ಉಡುಪಿ: ಕೃಷಿಭೂಮಿಯನ್ನು ಹಡಿಲು ಬಿಡುವುದು ಕಾನೂನಿನಲ್ಲಿ ಅಪರಾಧವಾಗಿದೆ. ಹೀಗಾಗಿ ಉಡುಪಿ ವಿಧಾನಸಭಾ ಕ್ಷೇತ್ರ ನಡೆಯುತ್ತಿರುವ ಹಡಿಲು ಭೂಮಿ ಕೃಷಿ ಅಭಿಯಾನದ ಬಗ್ಗೆ ಅಪಸ್ವರ ಸಲ್ಲದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.
ಕಡೆಕಾರಿನಲ್ಲಿ ಹಡಿಲು ಭೂಮಿ ಕೃಷಿ ಅಭಿಯಾನದ ಅಂಗವಾಗಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆ ಬಗ್ಗೆ ಮಾಹಿತಿ ಪಡೆದಿದೆ. ಮುಂದಿನ ವರ್ಷದಿಂದ ಸ್ವತಹ ಕೃಷಿಕರೇ ಉಳುಮೆ ಮಾಡಲಿದ್ದಾರೆ. ಈಗಾಗಲೇ 500 ಮಂದಿ ರೈತರು ಸ್ವತಃ ಕೃಷಿ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಈ ಬಗ್ಗೆ ಅಪಸ್ವರ ಇದ್ದರೆ ಸ್ವತಃ ಬಂದು ಪರಿಶೀಲನೆ ಮಾಡಬಹುದು. ಜಿಲ್ಲೆಯ ಅಭಿವೃದ್ಧಿಗೆ ಅಭಿಯಾನ ಪೂರಕವಾಗಿದೆ ಎಂದರು.
ಮುಖ್ಯಮಂತ್ರಿಗಳು ನಿನ್ನೆ 19 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲು ಸೂಚನೆ ನೀಡಿದ್ದಾರೆ ಇದರಲ್ಲಿ ಉಡುಪಿ ಜಿಲ್ಲೆಯು ಒಂದಾಗಿರುವುದು ಸಂತಸದ ವಿಚಾರ. ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. ೧೦ ಕಿಂತ ಕೆಳಕ್ಕೆ ಇಳಿಕೆಯಾಗಿದೆ. ಲಾಕ್ಡೌನ್ ಸಲ್ಲಿಕೆಯಾಗಿದೆ ಎಂದು ಮೈ ಮರೆಯುವಂತಿಲ್ಲ. ಗಡಿಗೆ ಹೊಂದಿಕೊಂಡಿರುವ ಸುತ್ತಮುತ್ತಲಿನ ಜಿಲ್ಲೆಗಳಾದ ಶಿವಮೊಗ್ಗ , ದಕ್ಷಿಣ ಕನ್ನಡ , ಚಿಕ್ಕಮಂಗಳೂರು ಹಾಗೂ ಹಾಸನದಲ್ಲಿ ಲಾಕ್ಡೌನ್ ವಿಸ್ತರಣೆಯಾಗಿದೆ. ಹೀಗಾಗಿ ಅಂತರ್ಜಿಲ್ಲಾ ಪ್ರಯಾಣದ ಬಗ್ಗೆ ಮಾರ್ಗಸೂಚಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.