ಡಿಸಿಸಿ ಬ್ಯಾಂಕ್​ ಸಭೆ ಮುಂದೂಡಿಕೆ!

dcc bank
ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಸರ್ವ ಸದಸ್ಯರ ಸಭೆಗೆ ಪ್ರಿಂಟ್​ ಮಾಡಿಸಿರುವ ವೇದಿಕೆ ಬ್ಯಾನರ್​.
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ (ಡಿಸಿಸಿ ಬ್ಯಾಂಕ್​) ಸರ್ವ ಸದಸ್ಯರ ಸಭೆಯನ್ನು ಇದ್ದಕ್ಕಿದ್ದಂತೆ ಅಧಿಕಾರಿಗಳು ಮುಂದೂಡಿದ್ದಾರೆ.

ಬ್ಯಾಂಕಿನ 2024&25ನೇ ಸಾಲಿನ 63ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಆಡಳಿತಾಧಿಕಾರಿ ಅಮ್ಲಾನ್​ ಆದಿತ್ಯ ಬಿಸ್ವಾಸ್​ ಅಧ್ಯಕ್ಷತೆಯಲ್ಲಿ ನಗರದ ಹಾಲಿಸ್ಟಾರ್​ ಭವನದಲ್ಲಿ ಗುರುವಾರ ನಿಗದಿಪಡಿಸಿ, ಬ್ಯಾಂಕ್​ನಲ್ಲಿ ಷೇರು ಪಡೆದುಕೊಂಡಿರುವ ಅರ್ಹ ಸದಸ್ಯರಿಗೆ ಸಭೆಯ ತಿಳಿವಳಿಕೆ ಪತ್ರ ಕಳುಹಿಸಿ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ಸಭೆಗೆ ಹಾಜರಾಗುವ ಸದಸ್ಯರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ಸಭೆಗೆ ಅಗತ್ಯ ರೂಪುರೇಷೆ ಮಾಡಿಕೊಳ್ಳಲಾಗಿತ್ತು.

ಬ್ಯಾನರ್​ ಸಹ ಪ್ರಿಂಟ್​ ಮಾಡಿಸಿ ಗುರುವಾರ ಬೆಳಗ್ಗೆ ಸಭಾಂಗಣದ್ದ ಸಿದ್ಧತೆ ಕೈಗೊಳ್ಳಬೇಕಿದ್ದವರಿಗೆ ಸಭೆ ರದ್ದಾಗಿದೆ. ನೋಡೋಣ ಇರಿ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಸಭೆಗೆ ಹಾಜರಾಗಿದ್ದ ಹಲವರು, ಬ್ಯಾಂಕಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಕೇಳಿದಾಗ ನಿಖರ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಸಭೆ ಮುಂದೂಡಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದಷ್ಟೇ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಈಗಾಗಲೇ ಬ್ಯಾಂಕಿನಿಂದ ಯಾವುದೇ ರೀತಿಯ ಸೌಲ ಸೌಲಭ್ಯಗಳು ದೊರೆಯುತ್ತಿಲ್ಲ. ಇದರಿಂದ ಜನರಿಗೆ ಬ್ಯಾಂಕ್​ ಅಧಿಕಾರಿಗಳ ವಿರುದ್ಧ ಅಸಮಾಧಾನವಿದೆ. ನೀವು ಮಾಡಿರುವ ಕೆಲಸಕ್ಕೆ ಬ್ಯಾಂಕ್​ ಮೇಲಿದ್ದ ನಂಬಿಕೆಯನ್ನು ಜನ ಕಳೆದುಕೊಂಡಿದ್ದಾರೆ. ಸಭೆ ಮುಂದೂಡಿರುವ ಬಗ್ಗೆ ಒಂದು ದಿನ ಮುಂಚೆ ತಿಳಿಸಲಾಗಲಿಲ್ಲವೇ ಎಂದು ಸದಸ್ಯರು ಪ್ರಶ್ನಿಸಿದರು.

