ ಉತ್ತರ ತುಂಬಿರುವ 80ಕ್ಕೂ ಹೆಚ್ಚು ಅಭ್ಯರ್ಥಿಗಳು

KPSC
Published on

| ದೇವರಾಜ್ ಕನಕಪುರ ಬೆಂಗಳೂರು

ಕರ್ನಾಟಕ ಲೋಕಸೇವಾ ಆಯೋಗ ಕಳೆದ ಫೆಬ್ರವರಿಯಲ್ಲಿ ನಡೆಸಿದ್ದ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ (ಎಫ್​ಡಿಎ) ಪರೀಕ್ಷೆಯಲ್ಲಿ ಗೋಲ್ಮಾಲ್ ನಡೆದಿರುವ ಶಂಕೆಯನ್ನು ಪುಷ್ಠೀಕರಿಸುವಂತಹ ಹೊಸ ಸಾಕ್ಷ್ಯಗಳು ಲಭ್ಯವಾಗಿವೆ. ಅನೇಕ ಅಭ್ಯರ್ಥಿಗಳು ಉತ್ತರ ಪತ್ರಿಕೆಗಳಲ್ಲಿ ಪೆನ್ ಬದಲು ಪೆನ್ಸಿಲ್​ನಿಂದ ಶೇಡ್ (ಮಬ್ಬಾಗಿಸುವುದು) ಮಾಡಿದ್ದು, ಹುದ್ದೆಗಳಿಗೆ ಡೀಲ್ ನಡೆಸಿರಬಹುದಾದ ಗುಮಾನಿ ಹುಟ್ಟುಹಾಕಿದೆ. ಫೆಬ್ರವರಿಯಲ್ಲಿ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆ ಪರೀಕ್ಷೆಯಲ್ಲಿ 8 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆಯೋಗದ ಸೂಚನೆಗಳನ್ನು ಪಾಲಿಸಿರಲಿಲ್ಲ. ಹೀಗಾಗಿ ಈ ಎಲ್ಲ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ರದ್ದು ಮಾಡಲಾಗಿದೆ. ಇಂಥವರ ಪೈಕಿ 80ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತರವನ್ನು ಪೆನ್ಸಿಲ್​ನಿಂದ ಭರ್ತಿ ಮಾಡಿರುವುದನ್ನು ಕೆಪಿಎಸ್​ಸಿ ಪತ್ತೆ ಮಾಡಿದೆ. ಇನ್ನು ಕೆಲವು ಅಭ್ಯರ್ಥಿಗಳು ಒಎಂಆರ್ ಶೀಟ್ ಮೇಲೆ ಓಂ, ಸ್ವಸ್ತಿಕ್ ರೀತಿಯ ಹಲವು ಚಿನ್ಹೆ ಗುರುತು ಮಾಡಿದ್ದಾರೆ. ಬಹುತೇಕ ಅಭ್ಯರ್ಥಿಗಳು ತಾವು ಯಾವ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆ ಆಯ್ಕೆ ಮಾಡಿಕೊಂಡಿದ್ದೇವೆ ಎಂಬುದನ್ನು ಶೇಡ್ ಮಾಡದೆ ಖಾಲಿ ಉಳಿಸಿದ್ದಾರೆ. ಇದರಿಂದ ಈ ರೀತಿಯ 8 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಆಯೋಗ ರದ್ದು ಮಾಡಿರುವುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಎಫ್​ಡಿಎ ಅಭ್ಯರ್ಥಿಗಳ 1:3 ಅನುಪಾತದಲ್ಲಿ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿ ಬಿಡುಗಡೆಗೂ ಮುನ್ನವೇ ಅನುಮಾನಕ್ಕೆ ಕಾರಣವಾದ ಅಭ್ಯರ್ಥಿಗಳನ್ನು ಹೊರಗಿರಿಸಲಾಗಿದೆ.

