ಡಿಬಿಟಿ ಸ್ಥಗಿತ ಮನವಿ ಅರ್ಜಿ ವಜಾ : ಹೈಕೋರ್ಟ್ ಆದೇಶ

highcourt
Published on

ಬೆಂಗಳೂರು: ಆರ್ಥಿಕ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವ ಉದ್ದೇಶದೊಂದಿಗೆ ಡಿಬಿಟಿ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ರಾಜ್ಯದಲ್ಲಿ ‘ನೇರ ನಗದು ವರ್ಗಾವಣೆ’ (ಡಿಬಿಟಿ) ಮೂಲಕ ಅರ್ಚಕರಿಗೆ ತಸ್ತಿಕ್ ಹಣ ಪಾವತಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಈ ವಿಚಾರವಾಗಿ ಕೆ.ಎಸ್. ಪದ್ಮನಾಭಾಚಾರ್ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಐವರು ಅರ್ಚಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಡಿಬಿಟಿ ವ್ಯವಸ್ಥೆಯಡಿ ತಸ್ತಿಕ ಹಣ ಪಡೆದುಕೊಳ್ಳಬೇಕಾದರೆ ಹತ್ತಾರು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಇದು ಗೊಂದಲದಿಂದ ಕೂಡಿದೆ. ದೇವಸ್ಥಾನದ ಅರ್ಚಕರಿಗೆ ತಂತ್ರಜ್ಞಾನ ಅಷ್ಟಾಗಿ ತಿಳಿದಿರುವುದಿಲ್ಲ. ಹಳ್ಳಿಗಾಡು, ಅರಣ್ಯ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಸಹ ಇರುತ್ತದೆ. ದಾಖಲೆಗಳನ್ನು ಸಲ್ಲಿಸಲು ಅರ್ಚಕರು ಹತ್ತಾರು ಕಿ.ಮೀ. ಪ್ರಯಾಣಿಸಿ ತಹಶೀಲ್ದಾರ್ ಕಚೇರಿಗೆ ಬರಬೇಕು. ಇದರಿಂದ ದೈನಂದಿನ ಪೂಜಾ ಕೈಂಕರ್ಯಗಳಿಗೆ ತೋಂದರೆ ಆಗುತ್ತದೆ. ಡಿಬಿಟಿ ವ್ಯವಸ್ಥೆಗೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೆ ಪೂರಕವಾಗಿ ವ್ಯವಸ್ಥೆ ತಂದು ತಿಳಿವಳಿಕೆ ನೀಡಬೇಕಾಗಿದೆ. ಆದ್ದರಿಂದ ತಾತ್ಕಲಿಕವಾಗಿ ಡಿಬಿಟಿ ವ್ಯವಸ್ಥೆ ಸ್ಥಗಿತಗೊಳಿಸಬೇಕು. ಅದರ ಬದಲಿಗೆ ಸ್ವಯಂ ದೃಢೀಕರಣ ಆಧಾರಿತ ತಸ್ತಿಕ ಹಣ ಪಾವತಿ ವ್ಯವಸ್ಥೆ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಾದ ಒಪ್ಪಲು ಸಾಧ್ಯವಿಲ್ಲ. ಆರ್ಥಿಕ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವ ಉದ್ದೇಶದೊಂದಿಗೆ ಡಿಬಿಟಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಸೋರಿಕೆ ತಡೆದು ಪಾರದರ್ಶಕತೆ ತರುವುದು ಡಿಬಿಟಿ ವ್ಯವಸ್ಥೆಯ ಮುಖ್ಯ ಗುರಿಯಾಗಿದೆ. ಡಿಬಿಟಿ ವ್ಯವಸ್ಥೆಯಿಂದ ಅರ್ಜಿದಾರರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಬರಲಾರದು. ತಾಂತ್ರಿಕ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳ ನೆರವು ಪಡೆದುಕೊಳ್ಳಬಹುದು. ಹಾಗಾಗಿ, ಈ ಅರ್ಜಿ ಆಧರಿಸಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡುವುದಿಲ ಎಂದು ಹೇಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net