

ಬೆಂಗಳೂರು: ಟ್ರಕ್ನಲ್ಲಿ ಹಸುವಿನ ಮಾಂಸ ತ್ಯಾಜ್ಯವನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದು, ಪೊಲೀಸರು ತನಿಖೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ನಟಿ ಐಂದ್ರಿತಾ ರೇ ಆರೋಪಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟನೆ ನೀಡಿದ್ದಾರೆ.
ಟ್ರಕ್ನಲ್ಲಿದ್ದ ಮಾಂಸದ ತ್ಯಾಜ್ಯವನ್ನು ಪರಿಶೀಲನೆ ನಡೆಸಲಾಗಿದೆ. ಟ್ರಕ್ನಲ್ಲಿದ್ದದ್ದು ಹಸುವಿನ ಮಾಂಸದ ತ್ಯಾಜ್ಯವಲ್ಲ. ಮೂಳೆಗಳು, ಕೊಂಬು ಹಾಗೂ ಚರ್ಮ ಹಸುವಿನದ್ದಲ್ಲ. ಆ ತ್ಯಾಜ್ಯವೂ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಡಿಸಿಪಿ ಬಾಬಾ ಅವರು ಸ್ಪಷ್ಟನೆ ನೀಡಿದ್ದಾರೆ.
ಕಳೆದ ರಾತ್ರಿ ಟ್ರಕ್ವೊಂದರಲ್ಲಿ ಗೋವಿನ ದೇಹದ ಭಾಗಗಳು ಕಂಡುಬಂದಿವೆ ಎಂದು ಹೇಳಿರುವ ನಟಿ, ಸದ್ಯ ಆ ಟ್ರಕ್ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಬಳಿ ಇದೆ ಎಂದೂ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಗೋಮಾಂಸದ ತ್ಯಾಜ್ಯ ಇರುವ ಈ ಟ್ರಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ದಾಖಲು ಮಾಡಲು ಪೊಲೀಸರು ಹಿಂಜರಿಯುತ್ತಿದ್ದಾರೆ ಎಂದಿರುವ ಐಂದ್ರಿತಾ, ಬೆಂಗಳೂರು ಪೊಲೀಸರು, ಪೊಲೀಸ್ ಕಮಿಷನರ್ ಅವರಿಗೂ ಮೆನ್ಷನ್ ಮಾಡಿದ್ದರು. ಮಾತ್ರವಲ್ಲ, ಗೋಹತ್ಯೆ ಅಪರಾಧ ಎಂದಿರುವ ಐಂದ್ರಿತಾ, ಈ ಕುರಿತಂತೆ ಪ್ರಧಾನಿ ಮೋದಿಯವರ ಎಕ್ಸ್ ಹ್ಯಾಂಡಲ್ಗೂ ಮೆನ್ಷನ್ ಮಾಡಿ, ಗಮನ ಸೆಳೆಯಲು ಯತ್ನಿಸಿದರು.
ಇದೀಗ ಐಂದ್ರಿತಾ ರೇ ಆರೋಪಕ್ಕೆ ಸ್ವತಃ ಡಿಸಿಪಿ ಅವರೇ ಸ್ಪಷ್ಟನೆ ನೀಡಿದ್ದು, ವಿವಾದಕ್ಕೆ ತೆರೆಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)