ಕೇಂದ್ರ ಬಜೆಟ್​ 2020: ಹೂಡಿಕೆದಾರರ ಖುಷಿಪಡಿಸಲು ಡಿಡಿಟಿ ರದ್ದು

HOODIKE
Published on

ಹೂಡಿಕೆದಾರರನ್ನು ಖುಷಿಪಡಿಸಲು ಕೆಲ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತುತ, ಕಂಪನಿಗಳು ತಮ್ಮ ಷೇರುದಾರರಿಗೆ ಪಾವತಿಸಿದ ಲಾಭಾಂಶದ ಮೇಲೆ ಶೇ.15 ದರದಲ್ಲಿ ‘ಲಾಭಾಂಶದ ವಿತರಣಾ ತೆರಿಗೆ’ (ಡಿಡಿಟಿ) ಪಾವತಿಸಬೇಕಾಗುತ್ತದೆ. ಇದನ್ನು ಕೈಬಿಡುವುದಾಗಿ ಕೇಂದ್ರ ಹೇಳಿದೆ.

ಡಿಡಿಟಿಯನ್ನು ವಿಧಿಸುವ ವ್ಯವಸ್ಥೆಯು ಹೂಡಿಕೆದಾರರಿಗೆ ಮತ್ತು ಅದರಲ್ಲೂ ವಿಶೇಷವಾಗಿ ಲಾಭಾಂಶದ ಆದಾಯವನ್ನು ತಮ್ಮ ಆದಾಯದಲ್ಲಿ ಸೇರಿಸಿಕೊಂಡರೆ ತೆರಿಗೆ ಹೊರೆ ಹೆಚ್ಚಿಸುತ್ತದೆ ಎಂದು ವಾದವಿದೆ. ವಿದೇಶಿ ಹೂಡಿಕೆದಾರಿಗೆ ಡಿಡಿಟಿಯ ಕ್ರೆಡಿಟ್ ಲಭ್ಯವಿಲ್ಲದಿರುವುದು ಅವರಿಗೆ ಈಕ್ವಿಟಿ ಕ್ಯಾಪಿಟಲ್ ಮೇಲಿನ ಆದಾಯದ ದರವನ್ನು ಕಡಿಮೆ ಮಾಡುತ್ತದೆ.

ಭಾರತೀಯ ಈಕ್ವಿಟಿ ಮಾರುಕಟ್ಟೆಯ ಆಕರ್ಷಣೆಯನ್ನು ಹೆಚ್ಚಿಸಲು ಮತ್ತು ದೊಡ್ಡ ವರ್ಗದ ಹೂಡಿಕೆದಾರರಿಗೆ ಪರಿಹಾರವನ್ನು ನೀಡುವ ಸಲುವಾಗಿ, ಡಿಡಿಟಿಯನ್ನು ತೆಗೆದುಹಾಕಲು ಮತ್ತು ಡಿವಿಡಿ ಪಾವತಿಸಲು ಕಂಪನಿಗಳು ಅಗತ್ಯವಿಲ್ಲದಿರುವ ಲಾಭಾಂಶ ತೆರಿಗೆಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡುವುದಾಗಿ ಹಣಕಾಸು ಸಚಿವರು ಹೇಳಿದ್ದಾರೆ.

ಇನ್ನು ಮುಂದೆ ಲಾಭಾಂಶವನ್ನು ಸ್ವೀಕರಿಸುವವರಿಂದ ಮಾತ್ರ ನಿರ್ಧರಿತ ದರದಂತೆ ತೆರಿಗೆ ವಿಧಿಸಲಾಗುತ್ತದೆ. ಇದಲ್ಲದೆ, ಕಂಪನಿಯು ಅದರ ಅಂಗಸಂಸ್ಥೆಯಿಂದ ಪಡೆಯುವ ಲಾಭಾಂಶಕ್ಕೆ ರಿಯಾಯಿತಿ ನೀಡಲಾಗುತ್ತಿದೆ. ಒಟ್ಟಾರೆ ಡಿಡಿಟಿಯನ್ನು ತೆಗೆದುಹಾಕುವುದರಿಂದ ಅಂದಾಜು ವಾರ್ಷಿಕ ಆದಾಯವು 25,000 ಕೋಟಿ ರೂ. ವರೆಗೆ ಹೆಚ್ಚಳವಾಗಬಹುದೆಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಹೂಡಿಕೆದಾರರಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಪೌಷ್ಟಿಕತೆ ಕೊರತೆ ನೀಗಿಸಲು ಆದ್ಯತೆ