ಸಹಿ ಇಲ್ಲ, ಆಯ್ಕೆ ಮಾಡಿಲ್ಲ: ಉತ್ತರ ಪತ್ರಿಕೆಯ ಒಎಂಆರ್ ಶೀಟ್​ನಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿರುವ ಕಾಲಂನಲ್ಲಿ ಸಹಿ ಮಾಡಬೇಕು. ಆದರೆ ಹಲವು ವಿದ್ಯಾರ್ಥಿಗಳು ಸಹಿ ಮಾಡಿಲ್ಲ. ಅಲ್ಲದೆ, ಪತ್ರಿಕೆ-2ರಲ್ಲಿ ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ಎಂಬ ಎರಡು ಕಾಲಂನಲ್ಲಿ ಅಭ್ಯರ್ಥಿಗಳು ಅಯ್ಕೆ ಮಾಡಿಕೊಂಡ ಪತ್ರಿಕೆಯ ಮಾಧ್ಯಮವನ್ನು ಶೇಡ್ ಮಾಡಬೇಕು. ಈ ಎರಡು ಯಾವುದೇ ಡೀಲ್ ತಂತ್ರವಲ್ಲ. ಆದರೆ, ಅಭ್ಯರ್ಥಿಗಳು ಬೇಜವಾಬ್ದಾರಿತನ ಅಥವಾ ಮರೆತು ಈ ರೀತಿ ಮಾಡಿದ್ದಾರೆಂದು ಅಂದಾಜಿಸಲಾಗಿದೆ. ಆದರೆ, ಈ ರೀತಿ ಮಾಡುವುದು ಆಯೋಗದ ಸೂಚನೆಗಳ ಉಲ್ಲಂಘನೆ ಆಗಿರುವ ಕಾರಣ ಅಂತಹ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಸಹ ರದ್ದು ಮಾಡಿದೆ. ನಿಖರವಾಗಿ ಎಷ್ಟು ಅಭ್ಯರ್ಥಿಗಳು ಯಾವೆಲ್ಲ ರೀತಿಯಲ್ಲಿ ಸೂಚನೆಗಳನ್ನು ಉಲ್ಲಂಘಿಸಿದ್ದಾರೆಂಬ ಅಂಕಿ-ಅಂಶಗಳನ್ನು ನೀಡಲು ಆಯೋಗ ನಿರಾಕರಿಸಿದೆ.

ಅಭ್ಯರ್ಥಿಗಳಿಗೆ ನೀಡುವ ಸೂಚನೆಗಳು

  • ಪ್ರವೇಶ ಪತ್ರ, ಪೆನ್ನು ಮತ್ತು ಸಿಂಧುವಾದ ಗುರುತಿನ ಚೀಟಿಗಳನ್ನು ಮಾತ್ರ ಕೇಂದ್ರದೊಳಗೆ ಕೊಂಡೊಯ್ಯಬೇಕು
  • ಪ್ರವೇಶ ಪತ್ರದ ಜತೆಗೆ ಕಪು್ಪ, ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನನ್ನು ಮಾತ್ರ ತರಬೇಕು
  • ಎಲ್ಲ ನಮೂದನ್ನು ಬಾಲ್ ಪಾಯಿಂಟ್ ಪೆನ್ನಿಂದಲೇ ಮಾಡಬೇಕು.
  • ಬ್ಲೇಡ್, ರಬ್ಬರ್, ವೈಟ್ನರ್ ಉಪಯೋಗಿಸಿ ತಿದ್ದುಪಡಿ ಮಾಡುವಂತಿಲ್ಲ
  • ಒಎಂಅರ್ ಉತ್ತರ ಪತ್ರಿಕೆಯಲ್ಲಿ ಸಹಿ ಮಾಡಬೇಕು. ಇಲ್ಲವಾದಲ್ಲಿ ಅಸಿಂಧುಗೊಳಿಸಲಾಗುವುದು
  • ಅಭ್ಯರ್ಥಿಗಳು ಸೂಚನೆ ಪಾಲಿಸಿಲ್ಲವಾದಲ್ಲಿ ರದ್ದು ಮಾಡುವ ಅಧಿಕಾರವನ್ನು ಆಯೋಗ ಹೊಂದಿದೆ.
  • ಪತ್ರಿಕೆ-2ರಲ್ಲಿ ಆಯ್ಕೆ ಮಾಡಿಕೊಂಡ ವಿಷಯ ಸ್ಪಷ್ಟವಾಗಿ ನಮೂದಿಸಬೇಕು. ಇಲ್ಲವಾದಲ್ಲಿ ಅಸಿಂಧುಗೊಳಿಸಲಾಗುವುದು.

