

ಬೆಂಗಳೂರು: ಶನಿವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಸ್ಯಾಂಡಲ್‌ವುಡ್ ನಟ ಸಂಚಾರಿ ವಿಜಯ್‌ರ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮುಂದೆ ಬಂದಿದ್ದಾರೆ.
ಸಂಚಾರಿ ವಿಜಯ್ ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಆಡಳಿತ ವರ್ಗದ ಮುಖ್ಯಸ್ಥರಿಗೆ ಇಂದು(ಸೋಮವಾರ) ಬೆಳಗ್ಗೆ ಖುದ್ದು ಡಿಸಿಎಂ ಅವರೇ ಕರೆ ಮಾಡಿ ವಿಜಯ್ ಅವರ ಯೋಗ-ಕ್ಷೇಮ ವಿಚಾರಿಸಿದರು. ಅಲ್ಲದೆ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಡಾ. ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ ಭರಿಸುತ್ತದೆ ಎಂದು ಭರವಸೆ ನೀಡಿದರು.
ಸಂಚಾರಿ ವಿಜಯ್‌ರ ಚಿಕಿತ್ಸೆಗೆ ಸಂಬಂಧಿಸಿದಂತೆ ಅವರ ಸಂಬಂಧಿಗಳಿಂದಾಗಲೀ ಅಥವಾ ಬೇರೆ ಯಾರಿಂದಲೂ ಹಣ ಪಾವತಿಸಿಕೊಳ್ಳದಂತೆ ಅಶ್ವತ್ಥನಾರಾಯಣ ಅವರು ಆಸ್ಪತ್ರೆ ಆಡಳಿತ ವರ್ಗಕ್ಕೆ ಸೂಚಿಸಿದ್ದಾರೆ.
ಅಪಘಾತದಲ್ಲಿ ಸಂಚಾರಿ ವಿಜಯ್‌ರ ಮೆದುಳಿಗೆ ತೀವ್ರಪೆಟ್ಟಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ.