

ಹೊಸನಗರ: ನಗರ ಹೋಬಳಿಯ ಚಿಕ್ಕಪೇಟೆ ನಗರ ಸೇರಿ ಜಿಲ್ಲೆಯ 5 ಕಡೆ ಡಿಸಿಸಿ ಬ್ಯಾಂಕ್ ನೂತನ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದು, ಶೀಘ್ರವೇ ಆರಂಭಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ತಾಲೂಕಿನ ನಗರ ಶ್ರೀ ನೀಲಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಯ ಮೂರು ಕಡೆ ಶಾಖೆ ತೆರೆಯಲು ಚಾಲನೆ ನೀಡಲಾಗಿದೆ. ಇದೀಗ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರ, ತೀರ್ಥಹಳ್ಳಿಯ ಎಪಿಎಂಸಿ, ಸಾಗರ ತಾಲೂಕಿನ ತ್ಯಾಗರ್ತಿ, ಶಿವಮೊಗ್ಗದ ಗಾಜನೂರು, ಭದ್ರಾವತಿಯ ಬಾರಂದೂರುನಲ್ಲಿ ಶಾಖೆ ತೆರೆಯಲು ಅನುಮತಿ ದೊರೆತಿದೆ ಎಂದರು.
ಈ ವರ್ಷ 8 ಶಾಖೆಗಳನ್ನು ತೆರೆಯುತ್ತಿರುವುದು ಇತಿಹಾಸ. ಜಿಲ್ಲೆಯಲ್ಲಿ ಒಟ್ಟು 14 ಬ್ಯಾಂಕ್ ತೆರೆಯಲು ಅನುಮತಿಗಾಗಿ ಆರ್‌ಬಿಐಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರ ಆರ್ಥಿಕ ಹಿತರಕ್ಷಣೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಚೈತನ್ಯ ನೀಡುವ ಸಲುವಾಗಿ ಹಳ್ಳಿ ಹಳ್ಳಿಗಳಲ್ಲಿ ಶಾಖೆಯ ಅಗತ್ಯವಿದೆ. ಹಾಗಾಗಿ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನ 50 ಶಾಖೆಗಳನ್ನು ತೆರೆಯುವ ಉದ್ದೇಶವಿದೆ ಎಂದು ತಿಳಿಸಿದರು.
ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಡಿ ಡಿಸಿಸಿ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸಲಿವೆ. ಫೋನ್ ಪೇ ಸೌಲಭ್ಯ ಸೇರಿ ರಾಷ್ಟ್ರೀಕೃತ ಬ್ಯಾಂಕ್ ರೀತಿಯಲ್ಲೇ ಕಾರ್ಯ ನಿರ್ವಹಿಸಲಿವೆ. ನಗರ ನೀಲಕಂಠೇಶ್ವರ ಸಂಘ ಕಳೆದ ವರ್ಷ ನೂತನ ಕಟ್ಟಡ ನಿರ್ಮಿಸಿದ್ದು, ಅದರಲ್ಲೇ ಶಾಖೆ ತೆರೆಯಲು ಕೋರಿದ್ದಾರೆ. ಆದರೆ ಸಂಘದ ಆರ್ಥಿಕ ಚಟುವಟಿಕೆ ನಡೆಯುತ್ತಿರುವ ಕಾರಣ ಅಲ್ಲಿಯೇ ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಣೆ ಸರಿಯಲ್ಲ. ಹೀಗಾಗಿ ಚಿಕ್ಕಪೇಟೆಯಲ್ಲಿ ಬಹುವರ್ಷಗಳ ಬೇಡಿಕೆ ಇದೆ. ಕಟ್ಟಡವನ್ನು ಸಹ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿಮುಲ್ ಅಧ್ಯಕ್ಷ ವಿದ್ಯಾಧರ್, ನೀಲಕಂಠೇಶ್ವರ ಸಂಘದ ಅಧ್ಯಕ್ಷ ಅಂಬರೀಶ್, ಉಪಾಧ್ಯಕ್ಷ ಗೋಪಾಲ ಶೆಟ್ಟಿ, ಪ್ರಮುಖರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕರುಣಾಕರ ಶೆಟ್ಟಿ, ಲೀಲಕೃಷ್ಣ, ಚಂದ್ರಶೇಖರ್ ಶೆಟ್ಟಿ, ವಿನಾಯಕ, ವಿಠೋಬಾ, ಗಗನ್, ಬಸವಣ್ಣ, ಮಂಜಾದ್ರಿ ಗೌಡ, ಅಬ್ಬಾಸ್, ರವೀಂದ್ರ, ರಮೇಶ, ದೇವೇಂದ್ರಪ್ಪ, ಗೋಪಾಲ, ಕಾರ್ಯನಿರ್ವಹಣಾಧಿಕಾರಿ ವಿಷ್ಣುವರ್ಧನ್ ಇತರರಿದ್ದರು.