ಎಫ್​ಡಿಎ ಪರೀಕ್ಷೆ: ಎಫ್​ಡಿಎ ಪರೀಕ್ಷೆಯನ್ನು 2021 ಜ. 23 ಮತ್ತು 24ರಂದು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಅದೇ ದಿನ ಸಂಜೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಿ, ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಿತ್ತು. 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೆಪಿಎಸ್​ಸಿ ಪರೀಕ್ಷಾ ವಿಭಾಗದ ಶೀಘ್ರಲಿಪಿಗಾರ್ತಿ ಸನಾ ಬೇಡಿ ಸೇರಿ 18 ಮಂದಿ ಆರೋಪಿಗಳನ್ನು ಸಿಸಿಬಿ ವಿಚಾರಣೆ ನಡೆಸಿದಾಗ ಅಕ್ರಮ ಮತ್ತಷ್ಟು ಬಯಲಾಗಿತ್ತು.

ಏನಿದು ಪೆನ್ಸಿಲ್ ಶೇಡ್?: ಹುದ್ದೆಗಳನ್ನು ಡೀಲ್ ಮಾಡಲು ಮಧ್ಯವರ್ತಿಗಳು ಪರಿಣಾಮಕಾರಿ ಹಾಗೂ ಸುರಕ್ಷಿತವಾದ ಪೆನ್ಸಿಲ್ ಶೇಡ್ ಮಾರ್ಗ ಅನುಸರಿಸುತ್ತಾರೆ. ಮಧ್ಯವರ್ತಿಗಳ ಸಂಪರ್ಕದಲ್ಲಿರುವ ಅಭ್ಯರ್ಥಿಗಳು ಪೂರ್ವ ಸೂಚನೆ ಮೇರೆಗೆ ಪರೀಕ್ಷೆಗೆ ಹಾಜರಾಗಿ ಉತ್ತರ ಪತ್ರಿಕೆ ಒಎಂಆರ್ ಅಲ್ಲಿ ಖಾಲಿ ಬಿಡುತ್ತಾರೆ. ಪ್ರತಿ ಪುಟದಲ್ಲಿ 10 ಪ್ರಶ್ನೆಗಳ ಸಾಲುಗಳಿದ್ದರೆ, ಇಲ್ಲಿ ಕೇವಲ ಒಂದು ಪ್ರಶ್ನೆ ಮಾತ್ರ ಶೇಡ್ ಮಾಡಿ ಉಳಿದವನ್ನು ಖಾಲಿ ಬಿಡುತ್ತಾರೆ. ಆನಂತರ ಮಧ್ಯವರ್ತಿಗಳು ಉಳಿದ ಉತ್ತರಗಳಿಗೆ ಸರಿಯಾದ ಉತ್ತರಗಳನ್ನು ಶೇಡ್ ಮಾಡಿ ಹೆಚ್ಚಿನ ಅಂಕ ಲಭಿಸುವಂತೆ ಮಾಡುತ್ತಾರೆಂದು ಪರೀಕ್ಷೆ ಬರೆದಿರುವ ಕೆಲವರು ಅಭ್ಯರ್ಥಿಗಳು ತಿಳಿಸುತ್ತಾರೆ.

ಡೀಲ್ ಹೇಗೆ?: ಎಫ್​ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಯಾದ ಬಳಿಕ ವಿಜಯವಾಣಿ, ಕೆಪಿಎಸ್​ಸಿ ಹುದ್ದೆಗಳು ಯಾವ ರೀತಿ ಡೀಲ್ ಆಗುತ್ತವೆ ಎಂಬುದನ್ನು ಡೀಲ್​ಗೆ ಒಳಗಾಗಿದ್ದ ಕೆಲವು ಅಭ್ಯರ್ಥಿಗಳಿಂದಲೇ ಮಾಹಿತಿ ಪಡೆದು ಜ.25ರಂದು ‘ಕೆಪಿಎಸ್​ಸಿ ಫುಲ್ ಡೀಲ್’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಪ್ರತಿ ಹುದ್ದೆ 15ರಿಂದ 20 ಲಕ್ಷ ರೂ.ಗೆ ಡೀಲ್ ಆಗುತ್ತಿರುವುದನ್ನು ವಿವರವಾಗಿ ತಿಳಿಸಲಾಗಿತ್ತು.

