ಕಲಾವಿದರಿಗೆ ಡಿಸಿಎಂ ಧಮ್ಕಿ: ಬಿಜೆಪಿ ಕೆಂಡಾಮಂಡಲ | R Ashok slams DCM

DK Ashok
Published on

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೇಕೆದಾಟು ಚಳವಳಿಯಲ್ಲಿ ಚಿತ್ರನಟರು ಪಾಲ್ಗೊಳ್ಳಲಿಲ್ಲವೆಂಬ ಕಾರಣಕ್ಕೆ ಚಿತ್ರನಟರಿಗೆ ನಟ್ಟು, ಬೋಲ್ಟ್ ಟೈಟ್ ಮಾಡುವುದು ಹೇಗೆಂಬುದು ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ನೇರವಾಗಿ ಹೇಳುವ ಮೂಲಕ ಧಮ್ಕಿ ಹಾಕಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಕೆಂಡಾಮಂಡಲವಾಗಿದೆ.

ಕಲಾವಿದರು ಯಾವುದೇ ಪಕ್ಷದ ಸ್ವತ್ತಲ್ಲ, ಜೀತದಾಳುಗಳಲ್ಲ. ಅವರವರ ವಿವೇಚನೆ ಬಳಸಿಕೊಂಡು ಮುನ್ನಡೆಯುತ್ತಾರೆ. ಕಷ್ಟ ಕಾಲದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದಾರೆ.

ಹೋರಾಟದ ಕಾಲಕ್ಕೆ ನಮ್ಮ ರಾಜ್ಯದ ವ್ಯಾಪ್ತಿಯಲ್ಲಿರುವ ಮೇಕೆದಾಟು ಯೋಜನೆ ಕಾಮಗಾರಿಗೆ ಚಾಲನೆ ನೀಡಲು ಯಾರದೇ ಅನುಮತಿ ಬೇಕಾಗಿಲ್ಲ ಎಂದಿದ್ದನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಇನ್ನಿತರರು ನೆನಪಿಸಿದ್ದಾರೆ.

ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸಿತಲ್ಲ, ಇನ್ನೂ ಆರಂಭಿಸಿಲ್ಲವೇಕೆ ? ಎಂದು ಬಿಜೆಪಿ ನಾಯಕರು ಪ್ರಶ್ನಿಸಿ, ರಾಜಕೀಯಕ್ಕಾಗಿ ಈ ಹೋರಾಟ ನಡೆಸಿದ್ದು ಈಗ ನಿಚ್ಚಳವಾಗಿದೆ ಎಂದು ಕುಟುಕಿದ್ದಾರೆ.

ಕಲಾವಿದರು ಗುಲಾಮರಲ್ಲ

ಸುದ್ದಿಗಾರರಿಗೆ ಆರ್.ಅಶೋಕ್ ಪ್ರತಿಕ್ರಿಯಿಸಿ, ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಿದ ಶಾಸಕರಿಗೆ ತಗ್ಗಿಬಗ್ಗಿ ನಡೆಯಬೇಕು ಎಂದಿದ್ದ ಡಿ.ಕೆ.ಶಿವಕುಮಾರ್ ಅದೇ ಚಾಳಿ ಮುಂದುವರಿಸಿ, ಸಿನಿಮಾ ಕಲಾವಿದರಿಗೆ ಧಮ್ಕಿ ಹಾಕಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.

ಸಚಿವ ಎನ್.ರಾಜಣ್ಣ ಸೇರಿ ವಿರೋಧಿಸುತ್ತಿರುವವರಿಗೆ ಮೊದಲು ನಟ್ಟು ಬೋಲ್ಟ್ ಟೈಟ್ ಮಾಡಲಿ. ಕಲಾವಿದರು ಕಾಂಗ್ರೆಸ್ ಪಕ್ಷದ ಗುಲಾರಮರಲ್ಲ, ಇವರ ಆಶೀರ್ವಾದ ಪಡೆದು ಸಿನಿಮಾಗಳು ಯಶಸ್ವಿಯಾಗುತ್ತಿಲ್ಲ. ಡಿ.ಕೆ.ಶಿವಕುಮಾರ್ ಧಮ್ಕಿ ಹಾಕುವುದರಲ್ಲಿ ಮಾದರಿ ಎಂದು ಆರ್.ಅಶೋಕ್ ವಾಗ್ದಾಳಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net