ಗರಿಗೆದರಿದ ಡಿಸಿಸಿ ಅಧ್ಯಕ್ಷ ಆಕಾಂಕ್ಷಿಗಳ ನಿರೀಕ್ಷೆ,ಜು.12ರಂದು ಚಿತ್ರದುರ್ಗಕ್ಕೆ ವೀಕ್ಷಕರು

CTD CONG-----
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ರಾಜ್ಯದ 21 ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮೂಲಕ ಪಕ್ಷ ಸಂಘಟನೆಗೆ ಕೆಪಿಸಿಸಿ ಮುಂದಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲೂ ಆಕಾಂಕ್ಷಿಗಳ ನಿರೀಕ್ಷೆಗಳು ಗರಿಗೆದರಿವೆ.

ಡಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಕೆಪಿಸಿಸಿ ನೇಮಿಸಿರುವ ವೀಕ್ಷಕರು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಉಸ್ತುವಾರಿ ಸಚಿವರು, ಪಕ್ಷದ ಉಸ್ತುವಾರಿ, ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು, ಮಾಜಿ ಸಚಿವರು, ನಿಗಮ, ಮಂಡಳಿ ಅಧ್ಯಕ್ಷರು, ಎಐಸಿಸಿ, ಕೆಪಿಸಿಸಿ ಪದಾಧಿಕಾರಿಗಳು, ಸದಸ್ಯರು, 2023ರ ವಿಧಾನಸಭಾ ಅಭ್ಯರ್ಥಿಗಳು, ಮುಂಚೂಣಿ ಘಟಕ ಸಹಿತ ಪಕ್ಷದ ನಾನಾ ಮುಖಂಡರ ಅಭಿಪ್ರಾಯಗಳನ್ನು ಆಲಿಸಿ ಒಮ್ಮತದಿಂದ ಒಬ್ಬರ ಹೆಸರು ಅಥವಾ 2-3 ಹೆಸರುಗಳನ್ನು ಕೆಪಿಸಿಸಿಗೆ ಮುಚ್ಚಿದ ಲಕೋಟೆಯಲ್ಲಿ ಶಿಫಾರಸು ಮಾಡಲಿದ್ದಾರೆ. ಆಯಾ ಜಿಲ್ಲೆಯ ಪಕ್ಷದ ಸ್ಥಿತಿಗತಿ ಕುರಿತಂತೆ ಚರ್ಚಿಸಿ ಅದರ ವರದಿಯನ್ನೂ ವೀಕ್ಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಿದ್ದಾರೆ.

21 ಜಿಲ್ಲೆಗಳ ಪೈಕಿ ಅನೇಕ ಅಧ್ಯಕ್ಷರು ಈಗಾಗಲೇ ಐದು, ಎಂಟು, ಹತ್ತು ವರ್ಷಗಳ ಅಧಿಕಾರಾವಧಿ ಪೂರೈಸಿದ್ದಾರೆ. ಈ ಪೈಕಿ ಹಲವರು ನಿಗಮ, ಮಂಡಳಿಗಳ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಪಕ್ಷದ ಸಂಘಟನೆ, ಮುಂಬರುವ ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಹೊಸಬರಿಗೆ ಅವಕಾಶ ಕೊಡುವುದು, ಪಕ್ಷ ನಿಷ್ಠೆ, ಸಂಘಟನೆಗೆ ಶ್ರಮಿಸಿದ್ದು ಮೊದಲಾದವುಗಳು ನೇಮಕಕ್ಕೆ ಅರ್ಹತೆಯಾಗಿ ಪರಿಗಣನೆಯಾಗಲಿದೆ.

