ಡಿಸಿಸಿ ಬ್ಯಾಂಕಿಗೆ ನಬಾರ್ಡ್ ಪ್ರಶಸ್ತಿ: ನಬಾರ್ಡ್‌ನಿಂದ ನೀಡುವ ಅತ್ಯುನ್ನತ ಪ್ರಶಸ್ತಿಗೆ ಭಾಜನ

31-klr-6
Published on

ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ಡಿಜಿಟಲ್ ವ್ಯವಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಬಾರ್ಡ್‌ನಿಂದ ನೀಡುವ ಅತ್ಯುನ್ನತ ಪ್ರಶಸ್ತಿಗೆ ಭಾಜನವಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಜ.12ರಂದು ಬೆಳಗ್ಗೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಹೋಟೆಲ್ ರ‌್ಯಾಡಿಸ್ ಸನ್‌ಬ್ಲೂ ಏಟ್ರಿಯಾದಲ್ಲಿ ನಡೆಯಲಿದೆ.

ಹತ್ತು ವರ್ಷಗಳ ಹಿಂದೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅನೇಕ ಕಾರಣಗಳಿಂದ ದಿವಾಳಿಯಾಗಿತ್ತು, ರಾಜ್ಯ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೊಂಚ ಮಟ್ಟಿಗೆ ಆರ್ಥಿಕ ಚೇತರಿಕೆ ಕಂಡ ನಂತರ ಬ್ಯಾಂಕಿನ ಉಸ್ತುವಾರಿ ನೋಡಿಕೊಳ್ಳಲು ಆಡಳಿತ ಮಂಡಳಿ ರಚನೆಗಾಗಿ ಚುನಾವಣೆ ನಡೆಸಲಾಗಿತ್ತು. 2013-14ರಲ್ಲಿ ಬ್ಯಾಂಕ್ ಸಾರಥ್ಯವನ್ನು ಹಿರಿಯ ಸಹಕಾರಿ ಬ್ಯಾಲಹಳ್ಳಿ ಗೋವಿಂದಗೌಡ ವಹಿಸಿಕೊಂಡಾಗ ಬ್ಯಾಂಕಿನ ಆರ್ಥಿಕ ಸ್ಥಿತಿ ಅಸ್ಥಿ ಪಂಜರದಂತಿತ್ತು. ಬ್ಯಾಂಕ್ ಪುನಶ್ಚೇತನಕ್ಕೆ ನೆರವು ನೀಡಲು ನಬಾರ್ಡ್ ಅಧಿಕಾರಿಗಳು ಹಿಂದೇಟು ಹಾಕಿದ್ದಲ್ಲದೆ, ನೆರವು ಕೋರಲು ಹೋಗಿದ್ದ ಅಧ್ಯಕ್ಷರ ಬೇಡಿಕೆಯನ್ನು ಅಪಹಾಸ್ಯ ಮಾಡಿದ್ದರು.

ನಬಾರ್ಡ್ ಅಧಿಕಾರಿಗಳ ಬೆನ್ನತ್ತಿದ್ದ ಅಧ್ಯಕ್ಷರು ನಿಷ್ಕ್ರಿಯಗೊಂಡಿದ್ದ ಬ್ಯಾಂಕನ್ನು ಸೆಕ್ಷನ್ 11ರಿಂದ ಹೊರತೆಗೆದು ಪುನಶ್ಚೇತನಕ್ಕೆ ಅನುಮತಿ ಪಡೆದು 8 ವರ್ಷಗಳ ಅವಿರತ ಪ್ರಯತ್ನದಿಂದ ದೇಶದ ಸಹಕಾರಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಸಾಧನೆ ಸುವರ್ಣಾಕ್ಷರಗಳಿಂದ ಬರೆಯುವಂತೆ ಮಾಡಿದ ಫಲದಿಂದ ಈ ಹಿಂದೆ ಪ್ರಶಸ್ತಿ ಲಭಿಸಿತ್ತು.

8 ವರ್ಷಗಳಲ್ಲಿ ಬ್ಯಾಂಕಿನಿಂದ ಅವಳಿ ಜಿಲ್ಲೆಯ ಲಕ್ಷಾಂತರ ರೈತರಿಗೆ, ಮಹಿಳಾ ಸ್ವ-ಸಹಾಯ ಸಂಘಗಳಿಗೆ, ಬೀದಿಬದಿ ವ್ಯಾಪಾರಿಗಳಿಗೆ ಸುಮಾರು 1500 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ. ಬ್ಯಾಂಕಿನ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲ ಶಾಖೆಗಳನ್ನು ಡಿಜಿಟಲ್ ಮಾಡಲಾಗಿದೆ. ಜತೆಗೆ ಸಹಕಾರ ಸಂಘಗಳನ್ನೂ ಕಂಪ್ಯೂಟರೀಕರಣಗೊಳಿಸಲಾಗಿದ್ದು ಇದು ಸಹಕಾರಿ ಕ್ಷೇತ್ರದಲ್ಲಿ ಆಗಿರುವ ದೊಡ್ಡ ಸಾಧನೆ.

ಡಿಸಿಸಿ ಬ್ಯಾಂಕ್ ಉಳಿಸಿಕೊಳ್ಳಲು ಪಟ್ಟಿರುವ ಕಷ್ಟಕ್ಕೆ ಸಂದ ಪ್ರತಿಫಲ ಇದಾಗಿದೆ. ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ವಸ್ತುಸ್ಥಿತಿ ತಿಳಿಯದೆ ಕೆಲವರು ಟೀಕೆ-ಟಿಪ್ಪಣಿ ಮಾಡಿದ್ದಾರೆ. ಸತ್ಯ ನಮ್ಮನ್ನು ಕಾಪಾಡುತ್ತಿದೆ, ಪ್ರಶಸ್ತಿ ಸಿಕ್ಕಿರುವುದಕ್ಕೆ ಬೀಗುವುದಿಲ್ಲ. ಬಡ ರೈತರು, ಮಹಿಳೆಯರಿಗೆ ಹೆಚ್ಚಿನ ಅನುಕೂಲವಾದಾಗ ಮಾತ್ರ ತೃಪ್ತಿ ಸಿಗುತ್ತದೆ, ಬ್ಯಾಂಕನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ, ಆಡಳಿತ ಮಂಡಳಿ, ಮುಖ್ಯವಾಗಿ ಅಧಿಕಾರಿಗಳ ಸಹಕಾರದಿಂದ ಪ್ರಶಸ್ತಿ ಸಿಕ್ಕಿದೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net