

ಬೆಂಗಳೂರು: ಮತ್ತಷ್ಟು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಕೂರಗ ಕಾಂಗ್ರೆಸ್ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದು, ಬುಧವಾರ ಕೂಡ ಮುಖ್ಯಮಂತ್ರಿಯಾದಿಯಾಗಿ ಆಡಳಿತ ಪಕ್ಷದ ಸಚಿವ, ಶಾಸಕರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಪ್ರಸ್ತುತ ಡಿ.ಕೆ.ಶಿವಕುಮಾರ್ ಒಬ್ಬರು ಮಾತ್ರ ಉಪ ಮುಖ್ಯಮಂತ್ರಿಯಾಗಿದ್ದು, ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬ ಬೇಡಿಕೆ ಹೊಸದೇನಲ್ಲ. ಲೋಕಸಭೆ ಚುನಾವಣೆಗೆ ಮುನ್ನವೂ ದನಿ ಎದ್ದಿತ್ತು, ಇದೀಗ ಪುನಃ ಒತ್ತಡ ತಂತ್ರ ಹೆಚ್ಚಾಗಿದೆ.
ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹೈಕಮಾಂಡ್ ಏನು ಹೇಳುತ್ತದೋ ಅದೇ ಅಂತಿಮ’ ಎಂದು ಹೇಳಿದರು. ಈ ಮೂಲಕ ಈ ಚರ್ಚೆಗೆ ಹೊಸ ದಿಕ್ಕು ತೋರಿಸಿದ್ದಾರೆ.
ಈ ರೀತಿ ಹೇಳಿಕೆ ಅಗತ್ಯವಿಲ್ಲ ಎಂದು ಸಿಎಂ ಕಡೆಯಿಂದ ಪ್ರತಿಕ್ರಿಯೆ ಬರಬಹುದೆಂದು ಕಾಂಗ್ರೆಸ್ ಮುಖಂಡರು ನಿರೀಕ್ಷೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಹೈಕಮಾಂಡ್ ಕಡೆ ಬೊಟ್ಟು ಮಾಡುವ ಮೂಲಕ ಅಚ್ಚರಿ ನಡೆ ಪ್ರದರ್ಶಿಸಿದ್ದಾರೆ.
ಹಾಗೆಯೇ, ಈ ಚರ್ಚೆಯಲ್ಲಿ ಮುಂಚೂಣಿಯಲ್ಲಿ ಕಾಣಿಸುತ್ತಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬುಧವಾರ ಪುನಃ ಚರ್ಚೆಯನ್ನು ಮುಂದುವರಿಸಿದ್ದಾರೆ.
ಹೆಚ್ಚುವರಿ ಡಿಸಿಎಂ ಹುದ್ದೆ ಆಗಬೇಕು ಎಂದು ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ. ಶಾಸಕರಾದ ಬಾಲಕೃಷ್ಣ, ಶಿವಗಂಗಾ ಅವರವರ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ದಲಿತ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಬಹಳ ದಿನಗಳಿಂದಲೂ ಅಂತಹದ್ದೊಂದು ಬೇಡಿಕೆ ಇದೆ. ಸಮುದಾಯದಲ್ಲೂ ಕೂಡ ನಮ್ಮವರೊಬ್ಬರು ಡಿಸಿಎಂ ಆಗಬೇಕೆಂಬ ಅಭಿಲಾಷೆ ಇರಲಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರೆ, ಹೆಚ್ಚುವರಿ ಡಿಸಿಎಂ ಮಾಡುವುದಾದರೆ ಡಿ.ಕೆ.ಶಿವಕುಮಾರ್ ಅವರನ್ನು ಮೊದಲು ಸಿಎಂ ಮಾಡಲಿ. ನಂತರ ಎಷ್ಟಾದರೂ ಡಿಸಿಎಂ ಮಾಡಿಕೊಳ್ಳಲಿ. ಡಿಕೆಶಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಡಿಕೆಶಿ ಆಪ್ತ ಶಾಸಕ ಬಸವರಾಜ ಶಿವಗಂಗಾ ಹೇಳಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಪ್ರತಿಕ್ರಿಯೆ ನೀಡಿ, ಈ ವಿಚಾರ ಸಾಕಷ್ಟು ಗೊಂದಲ ಆಗುತ್ತಿದೆ. ಈ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಕೂಡ ಹೇಳಿದೆ. ಡಿಸಿಎಂ ಹುದ್ದೆ ಸೃಷ್ಟಿ ಟೈಂ ಬಂದರೆ ನನ್ನ ಅಭಿಪ್ರಾಯವನ್ನು ಹೈಕಮಾಂಡ್ ಮುಂದೆ ಹೇಳುತ್ತೇನೆ ಎಂದರು.
ಈ ವಿಚಾರವಾಗಿ (ಡಿಸಿಎಂ ಬೇಡಿಕೆ ಚರ್ಚೆ) ಮುಖ್ಯಮಂತ್ರಿಗಳನ್ನು ಕೇಳಿ. ಈ ಬಗ್ಗೆ ಉತ್ತರ ನೀಡಲು ಅವರೇ ಸೂಕ್ತ ವ್ಯಕ್ತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಖಡಕ್ ಅಭಿಪ್ರಾಯ ನೀಡಿದರು.