ಕಳೆದ ಆಡಳಿತ ಮಂಡಳಿಯ ಅಧಿಕಾರಾವಧಿ ುುಗಿದ ನಂತರ ಅಧಿಕಾರಿಗಳು ಸಾಲ ವಸೂಲಿಯನ್ನು ಸಮರ್ಪಕವಾಗಿ ಮಾಡಿಲ್ಲ. ಜತೆಗೆ ಹಣ ದುರುಪಯೋಗ ಕುರಿತು ಕೆಲ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದು, ಅಮಾನತಿನಲ್ಲಿ ಇಡಲಾಗಿತ್ತು. ಆದರೆ, ಅವರು ಕೋರ್ಟ್​ ಮೋರೆ ಹೋಗಿ ಅಮಾನತು ಆದೇಶಕ್ಕೆ ತಡೆ ತಂದಿದ್ದು, ಅವರು ವಿರುದ್ಧ ಹಿರಿಯ ಅಧಿಕಾರಿಗಳು ಯಾವುದೇ ರೀತಿ ಕ್ರಮಕೈಗೊಂಡಿಲ್ಲ.

* ನಷ್ಟದ ಸುಳಿಯಲ್ಲಿ ಬ್ಯಾಂಕ್​

ಪ್ರಸಕ್ತ ಸಾಲಿನಲ್ಲಿ ಲೆಕ್ಕ ಪರಿಶೋಧನೆ ಮಾಡಿಸಿರುವ ಪ್ರಕಾರ ಸುಮಾರು 60 ಕೋಟಿ ರೂ.ಗೂ ಹೆಚ್ಚು ನಷ್ಟ ತೋರಿಸಿದ್ದು, ಇದಕ್ಕೆಲ್ಲ ಬ್ಯಾಂಕ್​ ಅಧಿಕಾರಿಗಳೇ ಕಾರಣ. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಅಧಿಕಾರಿಗಳ ಮೇಲೆ ಒತ್ತಡ ತಂದು ಬಾಕಿ ಸಾಲವನ್ನು ವಸೂಲಿ ಮಾಡಿಸುವಲ್ಲಿ ವಿಲರಾಗಿದ್ದು, ಸುಮಾರು ಕೋಟಿಯಷ್ಟು ಸುಸ್ತಿಯಾಗಿದೆ. ಎರಡೂ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ಹಣ ದುರುಪಯೋಗ ಸೇರಿ ಹಲವು ವಿಚಾರಗಳು ಕುರಿತು ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆ ಕಾರಣ ಆಡಳಿತಾಧಿಕಾರಿಯು ಮುಂದೂಡಿರಬಹುದು ಎಂಬ ಮಾತು ಕೇಳಿ ಬಂದಿದೆ.

* ಆಡಳಿತಾಧಿಕಾರಿ, ಎಂಡಿ ವಿರುದ್ಧ ಆಕ್ರೋಶ

ಸಭೆಯನ್ನು ದಿಢೀರ್​ ಮುಂದೂಡಿರುವ ಬಗ್ಗೆ ಬ್ಯಾಂಕ್​ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಆದರೆ, ಸದಸ್ಯರಿಗೆ ಅಧಿಕಾರಿಗಳು ಆಡಳಿತಾತ್ಮಕ ನೆಪ ಹೇಳಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, 2024&25ನೇ ಸಾಲಿನ ಲೆಕ್ಕಪರಿಶೋಧನೆಯ ವರದಿ ಸರ್ವ ಸದಸ್ಯರ ಕೈ ಸೇರಿದ್ದು, ನಷ್ಟ, ಸಿಬ್ಬಂದಿಯಿಂದ ಹಣ ದುರುಪಯೋಗ, ಕಳೆದ ಸಭೆಯಲ್ಲಿ ಸದಸ್ಯರು ವ್ಯಕ್ತಪಡಿಸಿರುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಈ ಬಾರಿಯೂ ಸದಸ್ಯರು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಯಿತ್ತು. ಆಗಿರುವ ವ್ಯವಹಾರಕ್ಕೆ ಲೆಕ್ಕಪರಿಶೋಧಕರಿಗೆ ಲೆಕ್ಕ ಒದಗಿಸದ ಹಿನ್ನೆಲೆಯಲ್ಲಿ ಆಕ್ಷೇಪಣೆಯಲ್ಲಿಟ್ಟಿದ್ದು, ಷೇರುದಾರ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದು ಎಂಬ ಭಯದಿಂದ ಆಡಳಿತಾಧಿಕಾರಿ ಮತ್ತು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಸಭೆ ಮುಂದೂಡಿದ್ದಾರೆ ಎಂಬುದು ಸರ್ವ ಸದಸ್ಯರ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net