

ದಾವಣಗೆರೆ: ನಗರದಲ್ಲಿ ಗುರುವಾರ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ. 4 ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ತೀವ್ರಗೊಳಿಸಲಾಗಿದೆ. ಸಿಸಿ ಕ್ಯಾಮರಾ, ಮೊಬೈಲ್ ದೃಶ್ಯ ಗಳನ್ನು ಪರಿಶೀಲಿಸಿ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, 18 ಕೆ.ಎಸ್.ಆರ್.ಪಿ. ತುಕಡಿ, ಸಾವಿರ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಘಟನಾ ಸ್ಥಳ ಪರಿಶೀಲನೆ ಬಳಿಕ ಎಡಿಜಿಪಿ (ಕಾನೂನು, ಸುವ್ಯವಸ್ಥೆ) ಹಿತೇಂದ್ರ ಕುಮಾರ್ ಮಾತನಾಡಿ, ಇದು ಪೂರ್ವಯೋಜಿತ ಕೃತ್ಯ ಎನಿಸುತ್ತಿಲ್ಲ, ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಘಟನೆ ನಡೆದಂತಿದೆ. ಕಲ್ಲು ತೂರಾಟದಲ್ಲಿ ಒಬ್ಬರು ಸಿಪಿಐ ಮತ್ತು ಒಬ್ಬ ಕಾನ್ಸ್ಟೇಬಲ್ಗೆ ಗಾಯಗಳಾಗಿವೆ. ಒಬ್ಬ ಧಾರ್ವಿುಕ ಮುಖಂಡನಿಗೂ ಗಾಯವಾಗಿರುವ ಬಗ್ಗೆ ದೂರು ದಾಖಲಾಗಿದೆ. ಲಾಠಿ ಪ್ರಹಾರ ಮಾಡಿ ಉದ್ರಿಕ್ತ ಗುಂಪನ್ನು ಚದುರಿಸಿದ್ದಾರೆ ಎಂದು ತಿಳಿಸಿದರು.
ತಡರಾತ್ರಿ ಕಾರ್ಯಾಚರಣೆ: ಗುರುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮನೆ ಮನೆಗೆ ನುಗ್ಗಿ ಗಲಭೆಕೋರರನ್ನು ಬಂಧಿಸಿದರು. ನೆರೆಯ ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕೆಲವು ಮನೆಗಳ ಗಾಜು ಒಡೆದಿವೆ. ಎರಡು ಕಾರುಗಳ ಗಾಜು ಪುಡಿಯಾಗಿವೆ.
ಡಿವೈಎಸ್ಪಿ ಸಮಯಪ್ರಜ್ಞೆ: ಕಲ್ಲು ತೂರಾಟ ನಡೆದ ಸ್ಥಳಕ್ಕೆ ತೆರಳುವ ವೇಳೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಹೋಟೆಲೊಂದರ ಮುಂದಿದ್ದ ಬೋರ್ಡನ್ನೇ ಕೈಯಲ್ಲಿ ಹಿಡಿದು ಹೊರಟಿದ್ದು ಸಮಯಪ್ರಜ್ಞೆಗೆ ಸಾಕ್ಷಿಯಾಗಿತ್ತು. ‘ಕಲ್ಲು ತೂರಾಟ ನಡೆಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಮುಂದೆ ಹೋದೆ. ಕಲ್ಲುಗಳು ಬೀಳುತ್ತಿದ್ದವು. ಆಗ ಕೈಯಲ್ಲಿದ್ದ ಬೋರ್ಡ್ ಉದ್ರಿಕ್ತ ಗುಂಪನ್ನು ಚದುರಿಸಲು ಅನುಕೂಲ ವಾಯಿತು’ ಎಂದು ಮಲ್ಲೇಶ ದೊಡ್ಡಮನಿ ತಿಳಿಸಿದರು.
ದಾವಣಗೆರೆಯಲ್ಲಿ ಕಲ್ಲು ತೂರಾಟ, ನಾಗಮಂಗಲದಲ್ಲಿ ಗಲಭೆ ನಡೆದಿದೆ. ಇಲ್ಲಿ ಪೊಲೀಸರ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಿದ್ದು, ನಾಗಮಂಗಲ ಪ್ರಕರಣ ಸಂಬಂಧ ಡಿವೈಎಸ್ಪಿ ಅಮಾನತು ಮಾಡಲಾಗಿದೆ. ಕೋಮುಗಲಭೆಗಳಿಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ. | ಸಿದ್ದರಾಮಯ್ಯ, ಸಿಎಂ