‘ಅಪ್ಪಾ.. ಇದು ನನ್ನ ಕೊನೆಯ ಕರೆ’; ಗಲ್ಲಿಗೇರಿಸುವ ಮುನ್ನ ತಂದೆಯೊಂದಿಗೆ ಮಗಳ ಮಾತು | This Is My Last Call

Untitled design (29)
Published on

ದುಬೈ: ಉತ್ತರ ಪ್ರದೇಶದ ಬಂದಾ ಜಿಲ್ಲೆಯ ನಿವಾಸಿ ಶಹಜಾದಿ ಎಂಬ ಮಹಿಳೆಗೆ ದುಬೈ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಅಬುಧಾಬಿಯ ಅಲ್ ವತ್ಬಾ ಜೈಲಿನಲ್ಲಿ ಬಂಧಿಸಲ್ಪಟ್ಟ 33 ವರ್ಷದ ಮಹಿಳೆ ಶಹಜಾದಿಗೆ ಮರಣದಂಡನೆ ವಿಧಿಸಲಾಗಿದೆ. ಇದು ತನ್ನ ಕೊನೆಯ ಕರೆ(This Is My Last Call) ಎಂದು ಕುಟುಂಬಸ್ಥರೊಂದಿಗೆ ಶಹಜಾದಿ ಮಾತನಾಡಿದ್ದಾರೆ.

ಗಲ್ಲಿಗೇರಿಸುವ ಮುನ್ನ ಆಕೆಯ ಕೊನೆಯ ಆಸೆಯ ಬಗ್ಗೆ ಕೇಳಿದಾಗ, ಶಹಜಾದಿ ತಮ್ಮ ಕುಟುಂಬದೊಂದಿಗೆ ಮಾತನಾಡುವುದು ಎಂದು ಕೇಳಿದ್ದಾರೆ. ಸಹಾನುಭೂತಿಯ ಸಂಕೇತವಾಗಿ ಅಬುಧಾಬಿ ಜೈಲು ಆಡಳಿತವು ಶಹಜಾದಿಗೆ ಅವರ ಕುಟುಂಬದೊಂದಿಗೆ ಅಂತಿಮ ಫೋನ್ ಕರೆ ಮಾಡಲು ಅವಕಾಶ ನೀಡಿತು. ಭಾನುವಾರ (ಫೆಬ್ರವರಿ 16)ದಂದು ಶಹಜಾದಿ ಅವರ ಕುಟುಂಬಕ್ಕೆ ದುಬೈನಿಂದ ಒಂದು ಕರೆ ಬಂದಿತು.

ಈ ಹೃದಯಸ್ಪರ್ಶಿ ಸಂಭಾಷಣೆಯ ಸಮಯದಲ್ಲಿ ಶಹಜಾದಿ ಅವರ ಕುಟುಂಬವನ್ನು ಸಮಾಧಾನಪಡಿಸಿದರು. ಅಪ್ಪಾ ಸಲಾಂ ವಾಲೆಕುಂ ಇದು ಅವರ ಕೊನೆಯ ಕರೆ ಎಂದು ಹೇಳಿದರು.ಶಹಜಾದಿ ಅವರನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದು 24 ಗಂಟೆಗಳ ಒಳಗೆ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಜೈಲು ಕ್ಯಾಪ್ಟನ್ ತಿಳಿಸಿದ್ದಾರೆ ಎಂದು ಕರೆಯಲ್ಲಿ ಬಹಿರಂಗಪಡಿಸಿದ್ದಾರೆ. ಮತ್ತ ಬಂದಾದಲ್ಲಿ ತಮ್ಮ ವಿರೋಧಿಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯುವಂತೆಯೂ ಮನವಿ ಮಾಡಿದರು.

ಶಹಜಾದಿಯ ಅಬುಧಾಬಿ ಪ್ರಯಾಣ 2021ರಲ್ಲಿ ಪ್ರಾರಂಭವಾಯಿತು. ಆಕೆ ಬಂದಾದ ಮತೌಂಧ್ ಪೊಲೀಸ್ ಠಾಣೆ ಪ್ರದೇಶದ ಗೋಯ್ರಾ ಮುಗ್ಲಿ ಗ್ರಾಮದ ನಿವಾಸಿ. ವರದಿಗಳ ಪ್ರಕಾರ ಆಗ್ರಾದ ಉಜೈರ್, ಶಹಜಾದಿಯನ್ನು ಆಗ್ರಾ ಮೂಲದ ದುಬೈನಲ್ಲಿ ವಾಸಿಸುತ್ತಿರುವ ದಂಪತಿಗೆ ಮಾರಾಟ ಮಾಡಿದ್ದಾನೆ. ಬಂದಾ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಈಗ ದುಬೈನಲ್ಲಿ ವಾಸಿಸುತ್ತಿರುವ ದಂಪತಿ ಮತ್ತು ಉಜೈರ್ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದ್ದಾರೆ.

