ಸರ್ವರಿಗೂ ಸೂರು ,ಎಲ್ಲರಿಗೂ ಸಂತೋಷ : ಉಪಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥ ನಾರಾಯಣ ಹೇಳಿಕೆ

24-04-rama-dcm press 1
Published on

ರಾಮನಗರ : ಸರ್ವರಿಗೂ ಸೂರು, ಸರ್ವರಿಗೂ ಸಂತೋಷ ಎಂಬ ನೀತಿ ನಮ್ಮದು. ಹೀಗಾಗಿ ಎಲ್ಲ ವಸತಿ ರಹಿತ ಜನರಿಗೆ ನಿವೇಶನ ಅಥವಾ ಮನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥ ನಾರಾಯಣ ಹೇಳಿದರು.

ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ‘ನವ ರಾಮನಗರ- ಚನ್ನಪಟ್ಟಣ: ಬಿಜೆಪಿ ವಾಗ್ದಾನ’ ಪ್ರಣಾಳಿಕೆ ಬಿಡುಗಡೆ ಕುರಿತ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಜಿಲ್ಲಾ ಕೇಂದ್ರದಲ್ಲಿ ಮನೆ ಇಲ್ಲದವರಿಗೆ ಮನೆ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, 50 ಎಕರೆ ಪ್ರದೇಶದಲ್ಲಿ ಬಡವರ ಸಲುವಾಗಿ 900 ಮನೆ ನಿರ್ಮಿಸಲಾಗುವುದು.

ಹಾಗೆಯೇ. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಎರಡು ಬಡಾವಣೆಗಳಿಗೆ ಗುಣಮಟ್ಟದ ಸೌಲಭ್ಯ ಕಲ್ಪಿಸಲಾಗುವುದು ಎಂದರು.ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2,466 ಮನೆಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಮನೆ ನಿರ್ಮಾಣಕ್ಕೆ ಎಲ್ಲಾ ವರ್ಗದ ಜನರಿಗೆ ಕೇಂದ್ರ ಸರ್ಕಾರದ ವತಿಯಿಂದ ತಲಾ ರೂ. 1.50 ಲಕ್ಷ ಅನುದಾನ ಹಾಗೂ ರಾಜ್ಯ ಸರ್ಕಾರದಿಂದ ಇತರ ಹಿಂದುಳಿದ ವರ್ಗದ ಜನರಿಗೆ ಪ್ರತಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ. ಸೇರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 2.70 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ.

ಇನ್ನೂ ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ, ವಸತಿ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಮನಗರ ವ್ಯಾಪ್ತಿಯಲ್ಲಿ 1530 ಮನೆ ನಿರ್ಮಾಣ ಮಾಡಲು ಗುರಿಯಿದ್ದು, ಅದರಲ್ಲಿ 1200 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆ ನಿರ್ಮಾಣಕ್ಕೆ 4.22 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು. ಅಲ್ಲದೆ, ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 6142 ನಿವೇಶನ ರಹಿತರನ್ನು ಗುರುತಿಸಲಾಗಿದ್ದು, ನಿವೇಶನ ನಿರ್ಮಾಣ ಮಾಡಲು ಹಳ್ಳಿಮಾಳ ಗ್ರಾಮದ ಒಟ್ಟು 63.15 ಎಕರೆ ಭೂಮಿ ಖರೀದಿಸಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ವಿವರವಾದ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರ ಅನುಪಸ್ಥಿತಿಯಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ರಾಮನಗರ, ಚನ್ನಪಟ್ಟಣ ಪ್ರಗತಿಗೆ ರಾಜ್ಯ ಸರ್ಕಾರ ಬದ್ಧ

