

ಬೆಂಗಳೂರು: ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಗುರುವಾರ ವಿಚಾರಣೆಗೆ ಹಾಜರಾಗಿದ್ದರು.
ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಲೋಕಾಯುಕ್ತ ಅಧಿಕಾರಿಗಳ ಮುಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಜರಾಗಿದ್ದರು. ಪ್ರಕರಣ ದಾಖಲಾದ ಬಳಿಕ ಇದೇ ಮೊದಲ ಬಾರಿಗೆ ವಿಚಾರಣೆ ಎದುರಿಸಿದರು.
೩ ಗಂಟೆಗಳ ಕಾಲ ವಿಚಾರಣೆ:
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಅವರ ನೇತೃತ್ವದ ಅಧಿಕಾರಿಗಳ ತಂಡ ಶಿವಕುಮಾರ್ ಅವರಿಗೆ ಸತತ ಮೂರು ಗಂಟೆಗಳ ಕಾಲ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಪಡೆದುಕೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಒದಗಿಸುವಂತೆಯೂ ಸೂಚಿಸಿದರು.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಡಿ.ಕೆ.ಶಿವಕುಮಾರ್ ಮಾತನಾಡಿ, ಬುಧವಾರ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೊಟೀಸ್ ನೀಡಿದ್ದರು. ಆದರೆ ಆಲಮಟ್ಟಿ ಜಲಾಶಯ ಬಾಗಿನ ಅರ್ಪಣೆ ಹಿನ್ನೆಲೆ ಸಮಯಾವಕಾಶ ಪಡೆದು ಇಂದು (ಗುರುವಾರ) ವಿಚಾರಣೆ ಎದುರಿಸಿದ್ದೇನೆ.
ಆರೋಪ ಸಂಬಂಧ ಸಿಬಿಐ ಅಧಿಕಾರಿಗಳು ನನ್ನನ್ನು ಒಂದು ದಿನವೂ ವಿಚಾರಣೆ ಕರೆದಿರಲಿಲ್ಲ. ಆದರೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಕರೆದು ಏನೇನೋ ಪ್ರಶ್ನೆ ಕೇಳಿ ಹಿಂಸೆ ಕೊಟ್ಟಿದ್ದಾರೆ. ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಕೆಲ ಪ್ರಶ್ನೆಗಳಿಗೆ ದಾಖಲೆ ರೂಪದಲ್ಲಿ ಉತ್ತರಿಸುವುದಾಗಿ ತಿಳಿಸಿದ್ದೇನೆ. ವಿಚಾರಣೆ ಕರೆದಾಗ ಮತ್ತೆ ಬರಬೇಕೆಂದು ಅಧಿಕಾರಿಗಳು ಸೂಚಿಸಿರುವುದಾಗಿ ತಿಳಿಸಿದರು.
ಲೋಕಾಗೆ ವರ್ಗಾವಣೆಯಾಗದ ಕೇಸ್ ಪೈಲ್:
ಸಿಬಿಐ ನೀಡಿರುವುದನ್ನ ರಾಜ್ಯ ಸರ್ಕಾರ ಹಿಂಪಡೆದು ಲೋಕಾಯುಕ್ತ ಸಂಸ್ಥೆಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ಇದನ್ನ ಪ್ರಶ್ನಿಸಿ ಸಿಬಿಐ ಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದೆಡೆ ಲೋಕಾಯುಕ್ತ ಅಧಿಕಾರಿಗಳು, ಸಿಬಿಐನಿಂದ ಪ್ರಕರಣ ಕಡತ ವರ್ಗಾವಣೆ ಮಾಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಂದಿನ ವಾರದೊಳಗೆ ಈ ಬಗ್ಗೆ ಆದೇಶ ಹೊರಬೀಳುವ ಸಾಧ್ಯತೆಯಿದೆ.