ಶಹಜಾದಿಯವರ ಜೀವನವು ಕಷ್ಟಗಳಿಂದ ಕೂಡಿತ್ತು. ಬಾಲ್ಯದಲ್ಲಿ ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅವರಿಗೆ ಸುಟ್ಟ ಗಾಯಗಳಾಗಿದ್ದವು. 2020ರಲ್ಲಿ ಅವರು ಸಾಮಾಜಿಕ ಜಾಲತಾಣದ ಮೂಲಕ ಆಗ್ರಾದ ಉಜೈರ್ ಅವರೊಂದಿಗೆ ಸಂಪರ್ಕ ಉಂಟಾಗಿದೆ. ಉತ್ತಮ ಜೀವನ ಮತ್ತು ಮುಖದ ಗಾಯಗಳಿಗೆ ಚಿಕಿತ್ಸೆಯ ನಿರೀಕ್ಷೆಯಿಂದ ಆಕರ್ಷಿತರಾದ ಶಹಜಾದಿ 2021ರಲ್ಲಿ ಉಜೈರ್ ಅವರೊಂದಿಗೆ ಆಗ್ರಾಕ್ಕೆ ಪ್ರಯಾಣ ಬೆಳೆಸಿದರು. ಬಳಿಕ ಉಜೈರ್,​​ ಶಹಜಾದಿಯನ್ನು ಅಬುಧಾಬಿಗೆ ಕರೆದೊಯ್ದು ಅವರ ಸಂಬಂಧಿಕರಾದ ಫೈಜ್ ಮತ್ತು ನಾಡಿಯಾ ದಂಪತಿಗೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.

ಅಬುಧಾಬಿಗೆ ತಲುಪಿದ ಬಳಿಕ ಶಹಜಾದಿ ದಂಪತಿಯ ಮಗನನ್ನು ನೋಡಿಕೊಳ್ಳುವ ಕೆಲಸದಲ್ಲಿದ್ದರು. ಅನಿರೀಕ್ಷಿತವಾಗಿ ಮಗು ಮೃತಪಟ್ಟಾಗ ಅದರ ಹೊಣೆಗಾರಿಕೆಯನ್ನು ಶಹಜಾದಿ ಮೇಲೆ ಹೊರಿಸಲಾಗಿದೆ. ದಂಪತಿ ತಮ್ಮ ಮಗನ ಸಾವಿಗೆ ಶಹಜಾದಿ ಕಾರಣ ಎಂದು ಆರೋಪಿಸಿದರು. ತನಿಖೆಯ ನಂತರ ಶಹಜಾದಿ ಬಂಧನಕ್ಕೆ ಮತ್ತು ನಂತರ ಅಬುಧಾಬಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದರು.

ತೀರ್ಪಿನ ನಂತರ, ಶಹಜಾದಿಯ ತಂದೆ ಶಬ್ಬೀರ್ ಖಾನ್ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮಧ್ಯಪ್ರವೇಶಿಸಿ ತನ್ನ ಮಗಳನ್ನು ಉಳಿಸುವಂತೆ ಮನವಿ ಮಾಡಿದರು. ಶಹಜಾದಿ ಮತ್ತು ಆಕೆಯ ತಂದೆ ಮಗುವಿನ ಸಾವು ವೈದ್ಯಕೀಯ ನಿರ್ಲಕ್ಷ್ಯದ ಪರಿಣಾಮ ಎಂದು ವಾದಿಸುತ್ತಾರೆ. ಆದರೆ ದಂಪತಿ ಶಹಜಾದಿ ಅವರ ಮೇಲೆ ಶಹಜಾದಿ ಮೇಲೆ ಆರೋಪ ಹೊರಿಸಿದರು. ಇದರಿಂದಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿ ಅಂತಿಮವಾಗಿ ಮರಣದಂಡನೆ ವಿಧಿಸಲಾಯಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net