ರಾಮನಗರ : ಚನ್ನಪಟ್ಟಣ ಮತ್ತು ರಾಮನಗರಗಳನ್ನು ನವನಗರಗಳನ್ನಾಗಿ ನಿರ್ಮಾಣ ಮಾಡುವ ದೃಷ್ಟಿಯಿಂದ ಎರಡೂ ನಗರಗಳ ಜನತೆ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನವ ರಾಮನಗರ- ಚನ್ನಪಟ್ಟಣ: ಬಿಜೆಪಿ ವಾಗ್ದಾನ ಪ್ರಣಾಳಿಕೆ ಬಿಡುಗಡೆ ಕುರಿತ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಅವರು ಮಾತನಾಡಿ, ರಾಮನಗರ ಮತ್ತು ಚನ್ನಪಟ್ಟಣ ನಗರಗಳ ಸರ್ವತೋಮುಖ ಪ್ರಗತಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು, ಜಿಲ್ಲಾ ಕೇಂದ್ರವಾಗಿ ಜನ್ಮ ತಳೆದು ದಶಕದ ಸಮಯವಾಗಿದ್ದರೂ, ಆಡಳಿತ ನಡೆಸಿದ ಜನಪ್ರತಿನಿಧಿಗಳು ಕೇವಲ ತಮ್ಮ ವೈಯಕ್ತಿಕ ಅಭಿವೃದ್ಧಿ, ಸ್ವಜನ ಪಕ್ಷಪಾತ, ಕುಟುಂಬದ ಅಭಿವೃದ್ಧಿಯಲ್ಲಿಯೇ ತೊಡಗಿದ್ದರು. ಇದರಿಂದಾಗಿ ಬೆಂಗಳೂರಿಗೆ ಹತ್ತಿರದಲ್ಲಿಯೇ ಇದ್ದರೂ, ರಾಮನಗರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಅರ್ಹರಿಗೆ ನಿವೇಶನ ಒದಗಿಸಿ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಮನೆಮನೆಗೂ ಉದ್ಯೋಗಾವಕಾಶ ನೀಡಲಾಗುವುದು. ಸರ್ವರಿಗೂ ಆರೋಗ್ಯದ ಪರಿಕಲ್ಪನೆ ಸರಿಯಾಗಿ ಜಾರಿಗೊಳ್ಳಲಿದೆ. ಎಲ್ಲರಿಗೂ ವಸತಿ, ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಗುಣಮಟ್ಟದ ಜೀವನ- ಇದು ಬಿಜೆಪಿ ಗುರಿ. ಇದನ್ನು ಸಾಕಾರ ಮಾಡಲು ನಗರಸಭೆಗಳಲ್ಲಿ ಅಧಿಕಾರ ಇಲ್ಲದಿದ್ದರೂ ಬಿಜೆಪಿ ಸಾಕಷ್ಟು ದೂರ ಕ್ರಮಿಸಿದೆ. ಈಗ ನಮಗೆ ಅವಕಾಶ ಕೊಡಿ. ನಿಮಗೆ ಶಕ್ತಿ ತುಂಬುತ್ತೇವೆ ಎಂದರು.

ರಾಮನಗರದಂಥ ಜಿಲ್ಲಾ ಕೇಂದ್ರದಲ್ಲೇ ಇನ್ನೂ ಮಣ್ಣಿನ ರಸ್ತೆಗಳಿವೆ ಎಂದರೆ, ಕಳೆದ 70 ವಷರ್ರ್ಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿರುವ ಪ್ರಗತಿ ಎಂಥದ್ದು ಎಂಬುದು ಅರ್ಥವಾಗುತ್ತದೆ. ರಾಮನಗರ-ಚನ್ನಪಟ್ಟಣ ಎರಡನ್ನೂ ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದೆ. ನದಿ ಮೂಲದಿಂದ ಮನೆಮನೆಗೂ ದಿನದ 24 ಗಂಟೆ ಕಾಲ ಕುಡಿಯುವ ನೀರು ಪೂರೈಕೆ ಯೋಜನೆಗಳು ಜಾರಿ ಹಂತದಲ್ಲಿದೆ. ಕಾಮಗಾರಿ ಜಿಲ್ಲೆಯ ವಿವಿಧೆಡೆ ಸಾಗುತ್ತಿದೆ. ರಾಮನಗರಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು. ಕೋವಿಡ್ ಅನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ನಿರ್ವಹಿಸಿದೆ ಎಂದು ತಿಳಿಸಿದರು.

ಸಚಿವರಾದ ಸಿ.ಪಿ.ಯೋಗೇಶ್ವರ್ ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿಗಳು ಇಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರಲ್ಲದೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರಚಿಸಲಾಗಿದೆ ಎಂದರು.ರಾಜೀವ್‌ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಕಟ್ಟಡ ಶೀಘ್ರವೇ ಜಿಲ್ಲೆಯಲ್ಲಿ ಆರಂಭಿಸಲಾಗುವುದು.

ರಾಮನಗರವನ್ನು ಆರೋಗ್ಯ ನಗರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರಾದ ಡಾ. ಸುಧಾಕರ್ ಹೇಳಿದರು. ಸರ್ವ ಕ್ಷೇತ್ರಗಳ ಮತ್ತು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಜನರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ನೀರಿನ ಸಮಸ್ಯೆ ಮತ್ತು ಒಳಚರಂಡಿ ಸಮಸ್ಯೆ ಪರಿಹಾರಕ್ಕಾಗಿ ಮತ್ತು ಜಿಲ್ಲೆಯ ವಿವಿಧ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ಮತದಾರರು ಬಿಜೆಪಿಗೆ ಗೆಲುವು ತಂದು ಕೊಡಲಿದ್ದಾರೆ ಎಂದು ಸಚಿವರಾದ ಬೈರತಿ ಬಸವರಾಜ್, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ನಾರಾಯಣ ಗೌಡ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.ಸಂಸದರಾದ ಪಿ.ಸಿ.ಮೋಹನ್, ಪಕ್ಷದ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net