ಭೂಸ್ವಾಧೀನ ಪ್ರಕ್ರಿಯೆ ಮುಗಿಸಲು ಗಡುವು

byr meeting
ಸಂಸದ ಬಿ.ವೈ.ರಾಘವೇಂದ್ರ ಅವರು ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಗುರುದತ್ತ ಹೆಗಡೆ, ಮಿಥುನ್‌ಕುಮಾರ್, ಪ್ರದೀಪ್ ಪುರಿ, ನಜ್ಮಾ ಬಾನು, ಯತೀಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸಲು ಜು.31ಕ್ಕೆ ಗಡುವು ನಿಗದಿ ಮಾಡಲಾಗಿದೆ. ಹಾಗಾಗಿ ಈಗಿನಿಂದಲೇ ಕೆಲಸ ಆರಂಭಿಸಿ ಎಂದು ಅಧಿಕಾರಿಗಳಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಖಡಕ್ ಸೂಚನೆ ನೀಡಿದರು.

ಚುನಾವಣೆ ಕಾರಣದಿಂದ ಭೂಸ್ವಾಧೀನ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ. ಇನ್ನು ತಡ ಮಾಡುವುದರಲ್ಲಿ ಅರ್ಥವಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಕೆಲಸ ಆರಂಭಿಸಿ. ಕೇಂದ್ರದ ಬಜೆಟ್ ಮೂಲಕ ಯೋಜನೆಗೆ ಹಣ ಮಂಜೂರು ಮಾಡಿಸಲು ನಾನು ಪ್ರಯತ್ನಿಸುತ್ತೇನೆ ಎಂದರು.
ನಾಲ್ಕನೇ ಬಾರಿ ಲೋಕಸಭಾ ಸದಸ್ಯರಾದ ಬಳಿಕ ಬುಧವಾರ ಮೊದಲ ಸಭೆ ನಡೆಸಿದ ಅವರು, ರೈಲ್ವೆ ಯೋಜನೆಗಳಿಗೆ ಸಂಬಂಧಿಸಿ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಕುಂಟುತ್ತ ಸಾಗುತ್ತಿರುವ ರೈಲ್ವೆ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದರು.
ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ಶಿವಮೊಗ್ಗ- ಶಿಕಾರಿಪುರ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದೆ. ಎರಡನೇ ಹಂತದಲ್ಲಿ ಶಿಕಾರಿಪುರ- ರಾಣೆಬೆನ್ನೂರು ಮಾರ್ಗಕ್ಕೆ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿಲ್ಲ. ಏನಾದರೂ ಅಡೆತಡೆಗಳಿದ್ದರೆ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಗತಿಶಕ್ತಿ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಸವಳಂಗ ಹಾಗೂ ಕಾಶಿಪುರ ರೈಲ್ವೆ ಮೇಲ್ಸೇತುವೆಗಳಲ್ಲಿ ಉಂಟಾಗಿರುವ ಸಣ್ಣ ಪುಟ್ಟ ನ್ಯೂನ್ಯತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಡಿಸಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಮೈಸೂರು ನೈಋತ್ಯ ರೈಲ್ವೆ ಡೆಪ್ಯೂಟಿ ಚೀಫ್ ಇಂಜಿನಿಯರ್ ಪ್ರದೀಪ್ ಪುರಿ, ಹಿರಿಯ ಅಧಿಕಾರಿಗಳಾದ ಮೂರ್ತಿರಾಜು, ವೂಟನ್, ಹರ್ಷವರ್ಧನ್, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ವಿಶೇಷ ಭೂಸ್ವಾಧೀನ ಅಧಿಕಾರಿ ನಜ್ಮಾ ಬಾನು, ಸಾಗರ ಉಪವಿಭಾಗಾಧಿಕಾರಿ ಯತೀಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದೃಷ್ಟಿ ಜೈಸ್ವಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net