ಶ್ರೀಗಂಧ ಬೆಳೆದವರ ಸ್ಥಿತಿ ಅತಂತ್ರ

sriganda story
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಶ್ರೀಗಂಧ ಬೆಳೆಯಿರಿ, ಶ್ರೀಮಂತರಾಗಿ ಎಂದು ಸರ್ಕಾರವು ಒಂದು ಕಾಲದಲ್ಲಿ ಉತ್ತೇಜನ ನೀಡಿತು. ಆದರೆ, ಈಗ ಕಳವು, ಮಾರುಕಟ್ಟೆ ಸಮಸ್ಯೆಯಿಂದಾಗಿ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಅರಣ್ಯ ಕೃಷಿ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ರೈತರಿಗೆ ಉತ್ತೇಜನ ನೀಡಿ ಈಗ 10, 15 ವರ್ಷ ಮೇಲ್ಪಟ್ಟು ಬೆಳೆದು ನಿಂತಿರುವ ಶ್ರೀಗಂಧ ಮರಗಳು ಕಳ್ಳರ ಪಾಲಾಗುತ್ತಿದ್ದು, ಇದರಿಂದ ರೈತರು ಕಂಗೆಟ್ಟಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಮಳೆಯಾಶ್ರಿತ ಪ್ರದೇಶಗಳಾಗಿದ್ದು, ನೀರಿಲ್ಲದೆ ಸಮಸ್ಯೆ ಎದುರಿಸುತ್ತಿದ್ದನ್ನು ಕಂಡ ಅರಣ್ಯ ಕೃಷಿಯಡಿ ನರ್ಸರಿಗಳ ಮೂಲಕ 84 ಲಕ್ಷ ಸಸಿ ವಿತರಿಸಿದ್ದು, ಸುಮಾರು 50 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ರೈತರು ಬೆಳೆ ನಾಟಿ ಮಾಡಿದ್ದಾರೆ. ಆದರೆ, ಬೆಳೆಯನ್ನು ರೈತರೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಅರಣ್ಯ ಇಲಾಖೆ ಮತ್ತು ಪೊಲೀಸ್​ ಇಲಾಖೆ ಸೂಚಿಸಿದೆ.

ಹೀಗಾಗಿ ರೈತರು ಈಗ ಬೆಳೆದು ನಿಂತಿರುವ ಮರಗಳನ್ನು ರಕ್ಷಣೆ ಮಾಡಿಕೊಳ್ಳಲು ಸಿಸಿ ಕ್ಯಾಮರಾ, ಬೇಲಿ ನಿರ್ಮಾಣ ಮಾಡಿಕೊಂಡಿದ್ದರೂ ಕಳವು ಪ್ರಕರಣಗಳು ನಿಂತಿಲ್ಲ. ಆರಂಭದಲ್ಲಿ ಸಸಿಗಳನ್ನು ಕೊಟ್ಟು ಎರಡು ವರ್ಷ ಪೋಷಣೆಗೆ ಹಣ ನೀಡಿದ ಅರಣ್ಯ ಇಲಾಖೆ ಈಗ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀಗಂಧ ಮಾರಾಟದ ವಿಚಾರದಲ್ಲಿ ಸರ್ಕಾರವೂ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ ಅಥವಾ ತೋಟಗಾರಿಕೆ ವ್ಯಾಪ್ತಿಗೆ ಬೆಳೆ ಸೇರಿಸಬೇಕೇ ಎಂಬ ಗೊಂದಲದಲ್ಲಿದೆ. ಬೆಳೆಗಾರರೆ ಮುಕ್ತವಾಗಿ ಮಾರಾಟ ಮಾಡಿಕೊಳ್ಳಲೂ ಅವಕಾಶ ಕಲ್ಪಿಸದೆ ರ್ನಿಬಂಧ ಹೇರಿದೆ. ಈಗ ಶ್ರೀಗಂಧ ಮರ ಸೇಗು ಹಂತಕ್ಕೆ ಬಂದಿದ್ದು, ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ.ಬೆಲೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಮರಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದಾರೆ.

