ಡಿಸಿಸಿ ಬ್ಯಾಂಕ್ ಅವ್ಯವಹಾರ ತನಿಖೆಗೆ ಪಟ್ಟು: ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಪ್ರತಿಭಟನೆ

27-klr-1
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬ್ಯಾಂಕ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಜಿ.ವಿ.ಹನುಮೇಗೌಡ ಮಾತನಾಡಿ, ಪ್ರಧಾನಿ ಮೋದಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ- ಸೌಲಭ್ಯ ಕಲ್ಪಿಸಲು ನಬಾರ್ಡ್ ಅಪೆಕ್ಸ್ ಬ್ಯಾಂಕ್ ಮೂಲಕ ಡಿಸಿಸಿ ಬ್ಯಾಂಕ್‌ಗಳಿಗೆ ನೀಡುವ ಹಣವನ್ನು ಸ್ವಂತದಿಂದ ನೀಡುತ್ತಿರುವಂತೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಒಂದು ಹಂತದ ತನಿಖೆ ನಡೆದು ಕೆಲ ಅಂಶಗಳು ಸಾಬೀತಾಗಿವೆ. ಆದರೆ ತನಿಖಾ ಅಧಿಕಾರಿಗಳನ್ನೇ ರೆಸಾರ್ಟ್‌ಗೆ ಕರೆಸಿ ಕುಡಿಸಿ ಕಳುಹಿಸಿದ್ದಾರೆ ಎಂದು ಆರೋಪಿಸಿದರು.

ಅವಿಭಜಿತ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ದುರಾಡಳಿತದ ವಿರುದ್ಧ ಮೊದಲ ಬಾರಿಗೆ ಬೀದಿಗಿಳಿದು ಹೋರಾಟ ಆರಂಭವಾಗಿದೆ. ಆಡಿಟರ್, ಅಪೆಕ್ಸ್ ಇನ್ನಿತರ ಅಧಿಕಾರಿಗಳನ್ನು ಕೈವಶದಲ್ಲಿಟ್ಟುಕೊಂಡಿರುವವರ ಆಟಕ್ಕೆ ಕೊನೆಹಾಡುತ್ತೇವೆ. ತನಿಖೆ ನಡೆಸಲು ಸರ್ಕಾರದಿಂದ ಶೀಘ್ರ ತಂಡ ರಚನೆಯಾಗಲಿದೆ. ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ಸಹಕಾರಿ ಸಂಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಬೇಡವೆಂದು ತಾಳ್ಮೆಯಿಂದಿದ್ದೆವು. ಸರಿಹೋಗುವ ಲಕ್ಷಣ ಕಂಡುಬರುತ್ತಿಲ್ಲ. ಯಾವ ಸಭೆಗೂ ಸಂಸದರನ್ನು ಕರೆದಿಲ್ಲ, ಪ್ರತಿಭಟನೆ ಮಾಡಿದರೆ ಸ್ತ್ರೀಶಕ್ತಿ ಸಂಘ, ರೈತರಿಗೆ ಸಾಲ ನೀಡುವುದಕ್ಕೆ ಅಡ್ಡಿಪಡಿಸುತ್ತಾರೆಂದು ಅಪಪ್ರಚಾರ ನಡೆಸುತ್ತಾರೆ. ಸಾಲ ವಿತರನೆಗೆ ನಮ್ಮ ಅಡ್ಡಿಯಿಲ್ಲ. ಆದರೆ ಅವ್ಯವಹಾರ ಬಯಲಿಗೆಳೆಯುವುದು ನಮ್ಮ ಉದ್ದೇಶ ಎಂದರು.

ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ಕೆಜಿಎಫ್ ಟಿಎಪಿಸಿಎಂಎಸ್ ರಚನೆ ವಿಚಾರದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಎದುರು ಶಾಸಕಿ ಎಂ.ರೂಪಕಲಾ ಎರಡು ದಿನ ಪ್ರತಿಭಟನೆಯ ನಾಟಕವಾಡಿದ್ದಾರೆ. ನಿಜವಾದ ರೈತರು ಪ್ರತಿಭಟನೆಗೆ ಬಂದಿರಲಿಲ್ಲ ಎಂದು ಛೇಡಿಸಿದರಲ್ಲದೆ ಮುಖ್ಯ ಪ್ರವರ್ತಕರ ನೇಮಕದಲ್ಲಿ ಯಾವುದೇ ಲೋಪವಾಗಿಲ್ಲ, ಶಾಸಕರು ಸೋಲಿನ ಭಯದಿಂದ ಪ್ರತಿಭಟನೆ ನಡೆಸಿದ್ದಾರೆ ಎಂದರು.

2018ರ ವಿಧಾನಸಭೆ ಚುನಾವಣೆ ಮುನ್ನ ಡಿಸಿಸಿ ಬ್ಯಾಂಕ್ ಹಣವನ್ನು ಸಾಲವಾಗಿ ನೀಡಿ ದೇವಸ್ಥಾನದ ಮುಂದೆ ಆಣೆ ಮಾಡಿಸಿ ಗೆದ್ದಿದ್ದಾರೆ. ಅಧಿಕಾರ ಶಾಶ್ವತವಲ್ಲ. ಯಾವುದೋ ದಾರಿಯಲ್ಲಿ ಶಾಸಕರಾಗಿದ್ದೀರಿ, ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಕಾಂಗ್ರೆಸ್ ಕಾರ್ಯಕರ್ತರೇ ಬೇಸತ್ತಿದ್ದಾರೆ. ಬ್ಯಾಲಹಳ್ಳಿ ಗೋವಿಂದಗೌಡ ಅವಕಾಶವಾದಿ. ನೀವು ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಹೋಗಿ ಎಂದು ಶಾಸಕಿಗೆ ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ನಾಮಿನಿ ನಿರ್ದೇಶಕ ಅಶ್ವತ್ಥಪ್ಪ, ಬಾಗೇಪಲ್ಲಿಯ ಶಿವಾರೆಡ್ಡಿ, ಮುಖಂಡರಾದ ಚಿಂತಾಮಣಿ ಪ್ರತಾಪ್, ಡಾ.ಕೃಷ್ಣಮೂರ್ತಿ, ಜಯರಾಮರೆಡ್ಡಿ, ಮುನಿಯಪ್ಪ, ಬೇತಮಂಗಲ ಧಣಿ, ಸುನೀಲ್, ವಿಜಯಕಯಮಾರ್, ಮಣಿಕಂಠನ್, ಸುರೇಶ್, ಶಿವರಾಮ್, ಲೋಕನಾಥ್ ನಾಯ್ಡು, ಬಿಜೆಪಿ ನಗರಾಧ್ಯಕ್ಷ ತಿಮ್ಮರಾಯಪ್ಪ, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.

ಡಿಸಿಸಿ ಬ್ಯಾಂಕ್‌ನಲ್ಲಿ ಸುಮಾರು 500 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ನಡೆದಿರುವ ಬಗ್ಗೆ ಬಿಜೆಪಿ, ಜೆಡಿಎಸ್, ಸಾರ್ವಜನಿಕರು ಸರ್ಕಾರಕ್ಕೆ ದೂರು ನೀಡಿದ್ದಾರೆ. ತನಿಖೆ ನಡೆಯುವ ಕಡೆ ಬ್ಯಾಂಕ್ ಅಧ್ಯಕ್ಷರು ಹೋಗಿ ದೌರ್ಜನ್ಯದಿಂದ ತಾನು ಹೇಳಿದಂತೆ ತನಿಖೆ ಮಾಡಬೇಕೆಂದು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬರೆಯಿಸಿ ಸಹಿ ಹಾಕಿ ಕಳುಹಿಸುತ್ತಿದ್ದಾರೆ. ಎಲ್ಲ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ವೈ.ಸಂಪಂಗಿ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net