ಸೈಕಲ್​ನಲ್ಲಿ ಡಿಸಿ ನಗರ ಪ್ರದಕ್ಷಿಣೆ

dc city round
ಕಸದ ರಾಶಿ ಕಂಡು ವಿಲೇವಾರಿ ಮಾಡಿಸುವಂತೆ ನಗರಸಭೆ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ.
Published on

ಕೋಲಾರ: ಸಾರ್ವಜನಿಕ ದೂರುಗಳ ಹಿನ್ನಲೆಯಲ್ಲಿ ಭಾನುವಾರ ಬೆಳಗ್ಗೆ ದಿಢೀರ್​ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರಿಗೆ ಕಸದ ಸಮಸ್ಯೆ, ಪಾದಚಾರಿ ಮಾರ್ಗದ ಒತ್ತುವರಿಯ ದಿಗ್ದರ್ಶನವಾಯಿತು.

ನಸುಕಿನಲ್ಲೇ ಸೈಕಲ್​ ಏರಿ ನಗರದ ವಿವಿಧ ಬಡಾವಣೆಗಳಿಗೆ ಸುತ್ತಾಡಿದ ಜಿಲ್ಲಾಧಿಕಾರಿ ಕಸ ವಿಲೇವಾರಿ, ನಗರಸಭೆಯಿಂದ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಬಸ್​ ನಿಲ್ದಾಣ, ಎಂಜಿ ರಸ್ತೆ, ದೊಡ್ಡಪೇಟೆ, ನಲ್ಲಗಂಗಮ್ಮ ದೇವಾಲಯ, ಕೋಲಾರಮ್ಮ ಹಾಗೂ ಸೋಮೇಶ್ವರ ದೇವಾಲಯ, ಕ್ಲಾಕ್​ ಟವರ್​, ುಲ್​ಷಾ ಮೋಹಲ್ಲಾ, ಪಾಲಸಂದ್ರ ಬಡಾವಣೆ ಹೀಗೆ ಹಲವು ಸ್ಥಳಗಳಿಗೆ ಸಂಚರಿಸಿದ ಜಿಲ್ಲಾಧಿಕಾರಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಈಗಾಗಲೇ ನಗರದಲ್ಲಿ ಬ್ಲಾಕ್​ ಸ್ಪಾಟ್​ಗಳನ್ನು ಗುರುತಿಸಲಾಗಿದ್ದು, ಕಸವನ್ನು ತಂದು ಎಲ್ಲೆಂದರಲ್ಲಿ ಎಸೆಯುವವರ ವಿರುದ್ಧ ನಿಗಾವಹಿಸಿ ದಂಡ ವಿಧಿಸಬೇಕು, ಆದರೂ ಎಚ್ಚೆತ್ತುಕೊಳ್ಳದಿದ್ದರೆ ಪ್ರಕರಣ ದಾಖಲಿಸಿ ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ಜಿಲ್ಲಾ ಕೇಂದ್ರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಗರವಾಸಿಗಳು ಮನೆಯಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸಿ ಪೌರ ಕಾರ್ಮಿಕರಿಗೆ ವಿಲೇವಾರಿ ಮಾಡಬೇಕು. ಮನಬಂದಂತೆ ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಕಸ ಸುರಿಯಬಾರದು ಎಂದು ತಿಳಿಸಿದರು.

ನಗರ ಭಾಗದಲ್ಲಿ ಬಹುತೇಕ ರಸ್ತೆಗಳ ಪಕ್ಕದಲ್ಲಿನ ಪಾದಚಾರಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಜಾಗವನ್ನು ಅಂಗಡಿಗಳವರು ಒತ್ತುವರಿ ಮಾಡಿಕೊಂಡು ಸಮಾಗ್ರಿಗಳನ್ನು ಜೋಡಿಸಿ ಇಟ್ಟುಕೊಂಡಿರುತ್ತಾರೆ. ಜನರ ಓಡಾಟಕ್ಕೆ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ದೂರಿದರು.

ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿರುವ ಅಂಗಡಿಗಳ ಮಾಲೀಕರಿಗೆ ತೆರವು ಮಾಡಲು ಸೂಚಿಸಿ. ಆಗಲೂ ಎಚ್ಚೆತ್ತುಕೊಳ್ಳದಿದ್ದರೆ ದಂಡ ಹಾಕಿ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಗಳು ಎಚ್ಚರವಹಿಸಬೇಕು ಎಂದು ಡಿಸಿ ಸೂಚಿಸಿದರು.

ಆಯುಕ್ತ ನವೀನ್​ ಚಂದ್ರ, ಎಎಇ ಶ್ರೀನಿವಾಸ್​, ಎಇ ಗಂಗಾಧರ್​ ಇದ್ದರು.

* ಆರೋಗ್ಯ ನಿರೀಕ್ಷಕ, ಇಂಜಿನಿಯರ್​ಗೆ ತರಾಟೆ

ಕೋಲಾರಮ್ಮ ದೇವಾಲಯಲಕ್ಕೆ ಭೇಟಿ ನೀಡಿದ ಡಿಸಿ ಡಾ.ಎಂ.ಆರ್​.ರವಿ, ನಾನು ಇಲ್ಲಿಗೆ ಮೂರನೇ ಬಾರಿ ಭೇಟಿ ನೀಡುತ್ತಿದ್ದೇನೆ. ಸ್ವಚ್ಛತೆ ಮಾಡಲು ಹಾಗೂ ಪಾದರೆಗಳನ್ನು ಭಕ್ತರು ಬಿಡಲು ವ್ಯವಸ್ಥೆ ಸೇರಿ ಕೆಲ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೂ ಮಾಡಿಲ್ಲ, ಇದು ಹೀಗೆ ಮುಂದುವರಿದರೆ ಬೇರೆ ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕಸದ ರಾಶಿ ಕಂಡು ಇಲ್ಲಿ, ಸೂಪರ್ವೈಸರ್​ ಯಾರು, ಕಸ ಇಷ್ಟೊಂದು ಇದಿಯಲ್ಲ, ಪ್ರತಿ ದಿನ ಸ್ವಚ್ಛತೆ ಮಾಡಿಸಲು ಆಗುವುದಿಲ್ಲವೆ ಎಂದು ಆರೋಗ್ಯ ನಿರೀಕ್ಷಕ ನವಾಜ್​ನನ್ನು ತರಾಟೆಗೆ ತೆಗೆದುಕೊಂಡು, ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ದೇವಾಲಯದ ಮೇಲೆ ಬೆಳಕು ಬೀಳುವಂತೆ ಎರಡು ೋಕಸ್​ ಲೈಟ್​ ಅಳವಡಿಸಬೇಕು ಎಂದು ತಾಕೀತು ಮಾಡಿದರು.

* ಪೌರಕಾರ್ಮಿಕರಿಗೆ ಸಲಹೆ

ಕಸ ವಿಲೇವಾರಿ ಮಾಡುತ್ತಿದ್ದ ಪೌರಕಾರ್ಮಿಕರ ಕಾರ್ಯ ಗಮನಿಸಿದರು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು, ಜತೆಗೆ ಸುರಕ್ಷತಾ ಸಲಕರಣೆಗಳನ್ನು ಅಳವಡಿಸಬೇಕು ಎಂದು ಡಿಸಿ ರವಿ ಸಲಹೆ ನೀಡಿದರು. ಪೌರಕಾರ್ಮಿರಿಗೆ ಕಸ ವಿಲೇವಾರಿ ಮಾಡಲು ಏನು ಬೇಕು ಎಂಬುದನ್ನು ಆರೋಗ್ಯ ನಿರೀಕ್ಷಕರು ಗಮನಿಸಬೇಕು. ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net