ಮುಳಬಾಗಿಲು ಗ್ರಾಮಾಂತರ ಠಾಣೆ, ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಠಾಣೆ ವ್ಯಾಪ್ತಿಗಳಲ್ಲಿ ಶ್ರೀಗಂಧ ಕಳ್ಳತನ ಹೆಚ್ಚಿದ್ದು, ಪ್ರಕರಣ ದಾಖಲಿಸಿದರೂ ಆರೋಪಿಗಳ ವಿರುದ್ಧ ಕ್ರಮ ಆಗಿಲ್ಲ ಎಂಬುದು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

* ಹೆಬ್ಬೇವಿಗೂ ಇಲ್ಲ ಬೇಡಿಕೆ

ಶ್ರೀಗಂಧ ಪರಾವಲಂಬಿ ಮರ, ಇದರ ಜತೆಗೆ ಇತರ ಜಾತಿಯ ಮರಗಳನ್ನು ನೆಡಬೇಕು. ಆಗ ಮಾತ್ರ ಶ್ರೀಗಂಧ ಬೇಗ ದೊಡ್ಡದಾಗಿ ಸೇಗು ಹಿಡಿಯುತ್ತದೆ. ಇದಕ್ಕಾಗಿಯೇ ಸಾಕಷ್ಟು ಮಂದಿ ರೈತರು ಹೆಬ್ಬೇವು ಬೆಳೆದಿದ್ದು, ಅದನ್ನೂ ಕೇಳುವವರಿಲ್ಲದಂತಾಗಿದೆ.

* ಶ್ರೀಗಂಧ ಸಂಗ್ರಹಕ್ಕೂ ರ್ನಿಬಂಧ

ಅರಣ್ಯ ಇಲಾಖೆಯ ನಿಯಮಗಳಂತೆ ಯಾವುದೇ ವ್ಯಕ್ತಿ 4 ಕೆಜಿಗಿಂತ ಹೆಚ್ಚಿಗೆ ಶ್ರೀಗಂಧ ಇಟ್ಟುಕೊಳ್ಳಲು ಅವಕಾಶವಿಲ್ಲ. ಕಳ್ಳರು ಭಾಗಶ@ ಮರ ಕತ್ತರಿಸಿ ಬಿಟ್ಟು ಹೋಗುತ್ತಾರೆ. ಈ ಮರಗಳಲ್ಲಿ ಸೇಗು ಇರುವುದಿಲ್ಲ. ಇದನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಮತ್ತು ಅರಣ್ಯ ಇಲಾಖೆ ಖರೀದಿ ಮಾಡುವುದಿಲ್ಲ. ಆಗ ಇಂತಹದನ್ನು ಬೆಳೆಗಾರರು ಏನು ಮಾಡಬೇಕು, ಕಟಾವಿಗೆ ಬಂದಿರುವ ಮರಗಳನ್ನು ಕತ್ತರಿಸಿ ದಾಸ್ತಾನು ಮಾಡಿಟ್ಟುಕೊಳ್ಳಲು ಸರ್ಕಾರ ಅನುಮತಿ ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.

* ಕಳ್ಳರ ಪಾಲಿಗೆ ಎಟಿಎಂ

ಕಳ್ಳರಪಾಲಿಗೆ ಶ್ರೀಗಂಧ ಎಟಿಎಂ ಆಗಿದೆ. ಕಳ್ಳಮಾಲನ್ನು ಖರೀದಿ ಮಾಡುತ್ತಿರುವವರು, ಕಳ್ಳರಿಗೆ ಕುಮ್ಮಕ್ಕು ನೀಡುವವರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಇನ್ನಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರಿಗೆ ಸಕಾರಾತ್ಮಕ ಆದೇಶ ಹೊರಡಿಸಲು ಕ್ರಮಕೈಗೊಳ್ಳಬೇಕಿದೆ.