ಚಿಹ್ನೆಗಳು ಏಕೆ?: ಬಹುತೇಕ ಅಭ್ಯರ್ಥಿಗಳು ಉತ್ತರ ಪತ್ರಿಕೆಗಳನ್ನು ಗುರುತುಹಿಡಿಯಲು ಚಿಹ್ನೆಗಳನ್ನು ಬಳಕೆ ಮಾಡುತ್ತಾರೆ. ಈ ತಂತ್ರ ಮೊದಲಿನಿಂದಲೂ ಜಾರಿಯಲ್ಲಿದೆ. ಉತ್ತರ ಪತ್ರಿಕೆಗಳ ಮೇಲೆ ಧರ್ಮದ ಚಿಹ್ನೆಗಳು, ಇಲ್ಲವೆ, ವಿಭಿನ್ನವಾಗಿ ಏನಾದರೂ ಗುರುತು ಮಾಡುವುದು. ಈ ಬಾರಿಯಾದರೂ ನನ್ನನ್ನು ಪಾಸ್ ಮಾಡುವಂತೆ ವಿಳಾಸ, ದೂರವಾಣಿ ಸಂಖ್ಯೆ ಬರೆದು ಮನವಿ ಮಾಡುವುದು ಸಹ ಕಂಡು ಬಂದಿದೆ.

ಇದೇ ಮೊದಲಲ್ಲ: 2019ರಲ್ಲಿ ಜೂನ್​ನಲ್ಲಿ ಆಯೋಗ ನಡೆಸಿದ್ದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ 12 ಅಭ್ಯರ್ಥಿಗಳನ್ನು ಆಯೋಗ ಡಿಬಾರ್ ಮಾಡಿತ್ತು. ಅಭ್ಯರ್ಥಿ ಓರ್ವ ಪರೀಕ್ಷೆ ಬರೆದು ಆನಂತರ ಒಎಂಆರ್ ಅನ್ನು ಪರೀಕ್ಷಾ ಸಂವೀಕ್ಷಕರಿಗೆ ನೀಡುವ ಬದಲು ತಾನೇ ತೆಗೆದುಕೊಂಡು ಹೋಗಿದ್ದು ಗಮನ ಸೆಳೆದಿತ್ತು. ಆಯೋಗ ಆತನಿಗೆ ಮುಂದಿನ 3 ಪರೀಕ್ಷೆಗಳಿಗೆ ಅವಕಾಶ ನೀಡದೆ, ಡಿಬಾರ್ ಮಾಡಿತ್ತು.

ಈ ರೀತಿ ಒಎಂಆರ್​ನಲ್ಲಿ ನಿಯಮಗಳನ್ನು ಪಾಲಿಸ ದೆಯೇ ತಪು್ಪ ಮಾಡುವುದು ಮೊದಲಿನಿಂದಲೂ ಇದೆ. ಯಾವುದೇ ಮುಲಾಜು ಇಲ್ಲದೆ, ರದ್ದು ಮಾಡುತ್ತೇವೆ. ಸದ್ಯ ಎಫ್​ಡಿಎ ಹುದ್ದೆ ಪ್ರಕ್ರಿಯೆ ಪ್ರಗತಿಯಲ್ಲಿ ರುವುದರಿಂದ ಈ ಬಗ್ಗೆ ಏನನ್ನೂ ಹೇಳುವುದು ಅಸಾಧ್ಯ.

| ಜಿ.ಸತ್ಯವತಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ

ಇಂದು ಎಸ್​ಡಿಎ ಪರೀಕ್ಷೆ: ಕರ್ನಾಟಕ ಲೋಕಸೇವಾ ಆಯೋಗ ಆಯೋಜಿಸುವ ದ್ವಿತೀಯ ದರ್ಜೆ ಸಹಾಯಕರ(ಎಸ್​ಡಿಎ) ಹುದ್ದೆಗಳ ನೇಮಕಾತಿಗೆ ಭಾನುವಾರ (ಸೆ.19) ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದು 3.10 ಲಕ್ಷ ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಖಾಲಿ ಇರುವ 1,323 ಹುದ್ದೆಗಳಿಗೆ ಒಟ್ಟು 3,10,332 ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ರಾಜ್ಯದ ಎಲ್ಲ 31 ಜಿಲ್ಲಾ ಕೇಂದ್ರ ಸೇರಿ23 ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net