

ಬೆಂಗಳೂರು: ಮೂರು ತಿಂಗಳಿಂದ ಬಂದಿಲ್ಲ. ಈ ಹಣವನ್ನು ನಾವು ಹಾಕುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದು ಉಪಮುಖ್ಯಮಂತ್ರಿ DK ಶಿವಕುಮಾರ್ ತಿಳಿಸಿದರು.
ಈ ಹಿಂದೆ ಬಿಜೆಪಿಯ ಮುಖ್ಯಮಂತ್ರಿಗಳು ಬೆಂಗಳೂರು ರೌಂಡ್ಸ್ ಹಾಕಿದ್ದು, ಫೋಟೋಶೂಟ್ ಮಾಡಲಿಕ್ಕಾ? ಆಗ ಅಶೋಕ್ ಅವರು ಅವರ ಕಾರಿನಲ್ಲಿ ಕೂತು ಹೋಗುತ್ತಿದ್ದರಲ್ಲ ಎಂದು ಸದಾಶಿವನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ, ಬಿಜೆಪಿ ಮುಖ್ಯಮಂತ್ರಿಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟಿಗಾ ಎಂಬ ಅಶೋಕ್ ಟೀಕೆಗೆ ತಿರುಗೇಟು ನೀಡಿದರು.
ಬಿಜೆಪಿವರು ಇರುವುದೇ ಟೀಕೆ ಮಾಡಲು. ಬಿಜೆಪಿಗೆ ಬೇರೆ ಏನು ಕೆಲಸ ಇದೆ. ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಇದು ದೊಡ್ಡ ಮೊತ್ತದ ಯೋಜನೆ, ಇದರ ಗುಣಮಟ್ಟ ಸರಿಯಾಗಿದೆಯೇ? ಸಧ್ಯ 150 ಕಿ.ಮೀ ಉದ್ದದ ರಸ್ತೆ ಕಾಮಗಾರಿ ನಡೆಯುತ್ತಿದೆ. 1,700 ಕೋಟಿ ಮೊತ್ತದ ಯೋಜನೆ. ಇದನ್ನು ಕಾಲಮಿತಿಯೊಳಗೆ ಮುಗಿಸುವ ಗುರಿ ಹೊಂದಿದ್ದೇವೆ. ಮುಂದೆಯೂ ಇಂತಹ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಈ ವಿಚಾರವಾಗಿ ಸ್ಥಳೀಯ ಶಾಸಕರ ಅಭಿಪ್ರಾಯ ಏನಿದೆ ಎಂದು ಚರ್ಚೆ ಮಾಡಿದ್ದೇನೆ. ಮತ್ತೆ ಕೆಲವು ಯೋಜನೆ ಕಾಮಗಾರಿ ಆದೇಶ ಆಗಿಲ್ಲ. ಬೆಂಗಳೂರಿನ ರಸ್ತೆಗಳನ್ನು ಸುಧಾರಿಸಲು 600 ಕೋಟಿ ರೂ. ಮೊತ್ತದ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.
ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರು ಬೆಂಗಳೂರಿನ ಕೆಲವು ಸಂಚಾರಿ ಯೋಜನೆಗಳ ಬಗ್ಗೆ ಎತ್ತಿರುವ ಪ್ರಶ್ನೆ ಬಗ್ಗೆ ಕೇಳಿದಾಗ, ಅವರು ಏನು ಹೇಳಿದ್ದಾರೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಒಳ್ಳೆಯ ಸಲಹೆ ಕೊಟ್ಟಿದ್ದರೆ ತೆಗೆದುಕೊಳ್ಳುತ್ತೇವೆ. ರಾಜಕಾರಣ ಇದ್ದರೆ ನಾವು ಅದನ್ನು ನಿಭಾಯಿಸುತ್ತೇವೆ ಎಂದರು.