ಚಿತ್ರದುರ್ಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 8 ಕ್ಕೂ ಹೆಚ್ಚು ಪ್ರಮುಖರು ಆಕಾಂಕ್ಷಿಗಳಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲಾ ಮೂಲದ ಕೆಪಿಸಿಸಿ ಪದಾಧಿಕಾರಿಗಳು, ಶಾಸಕರು ಸಹಿತ ಇನ್ನು ಹಲವರಿಗೆ ಪಕ್ಷದ ಹಿತದೃಷ್ಟಿಯಿಂದ ಜಿಲ್ಲಾಧ್ಯಕ್ಷರ ಹುದ್ದೆಗೆ ವರಿಷ್ಠರು ನೇಮಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜು.12 ರಂದು ಜಿಲ್ಲೆಗೆ ವೀಕ್ಷಕರಾಗಿ ಮಾಜಿ ಮಂತ್ರಿ ಪಿ.ಟಿ. ಪರಮೇಶ್ವರ ನಾಯ್ಕ, ಕೆಪಿಸಿಸಿ ಪದಾಧಿಕಾರಿ ಬಿ.ಎಂ. ಸಂದೀಪ್ ಭೇಟಿ ನೀಡಲಿದ್ದಾರೆ.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ 5 ದಿನಗಳ ಕಾಲ ಸಾಗಿದ್ದು, ಎಐಸಿಸಿಸಿ ಮಟ್ಟದಲ್ಲೂ ಗಮನ ಸೆಳೆದಿತ್ತು. ಐದು ವರ್ಷಗಳಿಂದ ಅಧ್ಯಕ್ಷರಾಗಿರುವ, ಪ್ರಸ್ತುತ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಎಂ.ಕೆ. ತಾಜ್‌ಪೀರ್ ಅವರಿಗೆ ವರಿಷ್ಠರು ಅವಕಾಶ ಮಾಡಿಕೊಟ್ಟರೆ ಮುಂದುವರಿಯುವ ಇರಾದೆ ಇದೆ.

ಕಳೆದ ವಿಧಾನಸಭಾ ಸಭಾ ಚುನಾವಣೆ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ಜರುಗಿದ್ದ ರಾಜ್ಯಮಟ್ಟದ ಎಸ್‌ಸಿ, ಎಸ್‌ಸಿ ಸಮಾವೇಶದಲ್ಲಿ ಎಐ ಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಿತ ನಾನಾ ಹಿರಿಯ ನಾಯಕರು ಭಾಗವಹಿಸಿದ್ದರು. ಖರ್ಗೆ ಅವರು ನಗರದ ನಿಜಲಿಂಗಪ್ಪ ಸ್ಮಾರಕದಲ್ಲಿ ಅಂದು ಪಕ್ಷದ ಪ್ರಮುಖರ ಸಭೆಯನ್ನೂ ನಡೆಸಿದ್ದರು ಹಾಗೂ ಒಳ ಮೀಸಲು ಒದಗಿಸುವುದಾಗಿ ಸಮಾವೇಶದಲ್ಲಿ ಪ್ರಕಟಿಸ ಲಾಗಿತ್ತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಇತರರು ಭಾಗವಹಿಸಿದ್ದ ಸಂಸತ್ ಚುನಾವಣೆ ಪೂರ್ವದಲ್ಲಿ ಜರುಗಿದ ಅಹಿಂದ ಸಮಾವೇಶ ಹಾಗೂ ಬಾಬು ಜಗಜೀವನ್‌ರಾಂ ಅವರ ಜನ್ಮ ದಿನಾಚರಣೆ ರಾಜ್ಯಮಟ್ಟದ ಕಾರ್ಯಕ್ರಮಕ್ಕೂ ಜಿಲ್ಲೆ ಸಾಕ್ಷಿಯಾಗಿತ್ತು. ಈ ಹಿನ್ನೆಲೆಯಲ್ಲಿ ವರಿಷ್ಠರು ಚಿತ್ರದುರ್ಗ ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ವಿಶೇಷ ಒತ್ತು ಕೊಡುತ್ತಿದ್ದಾರೆ ಎನ್ನಲಾಗಿದೆ.

ಕೋಟ್

ಎಲ್ಲರ ಸಹಕಾರದಿಂದ ಐದು ವರ್ಷ ಡಿಸಿಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐ ದರಲ್ಲಿ ಗೆಲುವಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವಾಗಿದೆ. ಸಂಸತ್ ಚುನಾವಣೆಯ ಸೋಲು ಅನಿರೀಕ್ಷಿತ. ಛತ್ತೀಸ್ ಘಡದ ರಾಯ್‌ಪುರದಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ನನಗೆ ಮಾತನಾಡಲು ಅವಕಾಶ ದೊರೆತಿತ್ತು. ಬದಲಾವಣೆ ಸಹಜ ಪ್ರಕ್ರಿಯೆ.

ಎಂ.ಕೆ. ತಾಜ್‌ಪೀರ್, ಡಿಸಿಸಿ ಅಧ್ಯಕ್ಷ, ಚಿತ್ರದುರ್ಗ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net