

David Warner: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ, ಡ್ಯಾಶಿಂಗ್ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, ಇದೀಗ ಕ್ರಿಕೆಟ್ ಜತೆ ಜತೆಗೆ ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟಿದ್ದಾರೆ. ಭಾರತೀಯ ಸಿನಿಮಾಗಳನ್ನು ವೀಕ್ಷಿಸುವ ಹವ್ಯಾಸ ಹೊಂದಿದ್ದ ವಾರ್ನರ್, ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಪುಷ್ಪರಾಜ್ ಪಾತ್ರಕ್ಕೆ ದೊಡ್ಡ ಅಭಿಮಾನಿಯಾಗಿದ್ದಾರೆ. ಐಪಿಎಲ್ ಪಂದ್ಯಗಳಲ್ಲಿ ಆಗಾಗ್ಗೆ ಅಲ್ಲು ಅರ್ಜುನ್ರನ್ನು ಅನುಕರಿಸುವ ಮೂಲಕ ಭಾರತೀಯ ಅಭಿಮಾನಿಗಳನ್ನು ರಂಜಿಸುವ ಡೇವಿಡ್, ಕಡೆಗೂ ಟಾಲಿವುಡ್ಗೆ ಲಗ್ಗೆಯಿಟ್ಟಿರುವುದು ಸದ್ಯ ಚಿತ್ರಪ್ರೇಮಿಗಳ ಕುತೂಹಲ ಕೆರಳಿಸಿದೆ.
ಬಹುತೇಕರು ಅಲ್ಲು ಅರ್ಜುನ್ ಅವರ ಮುಂಬರುವ ಯಾವುದಾದರೂ ಚಿತ್ರದಲ್ಲಿ ಡೇವಿಡ್ ವಾರ್ನರ್ ನಟಿಸಬಹುದು. ಪ್ರಮುಖ ಪಾತ್ರದಲ್ಲಿ ಅಲ್ಲದೇ ಹೋದರೂ ಅತಿಥಿ ಪಾತ್ರದಲ್ಲಿಯಾದರೂ ಮಿಂಚಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಬದಲಿಗೆ ಅದೇ ಚಿತ್ರರಂಗದ ಸ್ಟಾರ್ ಹೀರೋ ನಿತಿನ್, ನಟಿ ಶ್ರೀಲೀಲಾ ಅಭಿನಯದ ಕಾಮಿಡಿ ಚಿತ್ರ 'ರಾಬಿನ್‌ಹುಡ್'ನಲ್ಲಿ ಡೇವಿಡ್ ವಾರ್ನರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಇದೀಗ ಅಧಿಕೃತವಾಗಿದ್ದು, ಡೇವಿಡ್ ಅವರ ಪೋಸ್ಟರ್ ಅನಾವರಣಗೊಂಡಿದೆ.
ಜಾಗತಿಕ ಮಟ್ಟದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಡೇವಿಡ್ ವಾರ್ನರ್, ಟಿಕ್‌ಟಾಕ್, ಇನ್ಸ್ಟಾಗ್ರಾಮ್ ವಿಡಿಯೋ, ರೀಲ್‌ಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ರಾಬಿನ್‌ಹುಡ್ ಚಿತ್ರದ ಮೂಲಕ ಭಾರತೀಯ ಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿರುವ ವಾರ್ನರ್, ತೆಲುಗು ಅಭಿಮಾನಿಗಳ ಹೃದಯ ಗೆಲ್ಲಲು ಎದುರುನೋಡುತ್ತಿದ್ದಾರೆ. ಈ ಚಿತ್ರ ಇದೇ ಮಾರ್ಚ್ 28ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ,(ಏಜೆನ್ಸೀಸ್).