

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ನಡೆಸಲು ಕ್ರಮವಹಿಸಬೇಕು ಎಂದು ಇಫ್ಕೋ ಟೋಕಿಯೋ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಎರಡೂ ಜಿಲ್ಲೆಗಳ ಬ್ಯಾಂಕಿನ ಮಾಜಿ ನಿರ್ದೇಶಕರು ಸೋಮವಾರ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರಿಗೆ ಮನವಿ ಸಲ್ಲಿಸಿದರು.
ಬ್ಯಾಂಕಿನ ಆಡಳಿತ ಮಂಡಳಿ ಅವಽ 2023ರ ನವೆಂಬರ್ 11ಕ್ಕೆ ಮುಕ್ತಾಯಗೊಂಡಿದೆ, ಮೂರು ತಿಂಗಳಲ್ಲಿ ಚುನಾವಣೆ ನಡೆಸಲು ಹೈಕೋರ್ಟ್ 2024ರ ಜುಲೈನಲ್ಲೇ ಸೂಚಿಸಿದೆ. ನಂತರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲೂ ಚುನಾವಣೆ ನಡೆಸಲು ಒಮ್ಮತದ ತೀರ್ಮಾನವಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಆಗಿಲ್ಲ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿತು.
ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮಾತನಾಡಿ, ಎರಡೂ ಜಿಲ್ಲೆಯ ರೈತರು, ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಶಕ್ತಿಯಾಗಿತ್ತು. ಆದರೆ, ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಂಡ ನಂತರ ಯಾವುದೇ ಸೌಲಭ್ಯಗಳು ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಬ್ಯಾಂಕ್ ವಿಚಾರದಲ್ಲಿ ಮತ್ತೆ ಕಹಿ ಘಟನೆಗಳು ಮರುಕಳಿಸುವುದು ಬೇಡ, ಸಕಾಲಕ್ಕೆ ಚುನಾವಣೆ ನಡೆಸಿ ಎಂದು ಕೋರಿದರು.
ಪಾತಾಳಕ್ಕೆ ಕುಸಿದಿದ್ದ ಬ್ಯಾಂಕನ್ನು ಬ್ಯಾಲಹಳ್ಳಿ ಗೋವಿಂದಗೌಡ ನೇತೃತ್ವದ ಆಡಳಿತ ಮಂಡಳಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಮೂಲಕ ಸುಧಾರಣೆ ಮಾಡಿದೆ. ಮಹಿಳಾ ಸಂಘಗಳಿಗೆ, ರೈತರಿಗೆ ಸಾಲ ನೀಡುವ ಮೂಲಕ ಆರ್ಥಿಕವಾಗಿ ಶಕ್ತಿ ತುಂಬಿದೆ. ಸಾಲ ವಸೂಲಿ, ಮರುಪಾವತಿಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಬ್ಯಾಂಕ್ ಈಗ ಏನಾಗಿದೆ ಎಂಬ ಆತಂಕ ಕಾಡುತ್ತಿದೆ ಎಂದರು.
ಸೊಸೈಟಿಗಳಿಗೆ ಹೊಡೆತ
ತಾಲೂಕಿನ ಕಡಗಟ್ಟೂರು ಸೊಸೈಟಿ ಅಧ್ಯಕ್ಷರೂ ಹಾಗೂ ಬ್ಯಾಂಕಿನ ಮಾಜಿ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡದ ಕಾರಣ ಮಹಿಳಾ ಸಂಘಗಳ ಸದಸ್ಯರು ವಿವಿಧ ಶಾಖೆಗಳಲ್ಲಿ ಇಟ್ಟಿರುವ ಉಳಿತಾಯ ಹಾಗೂ ಠೇವಣಿ ಹಣವನ್ನು ವಾಪಸ್ ಪಡೆಯುತ್ತಿದ್ದಾರೆ ಎಂದರು.
ಬ್ಯಾಂಕಿನಿಂದ ಸೊಸೈಟಿಗೆ, ಸೊಸೈಟಿಯಿಂದ ಫಲಾನುಭವಿಗಳಿಗೆ ಸಾಲ ನೀಡಿ, ವಸೂಲಿ ಮಾಡಲಾಗುತ್ತಿತ್ತು. ಆದರೆ, ಆಡಳಿತ ಮಂಡಳಿ ಇಲ್ಲದ ಕಾರಣ ಎಲ್ಲವೂ ಸ್ಥಗಿತವಾಗಿದ್ದು, ಸೊಸೈಟಿಗಳು ಸಹ ಸಕ್ರಿಯ ವಹಿವಾಟು ಕಳೆದುಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಿನಾಕಾರಣ ಚುನಾವಣೆಗೆ ಅಡ್ಡಿ
ವಿನಾಕಾರಣ ಚುನಾವಣೆ ವಿಳಂಬ ಮಾಡಿದರೆ ಮಹಿಳೆಯರು, ರೈತರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಮನಸ್ಸು ಮಾಡಿ ಬ್ಯಾಂಕ್ ಉಳಿಸುವ ಕೆಲಸ ಮಾಡಬೇಕು ಎಂದು ಮಾಜಿ ನಿರ್ದೇಶಕ ಹನುಮಂತರೆಡ್ಡಿ
ಕೋರಿದರು. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಕೆಲವರು ನೆಪವೊಡ್ಡಿ ಚುನಾವಣೆಗೆ ಅಡ್ಡಿಪಡಿಸುವುದು ಸರಿಯಲ್ಲ. ಬಡವರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಬೇಕು. ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಆಡಳಿತಾಧಿಕಾರಿಗಳು ಯಾವುದೇ ರೀತಿಯ ಸಾಲ ಮಂಜೂರಿಗೆ ಅನುಮೋದನೆ ನೀಡುತ್ತಿಲ್ಲ. ಸೊಸೈಟಿಗಳಿಂದ ಕಡತಗಳನ್ನು ತಂದರೂ ಮೂಲೆಗೆ ಹಾಕುತ್ತಿದ್ದಾರೆ ಎಂದು ದೂರಿದರು.
ಕ್ರಮಕೈಗೊಳ್ಳುವ ಭರವಸೆ
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅಕ್ರಂಪಾಷಾ, ಬ್ಯಾಂಕಿನ ಚುನಾವಣೆಯ ಸಂಬಂಧ ಸಹಕಾರ ಇಲಾಖೆಯ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ನಿರ್ದೇಶಕರಾದ ಹೊಳಲಿ ಪ್ರಕಾಶ್, ಕೃಷ್ಣೇಗೌಡ, ಶಂಕರೇನಾರಾಯಣಗೌಡ, ತಾಪಂ ಮಾಜಿ ಸದಸ್ಯ ಗೋಪಾಲಗೌಡ, ರೈತ ಮುಖಂಡರಾದ ಶಿವಪ್ಪ, ಪ್ರಭಾಕರ್‌ಗೌಡ, ಆನಂದ್ ಇತರರಿದ್ದರು.