

ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬೆಸ್ಟ್ ಬ್ಯಾಟರ್ ಎಂದೇ ಹೆಸರುವಾಸಿಯಾಗಿರುವ ಡೇವಿಡ್ ವಾರ್ನರ್, ಮೈದಾನದಲ್ಲಿ ತಮ್ಮ ಬ್ಯಾಟಿಂಗ್ ವೈಖರಿ ಹಾಗೂ ಡ್ಯಾನ್ಸ್, ಹಾಸ್ಯಗಳಿಂದಲೇ ಸ್ಟೇಡಿಯಂನಲ್ಲಿ ಕುಳಿತ ಅಭಿಮಾನಿಗಳನ್ನು ಮನರಂಜಿಸುತ್ತಾರೆ. ಕೇವಲ ಕ್ರೀಡಾಸ್ಫೂರ್ತಿ ಮಾತ್ರ ಮೆರೆಯದ ವಾರ್ನರ್, ಗ್ರೌಂಡ್ನಲ್ಲಿ ತಮ್ಮೊಂದಿಗೆ ಆಡುವ ಸಹ ಆಟಗಾರರನ್ನು ಹುರಿದುಂಬಿಸಿ, ಪ್ರೀತಿಯಿಂದ ಗೌರವಿಸಿ ಮಾತನಾಡುತ್ತಾರೆ. ವಿಶೇಷ ಎಂದರೆ ಕ್ರಿಕೆಟ್ ಹೊರತುಪಡಿಸಿ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಸಿನಿಮಾಗಳನ್ನು ಹೆಚ್ಚು ಅನುಸರಿಸುವ ಡೇವಿಡ್, ಪ್ರತ್ಯೇಕವಾಗಿ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಕಂಡರೆ ವಿಶೇಷ ಪ್ರೀತಿ, ಅಭಿಮಾನ ಹೊಂದಿದ್ದಾರೆ.
ಏಕದಿನ, ಟಿ20 ಕ್ರಿಕೆಟ್ ಫಾರ್ಮೆಟ್ನಲ್ಲಿ ವಿಶೇಷ ಬ್ಯಾಟಿಂಗ್ ಶೈಲಿಯಿಂದಲೇ ಎಲ್ಲರ ಗಮನಸೆಳೆಯುವ ವಾರ್ನರ್, 2021ರಲ್ಲಿ ಬಿಡುಗಡೆಗೊಂಡ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಚಿತ್ರಕ್ಕೆ ಫಿದಾ ಆಗಿದ್ದು, ಅದರಲ್ಲಿನ ಸಿಗ್ನೇಚರ್ ಸ್ಟೆಪ್ ಅನ್ನು ಮೈದಾನದಲ್ಲಿ ಆಗಾಗ್ಗೆ ಅನುಕರಣೆ ಮಾಡಿರುವುದನ್ನು ನಾವೆಲ್ಲಾ ನೋಡಿದ್ದೇವೆ. 'ಪುಷ್ಪ ಬಗ್ಗದೇ ಇಲ್ಲ' ಎಂಬ ಡೈಲಾಗ್ ಅನ್ನು ಮೆಚ್ಚಿಕೊಂಡಿರುವ ಡೇವಿಡ್, ಈ ಡೈಲಾಗ್ ಮತ್ತು ಹಾಡಿನ ಡ್ಯಾನ್ಸ್ ಸ್ಟೆಪ್ಸ್ ಅನ್ನು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಮಾಡಿದ್ದ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನು ಗಮನಿಸಿದ ನಟ ಅಲ್ಲು ಅರ್ಜುನ್, ಈ ಹಿಂದೆ 'ಪುಷ್ಪ 2' ಚಿತ್ರದ ಹಾಡಿಗೆ ಅವರಿಂದ ಡ್ಯಾನ್ಸ್ ಮಾಡಿಸ್ತೀನಿ ಎಂದಿದ್ದರು. ಅದ್ಯಾಕೋ ಈ ಮಾತು ನಿಜವಾಗಿದೆ ಎಂಬ ಅನುಮಾನಗಳು ಇದೀಗ ಸಿನಿಪ್ರಿಯರಲ್ಲಿ ಕಾಡಲಾರಂಭಿಸಿದೆ. ಅದಕ್ಕೆ ಕಾರಣ ಡೇವಿಡ್ ವಾರ್ನರ್ ಅವರ ಸಿನಿ ಲುಕ್ ಫೋಟೋಗಳು.
