

ರಮೇಶ ಜಹಗೀರದಾರ್ ದಾವಣಗೆರೆ ವೃತ್ತಿ ರಂಹೊಂದಿರುವುದಾಗಿಗಭೂಮಿಯ ವೈಭವವನ್ನು ಮರುಸೃಷ್ಟಿ ಮಾಡುವ ಆಶಯದ ವಸ್ತು ಸಂಗ್ರಹಾಲಯವನ್ನು ಕೊಂಡಜ್ಜಿಯ ಪರಿಸರದಲ್ಲಿ ಸ್ಥಾಪಿಸುವ ಕನಸು ಹೊಂದಿರುವುದಾಗಿ ವೃತ್ತಿ ರಂಗಭೂಮಿ ರಂಗಾಯಣದ ನೂತನ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು. ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ, ರಂಗಾಯಣವನ್ನು ಕಟ್ಟಲು ತಾವು ಹಾಕಿಕೊಂಡಿರುವ ಯೋಜನೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ವೃತ್ತಿ ರಂಗಭೂಮಿಗೆ ಅಭಿಜಾತ ಪರಂಪರೆಯಿದೆ. 1874 ರಲ್ಲಿದ್ದ ಸಕ್ರಿ ಬಾಳಾಚಾರ್ ಅವರ ನಾಟಕ ಕಂಪನಿಯಿಂದ ಆರಂಭಿಸಿ ಇಲ್ಲಿಯ ವರೆಗಿನ 150 ವರ್ಷಗಳ ಇತಿಹಾಸವನ್ನು ಒಂದು ಎಕರೆಯಷ್ಟು ಜಾಗದಲ್ಲಿ ಮರುಸೃಷ್ಟಿ ಮಾಡುವ ಚಿಂತನೆಯಿದೆ ಎಂದು ತಿಳಿಸಿದರು. ರಂಗಾಯಣಕ್ಕಾಗಿ ಕೊಂಡಜ್ಜಿಯಲ್ಲಿ ನೀಡಿರುವ 10 ಎಕರೆ ಪ್ರದೇಶವನ್ನು ರಂಗ ಸಂಸ್ಕೃತಿಯ ಕೇಂದ್ರವನ್ನಾಗಿ ಕಟ್ಟುವ ಆಲೋಚನೆಯಿದೆ. ಮುಂಬರುವ ದಿನಗಳಲ್ಲಿ ಅಲ್ಲಿ ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ, ರಂಗಸಜ್ಜಿಕೆ ಸೇರಿ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡುವ ಮೂಲಕ ಶ್ರೀಮಂತ ಪರಂಪರೆಯ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದರು. ಮೈಸೂರು ರಂಗಾಯಣ ಸೇರಿ ರಾಜ್ಯದ ಇತರ ರಂಗಾಯಣಗಳಿಗೆ ಮಾದರಿ ಇದೆ. ಆದರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಅಂಥ ಯಾವುದೇ ಮಾದರಿ ಇಲ್ಲ, ಹೊಸದಾಗಿ ಅದನ್ನು ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. (ಬಾಕ್ಸ್) ರೆಪರ್ಟರಿಗೆ ಕಮ್ಮಿ ಇಲ್ಲದ ಕಂಪನಿಗಳು ವೃತ್ತಿ ನಾಟಕ ಕಂಪನಿಗಳು ಯಾವುದೇ ರೆಪರ್ಟರಿಗೂ ಕಡಿಮೆ ಇಲ್ಲದಂತೆ ರಂಗ ಚಟುವಟಿಕೆಗಳನ್ನು ನಡೆಸುತ್ತಿದ್ದವು. ವೃತ್ತಿ ರಂಗಭೂಮಿಗೆ ಅಭಿನಯ, ಸಂಗೀತ, ರಂಗ ಸಜ್ಜಿಕೆಯ ಪರಂಪರೆಯಿದೆ. ಗುಬ್ಬಿ ವೀರಣ್ಣ ಅವರ ಕಂಪನಿಯು ಕ್ಯಾಂಪ್ ಮಾಡಬೇಕೆಂದರೆ 3 ವ್ಯಾಗನ್‌ಗಳಲ್ಲಿ ಪರಿಕರಗಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಕುದುರೆ, ಜಿಂಕೆ, ಪಾರಿವಾಳಗಳೂ ಬರುತ್ತಿದ್ದವು. ಸುಳ್ಳದ ದೇಸಾಯಿ ಅವರ ಕಂಪನಿಯಲ್ಲಿ ಆನೆಯನ್ನೇ ತರುತ್ತಿದ್ದರು. ಆನೆಯ ಆಹಾರಕ್ಕಾಗಿ 3 ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದರು. ಏಣಗಿ ಬಾಳಪ್ಪ ಅವರಂಥ ಮೇರು ಕಲಾವಿದರು ತಮ್ಮ ಅಭಿನಯ ಕಲೆಯಿಂದ ಜನ ಮಾನಸದಲ್ಲಿ ಅಚ್ಚೊತ್ತಿದ್ದರು ಎಂದು ತಿಳಿಸಿದರು. ದಾವಣಗೆರೆ ವೃತ್ತಿ ರಂಗಭೂಮಿಯ ತವರು. 