ಹಿಂಜರಿಕೆಯಿಲ್ಲದೆ ಪರೀಕ್ಷೆ ಮಾಡಿಸಿಕೊಳ್ಳಿ: ಡಿಸಿಎಂ ಅಶ್ವತ್ಥನಾರಾಯಣ ಸಲಹೆ ಕರೊನಾ ಬಗ್ಗೆ ಅರಿವು ಮೂಡಿಸಲು ಗ್ರಾಪಂ ಪ್ರತಿನಿಧಿಗಳಿಗೆ ಕರೆ

19-05-rama-DCM
Published on

ರಾಮನಗರ : ನಮ್ಮ ಗ್ರಾಮ ಕರೊನಾ ಮುಕ್ತವಾಗಬೇಕು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಹಿಂಜರಿಕೆ ಇಲ್ಲದೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಜನರಲ್ಲಿ ಇಂತಹ ಮನೋಭಾವ ಮೂಡಿಸುವ ರೀತಿ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಆಡಳಿತ ಕೈಜೋಡಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗ್ರಾಮಗಳಲ್ಲಿ ಮನೆ ಮನೆ ಸರ್ವೇ ನಡೆಸಿ ಸೋಂಕಿತರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿ ಹೋಮ್ ಐಸೊಲೇಷನ್‌ಗೆ ಅವಕಾಶ ನೀಡದೆ, ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುತ್ತಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಕೇರ್ ಸೆಂಟರ್‌ಗೆ ಮಹಿಳೆಯರು ಬರಲು ಹಿಂದೇಟು ಹಾಕುತ್ತಾರೆ. ಅವರಿಗೂ ಸಹ ಸೂಕ್ತ ವ್ಯವಸ್ಥೆ ಇರುವ ಬಗ್ಗೆ ಅರಿವು ಮೂಡಿಸಿ ಎಂದರು.

ಉತ್ಸಾಹದಿಂದ ಕೆಲಸ ಮಾಡಿ : ಕರೊನಾ ಸೋಂಕು ಹೋಗಲಾಡಿಸಲು ಕಾರ್ಯನಿರ್ವಹಿಸುವ ಅಧಿಕಾರಿಗಳು ಮೈಮರೆಯುವಂತಿಲ್ಲ. ಲಸಿಕೆ ನೀಡುವ ಕೆಲಸ ಸಂಪೂರ್ಣ ಮುಗಿಯುವವರೆಗೆ ಪ್ರತಿದಿನ ಉತ್ಸಾಹದಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯದ ಬಗ್ಗೆ ಸರ್ವೇ ನಡೆಸಲಾಗುತ್ತಿದೆ. ಪ್ರತಿದಿನ 3ರಿಂದ ನಾಲ್ಕು ಗ್ರಾಪಂಗಳಲ್ಲಿ ಆರೋಗ್ಯ ಶಿಬಿರ ನಡೆಸಿ ಕೋವಿಡ್ ಸೋಂಕಿನ ಲಕ್ಷಣವುಳ್ಳವರು

ಕಂಡುಬಂದಲ್ಲಿ ಸ್ಥಳದಲ್ಲೇ ಸ್ವಾಬ್ ಸಂಗ್ರಹಿಸಲಾಗುವುದು. ಆರೋಗ್ಯ ಶಿಬಿರ ನಡೆಸುವ ಬಗ್ಗೆ ಜನರಿಗೆ ಮೊದಲೇ ಮಾಹಿತಿ ನೀಡಲಾಗುವುದು. ಹತ್ತು ದಿನದೊಳಗಾಗಿ ಈ ಕೆಲಸ ಪೂರ್ಣಗೊಳಿಸಲು ಯೋಜಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

3ನೇ ಅಲೆ ಎದುರಿಸಲು ಸಿದ್ಧರಾಗಿ :  ಕರೊನಾ ಮೂರನೇ ಅಲೆ ಚಿಕಿತ್ಸೆಗೆ ಬೇಕಿರುವ ಸಿದ್ಧತೆ ಮಾಡಿಕೊಳ್ಳಬೇಕಿದ್ದು. ಜಿಲ್ಲಾಸ್ಪತ್ರೆಯಲ್ಲಿ 150, ತಾಲೂಕು ಆಸ್ಪತ್ರೆಯಲ್ಲಿ 25 ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 10 ಆಕ್ಸಿಜನೇಟೆಡ್ ಐಸಿಯು ಬೆಡ್‌ಗಳನ್ನು ಸಿದ್ಧತೆ ಮಾಡಿಕೊಳ್ಳಬೇಕಿರುತ್ತದೆ. ಬ್ಲ್ಯಾಕ್ ಫಂಗಸ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರು ವರದಿಯಾದಲ್ಲಿ ಚಿಕಿತ್ಸೆ ಕೊಡಿಸಿ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net