ಯಾವುದೋ ಚಿತ್ರೀಕರಣದಲ್ಲಿ ವಾರ್ನರ್ ಭಾಗಿಯಾಗಿರುವ ದೃಶ್ಯಗಳು ನಿನ್ನೆಯಿಂದ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇದು ಸಿನಿಪ್ರಿಯರಲ್ಲಿ ಗೊಂದಲ ಮೂಡಿಸಿದ್ದು, ಪ್ರಾಯಶಃ ಇದು 'ಪುಷ್ಪ 2' ಚಿತ್ರದ ಚಿತ್ರೀಕರಣವೇ ಇರಬಹುದು ಎನ್ನುವಂತೆ ಮಾಡಿದೆ. ಅಲ್ಲು ಅರ್ಜುನ್ ಸಿನಿಮಾದಲ್ಲಿ ಕಡೆಗೂ ವಾರ್ನರ್ ಎಂಟ್ರಿ ಕೊಟ್ಟಿರುವುದು ಖಚಿತ ಎನಿಸುತ್ತದೆ ಎಂಬ ಮಾತುಗಳು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಡೇವಿಡ್ ಸಿನಿಮಾ ಕಡೆ ಮುಖಮಾಡಿರುವುದು ಪಕ್ಕಾ ಎಂದೇ ಅನೇಕರು ಭಾವಿಸಿದ್ದಾರೆ. ವೈರಲ್ ಫೋಟೋದಲ್ಲಿ ವಾರ್ನರ್, ಗನ್ ಹಿಡಿದು ಸಖತ್ ಸ್ಟೈಲಿಶ್ ಲುಕ್ನಲ್ಲಿ ನಡೆದುಕೊಂಡು ಬರುತ್ತಿರುವುದು ಕಂಡುಬಂದಿದೆ.
ನೆಟ್ಟಿಗರು 'ಪುಷ್ಪ 2' ಚಿತ್ರದಲ್ಲಿ ಡೇವಿಡ್ ಅತಿಥಿ ಪಾತ್ರದಲ್ಲಿ ನಟಿಸಿರಬಹುದು ಎಂಬ ಊಹೆಗಳನ್ನು ವ್ಯಕ್ತಪಡಿಸಿದ್ದು, ಅಧಿಕೃತ ಮಾಹಿತಿ ಏನು ಎಂಬುದು ಯಾರಿಗೂ ತಿಳಿದಿಲ್ಲ. ವೈರಲ್ ಫೋಟೋಗಳ ಬಗ್ಗೆ ಅಲ್ಲು ಅರ್ಜುನ್ ನಟನೆಯ ಚಿತ್ರತಂಡದಿಂದಲೂ ಯಾವುದೇ ಮಾಹಿತಿ ಕೂಡ ಘೋಷಣೆಯಾಗಿಲ್ಲ. ಇದು ನಿಜವೇ? ಅಸಲಿಗೆ ಪುಷ್ಪ 2 ಸಿನಿಮಾದಲ್ಲಿ ವಾರ್ನರ್ ಇಲ್ಲ ಎಂಬುದಾದರೆ ಈ ಫೋಟೋದಲ್ಲಿರುವ ಶೂಟಿಂಗ್ ಯಾವ ಚಿತ್ರದ್ದು ಎಂಬ ಗೊಂದಲವೂ ಇದೀಗ ಸಿನಿಪ್ರಿಯರಲ್ಲಿ ಕಾಡುತ್ತಿದೆ,(ಏಜೆನ್ಸೀಸ್).