ಮಹಿಳೆ ಮತ್ತು ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಪ್ರಸಕ್ತ ಸಾಲಿನ ಬಜೆಟ್​ನಲ್ಲಿ 35,600 ಕೋಟಿ ರೂ. ಹಾಗೂ ಮಹಿಳೆಯರ ಅಭಿವೃದ್ಧಿಗೆ ರೂಪಿಸಿರುವ ನಿರ್ದಿಷ್ಟ ಕಾರ್ಯಕ್ರಮಗಳಿಗಾಗಿ 28,600 ಕೋಟಿ ರೂ. ಮೀಸಲಿಡಲಾಗಿದೆ.

ಮಕ್ಕಳು (0-6 ವರ್ಷ), ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶ ಮಟ್ಟ ಸುಧಾರಿಸಲು 2017-18ರಲ್ಲಿ ಪ್ರಾರಂಭಿಸಿದ ‘ಫೋಷಣ್ ಅಭಿಯಾನ್’ನಿಂದ ಉತ್ತಮ ಫಲಿತಾಂಶ ದೊರೆತಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿಗೆ ಪೌಷ್ಟಿಕಾಂಶ ಕೊರತೆ ನೀಗಿಸಲು ಅಗತ್ಯ ಆರ್ಥಿಕ ನೆರವು ನೀಡಲು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ತಾಯಂದಿರ ಮರಣ ಪ್ರಮಾಣ ತಗ್ಗಿಸುವ ಜತೆಗೆ ಪೌಷ್ಟಿಕಾಂಶ ಮಟ್ಟ ಸುಧಾರಿಸಲು ಗರ್ಭಿಣಿಯರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

ಇದಕ್ಕಾಗಿ ಗರ್ಭಿಣಿಯರ ಆರೋಗ್ಯದ ಬಗ್ಗೆ ನಿಗಾ ಇಡಲು ಕಾರ್ಯಪಡೆ ನಿಯೋಜನೆಗೆ ಕ್ರಮ ವಹಿಸಲಾಗಿದೆ. ಮಹಿಳೆ ಹಾಗೂ ಮಕ್ಕಳ ಪೌಷ್ಟಿಕಾಂಶ ಮಟ್ಟ ಕುರಿತು ಸಕಾಲಕ್ಕೆ ಮಾಹಿತಿ ನೀಡಲು ಅನುವಾಗುವಂತೆ 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ ಫೋನ್ ಒದಗಿಸಿದ್ದು, ಈ ಮೂಲಕ ಮಹಿಳೆ ಹಾಗೂ ಮಕ್ಕಳ ಸ್ಥಿತಿಗತಿ ತಿಳಿದು ಪೂರಕವಾಗಿ ಸ್ಪಂದಿಸಲು ಸಾಧ್ಯವಾಗಿದೆ.

‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲ ಹಂತದ ಶಿಕ್ಷಣದಲ್ಲೂ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ ಗಂಡು ಮಕ್ಕಳಿಗಿಂತ ಹೆಚ್ಚಾಗಿದೆ. ಒಟ್ಟಾರೆ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗುವ ಮಕ್ಕಳಲ್ಲಿ ಬಾಲಕರ ಸಂಖ್ಯೆ(89.28)ಗೆ ಹೋಲಿಸಿದೆ ಬಾಲಕಿಯರ ಸಂಖ್ಯೆ (94.32)ಹೆಚ್ಚಾಗಿದೆ. ಪ್ರೌಢಶಿಕ್ಷಣ ಹಂತದಲ್ಲಿ ಬಾಲಕಿಯರ ದಾಖಲಾತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net