

ಶಿವಮೊಗ್ಗ: ಸೈಬರ್ ಕ್ರೈಂಗಳು ಜಾಸ್ತಿಯಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ಸುಭದ್ರ ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿ. ಡಿಸಿಸಿ ಬ್ಯಾಂಕ್‌ನಿಂದ ಎಲ್ಲ ಆನ್‌ಲೈನ್ ಸೇವೆಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಅಳವಡಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯ ಮೊದಲ ಮಹಡಿಯಲ್ಲಿ ನವೀಕೃತ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಇನ್ನು 15 ದಿನಗಳೊಳಗೆ ಡಿಸಿಸಿ ಬ್ಯಾಂಕ್‌ನ ಮೂರು ಹೊಸ ಶಾಖೆಗಳು ಆರಂಭವಾಗಲಿವೆ. ಹೋಬಳಿ ಮಟ್ಟದಲ್ಲಿ ಇನ್ನೂ 19 ಶಾಖೆಗಳನ್ನು ತೆರೆಯಲು ಆರ್‌ಬಿಐ ಅನುಮತಿ ಕೋರಲಾಗಿದೆ ಎಂದು ತಿಳಿಸಿದರು.
ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಮುಂದುವರಿದ ಭಾಗವಾಗಿ ನೇರ ನಬಾರ್ಡ್‌ಗೆ ಲಿಂಕ್ ಕಲ್ಪಿಸುವ ಸಾಫ್ಟ್‌ವೇರ್ ಅಳವಡಿಸಲಾಗುವುದು. ಇದೊಂದು ಮಾದರಿ ವ್ಯವಸ್ಥೆಯಾಗಲಿದೆ. ಠೇವಣಿದಾರರಿಗೆ ಭದ್ರತೆ ಕೊಡುವ ಮಸೂದೆಯೊಂದನ್ನು ಬೆಳಗಾವಿ ಅಧಿವೇಶನದಲ್ಲಿ ಸಿಎಂ ಮಂಡಿಸಲಿದ್ದಾರೆ ಎಂದರು.
ವೇಗದ ಸೇವೆ ಜತೆಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ವ್ಯವಸ್ಥೆ ಒದಗಿಸುತ್ತಿದ್ದು, ಸಿಬಿಲ್‌ನಿಂದ ರೈತರಿಗೆ ಸಮಸ್ಯೆ ಆಗಬಾರದು. ಬಡ್ಡಿರಹಿತ ಸಾಲದಿಂದ ರೈತರು ವಂಚಿತರಾಗಬಾರದು ಎನ್ನುವ ಕಾರಣದಿಂದ ಆರ್‌ಬಿಐ ಸೂಚನೆಯನ್ನೂ ಮೀರಿ ಡಿಸಿಸಿ ಬ್ಯಾಂಕ್ ಸಿಬಿಲ್ ಅನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹಾಲು ಉತ್ಪಾದಕರಿಗೆ ಹೆಚ್ಚಿನ ಸೇವೆ ನೀಡುವ ದೃಷ್ಟಿಯಿಂದ ಶಿಮುಲ್ ಸಹಯೋಗದೊಂದಿಗೆ ಶೂನ್ಯ ಬ್ಯಾಲೆನ್ಸ್ ಖಾತೆ ತೆರೆಯಲಾಗುವುದು. ಡಿಸೆಂಬರ್ ಅಂತ್ಯಕ್ಕೆ ಸುಮಾರು 1.20 ಲಕ್ಷ ರೈತರಿಗೆ ಸಾಲ ನೀಡುವ ಯೋಜನೆ ಇದೆ ಎಂದು ತಿಳಿಸಿದರು.
ನಮ್ಮ ಬ್ಯಾಂಕ್‌ಗೆ ಮೂರು ಲಕ್ಷ ಗ್ರಾಹಕರಿದ್ದು, ಅವರ ದಾಖಲೆಗಳು ಸುರಕ್ಷಿತವಾಗಿರಬೇಕು ಎನ್ನುವ ದೃಷ್ಟಿಯಿಂದ ಅತ್ಯಂತ ಭದ್ರತೆ ಇರುವ ಕಚೇರಿ ನಿರ್ಮಿಸಲಾಗಿದೆ. ಮುಂದಿನ ಎರಡು ವರ್ಷದಲ್ಲಿ ಡಿಸಿಸಿ ಬ್ಯಾಂಕ್‌ಗೆ 75 ವರ್ಷ ತುಂಬಲಿದ್ದು, ಹೊಸ ಕಟ್ಟಡ ನಿರ್ಮಾಣ ಸೇರಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕೆನರಾ ಬ್ಯಾಂಕ್‌ನವರೂ ನಮ್ಮಲ್ಲಿ ಠೇವಣಿ ಇಡುವ ಮಟ್ಟಿಗೆ ನಾವು ವಿಶ್ವಾಸ ಗಳಿಸಿದ್ದೇವೆ. ಕೃಷಿಯೇತರ, ನರ್ಸಿಂಗ್ ಹೋಂ, ಆರೋಗ್ಯ, ಶಿಕ್ಷಣ ಸಂಸ್ಥೆಗಳಿಗೆ ಮೂರು ಕೋಟಿ ರೂ.ವರೆಗೆ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.
ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಎಂ.ಎಂ. ಪರಮೇಶ್, ಜಿ.ಎನ್.ಸುಧೀರ್, ಮಹಾಲಿಂಗಯ್ಯ ಶಾಸ್ತ್ರಿ, ಉಪ ನಿಬಂಧಕ ನಾಗಭೂಷಣ ಕಲ್ಮನೆ, ಸಿಇಒ ಅನ್ನಪೂರ್ಣಾ ಇತರರಿದ್ದರು.