ನೇಣುಬಿಗಿದ ಸ್ಥಿತಿಯಲ್ಲಿದ್ದ ಶವದ ಎದುರು ಶಾಸಕರ ಫೋಟೋ ಪೋಸ್​..! ತಾವು ಪರಿಹಾರ ಕೊಟ್ಟಿದ್ದನ್ನು ಹೇಳೋಕೆ ಹೋಗಿ ವಿವಾದ ಸೃಷ್ಟಿಸಿದ್ರು ಈ ಎಂಎಲ್​ಎ

suside april
Published on

ತುಮಕೂರು: ಆತ್ಮಹತ್ಯೆ ಮಾಡಿಕೊಂಡ ರೈತನ ಮೃತದೇಹ ಎದುರು ನಿಂತು ಫೋಟೋ ತೆಗೆಸಿಕೊಂಡಿದ್ದಲ್ಲದೆ, ಆ ಫೋಟೋವನ್ನು ಫೇಸ್​ಬುಕ್​​ಗೆ ಹಾಗುವ ಮೂಲಕ ವಿವಾದ ಸೃಷ್ಟಿಸಿದ್ದಾರೆ ಈ ಶಾಸಕ. ಸದ್ಯ ಅವರ ಫೇಸ್​ಬುಕ್​ ಅಕೌಂಟ್​ನಲ್ಲಿ ಫೋಟೋ ಕಾಣಿಸುತ್ತಿಲ್ಲ...!

ಶಿರಾ ಜೆಡಿಎಸ್​ ಶಾಸಕ ಬಿ.ಸತ್ಯನಾರಾಯಣ ಅವರು ಮಾಡಿಕೊಂಡ ಎಡವಟ್ಟು ಇದು. ದೇವರಹಳ್ಳಿಯಲ್ಲಿ ರೈತ ಗಂಗಾಧರ್​ (60) ಎಂಬಾತ ಸಾಲಭಾದೆಯಿಂದ ತಮ್ಮ ಜಮೀನಿನಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕೆಲವು ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಿರಾ ಶಾಸಕ ಸತ್ಯನಾರಾಯಣ್​, ಆ ನೇಣು ಬಿಗಿದ ಸ್ಥಿತಿಯಲ್ಲಿದ್ದ ರೈತನ ಶವದ ಎದುರು ಫೋಟೋಕ್ಕೆ ಪೋಸ್​​ ಕೊಟ್ಟಿದ್ದಾರೆ. ಅವರೊಂದಿಗೆ ಇನ್ನೂ ಕೆಲವು ಅಧಿಕಾರಿಗಳೂ ಇರುವುದನ್ನು ನೋಡಬಹುದು.

ಆ ಫೋಟೋವನ್ನು ಸ್ವತಃ ಶಾಸಕರು ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿಕೊಂಡು, ಸಾಲಭಾದೆಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ನೀಡಿದ್ದೇನೆ. ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ದೊರಕಿಸಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದರು.

ಆದರೆ ಶವದ ಎದುರು ಗ್ರೂಪ್​ ಫೋಟೋಕ್ಕೆ ಪೋಸ್​ ಕೊಟ್ಟ ಶಾಸಕರ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು. ಈಗ ಅವರ ಫೇಸ್​ಬುಕ್​ನಲ್ಲಿ ಕಾಣೆಯಾಗಿರುವ ಫೋಟೋ ಇಲ್ಲಿದೆ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net