* ಪಾಲನೆಯಾಗದ ಬೆಲೆ ನಿಗದಿ ಕಾಯ್ದೆ

ಅರಣ್ಯ ಕಾಯ್ದೆ ಖಂಡಿಕೆ 108 (6)ರಂತೆ ಪ್ರತಿ ವರ್ಷ ಶ್ರೀಗಂಧದ ಚಿಲ್ಲರೆ ದರವನ್ನು ನಿಗದಿಪಡಿಸಿಬೇಕೆಂದಿದೆ. 2021ರ ಆದೇಶದಂತೆ ಸೇಗಿನ ಕೆಜಿಗೆ 12,200 ರೂ. ನಿಗದಿಪಡಿಸಲಾಗಿದೆ. ಜತೆಗೆ ಮರದ ಇತರ ಭಾಗಗಳಿಗೂ ಬೇರೆ ಬೇರೆ ಮೌಲ್ಯವಿದೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮವು 1 ಕೆಜಿ ಶ್ರೀಗಂಧಕ್ಕೆ 31,000 ರೂ. ನಿಗದಿಪಡಿಸಿದೆ. 2018 ಮತ್ತು 2021ರಲ್ಲಿ ಮಾತ್ರ ಈ ಆದೇಶ ಪಾಲನೆ ಆಗಿದ್ದು ಬಿಟ್ಟರೆ, ಬೇರೆ ವರ್ಷಗಳಲ್ಲಿ ನಿಗದಿ ಮಾಡದೆ ರೈತರಿಗೆ ಸರ್ಕಾರವೇ ಮೋಸ ಮಾಡಿದೆ ಎಂದು ಶ್ರೀಗಂಧ ಬೆಳೆಗಾರರ ಆರೋಪಿಸಿದ್ದಾರೆ.

ಕೋಟ್​...

ಶ್ರೀಗಂಧ ಬೆಳೆ ಬೆಳೆಯಲು ಉತ್ತೇಜನ ನೀಡಿದ್ದು ಸರ್ಕಾರವೇ. ಕಟಾವಿಗೆ ಬಂದಿರುವ ಗಂಧ ಮಾರಾಟ ಮಾಡಲು ಮುಕ್ತ ಅವಕಾಶ ನೀಡಿಲ್ಲ. ಇದರಿಂದಾಗಿ ಕಳ್ಳರ ಹಾವಳಿ ಜಾಸ್ತಿಯಾಗಿದ್ದು, ಇದಕ್ಕೆ ಸರ್ಕಾರ, ಅರಣ್ಯ ಇಲಾಖೆಯ ಕುಮ್ಮಕ್ಕು ಇದೆ. ಬೆಳೆಗಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ಹೋರಾಟ ನಡೆಸುತ್ತೇವೆ.

> ವೆಂಕಟೇಶ್​ ಗೌಡ, ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂದ ಜಿಲ್ಲಾಧ್ಯಕ್ಷ, ಕೋಲಾರ

ಕೋಟ್​..

ಶ್ರೀಗಂಧ ಬೆಳೆಗಾರರ ಸಮಸ್ಯೆ ಅರಣ್ಯ ಸಚಿವರ ಗಮನಕ್ಕೆ ತರಲಾಗಿದ್ದು, ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸರ್ಕಾರವು ಶ್ರೀಗಂಧ ಬೆಳೆಗಾರರ ವಿಚಾರದಲ್ಲಿ ರ್ನಿಲಕ್ಷ$್ಯ ತೋರುತ್ತಿದೆ ಎಂಬುದಕ್ಕೆ ಉದಾಹರಣೆ.

> ಬೆಲ್ಲಂ ಶ್ರೀನಿವಾಸರೆಡ್ಡಿ, ಶ್ರೀಗಂಧ ಬೆಳೆಗಾರ, ಶ್ರೀನಿವಾಸಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net