

ಕೆ.ಆರ್.ನಗರ: ಪಟ್ಟಣದ 19ನೇ ವಾರ್ಡ್ ನಿವಾಸಿಯೊಬ್ಬರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದ್ದು, ಸಾರ್ವಜನಿಕರ ಅನಗತ್ಯ ಓಡಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಶುಕ್ರವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸೀಲ್‌ಡೌನ್ ಪ್ರದೇಶದಲ್ಲಿರುವ 700 ರಿಂದ 800 ಕುಟುಂಬಗಳಿಗೆ ಹಾಲು, ತರಕಾರಿ, ದಿನಸಿ ಇನ್ನಿತರ ಅಗತ್ಯ ದಿನಬಳಕೆ ವಸ್ತುಗಳನ್ನು ಪುರಸಭೆ ವತಿಯಿಂದ ತಲುಪಿಸುವಂತೆ ಸೂಚಿಸಿದರು.
ಸೋಂಕಿತ ವ್ಯಕ್ತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 40 ಜನರನ್ನು ಕ್ವಾರೆಂಟೈನ್ ಮಾಡಲಾಗಿದ್ದು, ಅವರ ರಕ್ತ ಮತ್ತು ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕೆಮ್ಮು ಮತ್ತು ಜ್ವರ ಪೀಡಿತರನ್ನು ಪರೀಕ್ಷಿಸಲಾಗುವುದು ಎಂದರು.
ತಾಲೂಕಿನಲ್ಲಿ ಕರೊನಾ ಪಾಸಿಟಿವ್ ಬಂದಿರುವ ಮೊದಲ ಪ್ರಕರಣ ಇದಾಗಿರುವುದರಿಂದ ಇತರರಿಗೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ತಹಸೀಲ್ದಾರ್ ಮಂಜುಳಾ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಕೆ.ಶಿವಣ್ಣ, ಇಂಜಿನಿಯರ್ ರವಿಕುಮಾರ್, ಸಿಪಿಐ ಪಿ.ಕೆ.ರಾಜು, ಪಿಎಸ್‌ಐ ವಿ.ಚೇತನ್, ಆರೋಗ್ಯ ನಿರೀಕ್ಷಕ ರಮೇಶ, ಸಹಾಯಕ ನಿರೀಕ್ಷಕ ಕೆ.ವಿ.ರಮೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ ಇತರರು ಹಾಜರಿದ್ದರು.