100 ವೃತ್ತಿ ನಾಟಕ ಕಂಪನಿಗಳು ಈ ಊರಿನಲ್ಲಿ ಕಲೆಯನ್ನು ಪ್ರದರ್ಶಿಸಿವೆ. ಇಲ್ಲಿ ಬಂದ ಕಂಪನಿಗಳಿಗೆ ನಷ್ಟವಾದ ಉದಾಹರಣೆ ಇಲ್ಲ. ಏಕ ಕಾಲದಲ್ಲಿ 4 ತಂಡಗಳು ಇಲ್ಲಿ ಕ್ಯಾಂಪ್ ಮಾಡುತ್ತಿದ್ದವು. ವರ್ಷಗಟ್ಟಲೆ ಬಿಡಾರ ಹೂಡಿದ ಉದಾಹರಣೆಯೂ ಇದೆ ಎಂದು ತಿಳಿಸಿದರು. (ಬಾಕ್ಸ್) ಮೂಲಸೌಲಭ್ಯಕ್ಕೆ ಆದ್ಯತೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಮೂಲಸೌಲಭ್ಯ ಕಲ್ಪಿಸುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ. ಇತರ ರೆಪರ್ಟರಿಗಳಿಗೆ ಸುಂದರ ಕ್ಯಾಂಪಸ್ ಅಭಿವೃದ್ಧಿಯಾಗಿವೆ. ಇಲ್ಲಿ ಶೂನ್ಯದಿಂದ ಆರಂಭಿಸಬೇಕಿದೆ. ಜಿಲ್ಲಾ ರಂಗ ಮಂದಿರ ಕಟ್ಟಡವನ್ನು ಮೊದಲು ಪೂರ್ಣಗೊಳಿಸಬೇಕಿದೆ. ಜಿಲ್ಲಾಧಿಕಾರಿ ಅವರು ಈ ವಿಷಯದಲ್ಲಿ ಆಸಕ್ತಿ ತೋರಿದ್ದಾರೆ. ಸ್ಮಾರ್ಟ್‌ಸಿಟಿಯಿಂದ ಒಂದಿಷ್ಟು ಅನುದಾನ ಬಿಡುಗಡೆಯಾಗಲಿದೆ. ಸರ್ಕಾರದಿಂದಲೂ ಹಣ ತಂದು ಯೋಜನೆಯನ್ನು ಪೂರ್ಣಗೊಳಿಸಬೇಕಿದೆ ಎಂದು ತಿಳಿಸಿದರು. ... (ಬಾಕ್ಸ್) ಜಿಲ್ಲಾವಾರು ತರಬೇತಿ ಶಿಬಿರ ಹಳ್ಳಿಗಳಲ್ಲಿ ನಾಟಕಗಳನ್ನು ಮಾಡುವವರಿಗೆ ಅಭಿನಯ, ರಂಗ ಶಿಸ್ತು ಸೇರಿ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲು ಜಿಲ್ಲೆಗೊಂದು ಶಿಬಿರ ಮಾಡುವ ಚಿಂತನೆಯಿದೆ. ಆರಂಭದಲ್ಲಿ ರಾಜ್ಯದ 4 ವಿಭಾಗಗಳಲ್ಲಿ ಈ ಪ್ರಯತ್ನವನ್ನು ಮಾಡಲಾಗುವುದು ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಜನರು ಕಂಪನಿ ಶೈಲಿಯಲ್ಲಿ ನಾಟಕಗಳನ್ನು ಆಡುತ್ತಾರೆ. ಒಂದೊಂದು ನಾಟಕಕ್ಕೂ ಅಂದಾಜು 5-6 ಲಕ್ಷ ರೂ. ಖರ್ಚು ಮಾಡುತ್ತಾರೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ರಿಂದ 4 ಎಂದು ಪರಿಗಣಿಸಿದರೂ ಒಂದು ವರ್ಷದಲ್ಲಿ 15 ಸಾವಿರ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಒಟ್ಟಾರೆ 75 ಕೋಟಿ ರೂ.ಗಳಷ್ಟು ಹಣವನ್ನು ಈ ಉದ್ದೇಶಕ್ಕಾಗಿ ತೊಡಗಿಸಲಾಗುತ್ತದೆ ಎಂದು ತಿಳಿಸಿದರು. ನಮ್ಮ ನಡುವೆ ಇರುವ ಬೆರಳೆಣಿಕೆಯಷ್ಟು ಹಿರಿಯ ಕಲಾವಿದರನ್ನು ಕರೆಸಿ ರಂಗ ಗೀತೆಗಳ ಕಾರ್ಯಾಗಾರ ಮಾಡುವ ಉದ್ದೇಶವಿದೆ. ಪ್ರತಿ ತಿಂಗಳು ಒಂದು ನಾಟಕದ ಪ್ರದರ್ಶನ ಏರ್ಪಡಿಸುವುದು, ಜತೆಗೆ ರಂಗ ಕಲಾವಿದರನ್ನು ಕುರಿತು ಮಾತನಾಡುವ ಕಾರ್ಯಕ್ರಮ ಮಾಡುವ ಆಲೋಚನೆಯಿದೆ ಎಂದರು. ಪುಟ್ಟಣ್ಣಯ್ಯ ಅವರಂಥ ಹಿರಿಯ ರಂಗ ಚೇತನಗಳ ಸಾಧನೆಯ ಬಗ್ಗೆ ದಾಖಲೀಕರಣ ಮಾಡುವ ಮೂಲಕ ಮುಂದಿನ ಪೀಳಿಗೆಯವರು ಅದರಿಂದ ಸ್ಫೂರ್ತಿ ಪಡೆಯವಂತೆ ಮಾಡಬೇಕಿದೆ ಎಂದು ತಿಳಿಸಿದರು. ... * ರಾಷ್ಟ್ರೀಯ ನಾಟಕೋತ್ಸವ ಆಯೋಜನೆ * ಕಾಲೇಜುಗಳಲ್ಲಿ ಉಪನ್ಯಾಸ * ಕಲಾವಿದರ ಮಕ್ಕಳಿಗೆ ಬೇಕಿದೆ ತರಬೇತಿ * ಅಲ್ಪಾವಧಿ, ದೀರ್ಘಾವಧಿ ಯೋಜನೆಗಳು