

ದಾವಣಗೆರೆ: ಕುರುಬ ಸಮಾಜ ದೇಗುಲಗಳ ಜತೆಗೆ ವಿದ್ಯಾಲಯ, ವಿದ್ಯಾರ್ಥಿ ನಿಲಯಗಳನ್ನು ಕಟ್ಟಲು ಹೆಚ್ಚು ಆದ್ಯತೆ ನೀಡಬೇಕು. ಭಕ್ತಿ-ಜ್ಞಾನ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಕುರುಬರಲ್ಲದೆ ಎಲ್ಲ ಹಿಂದುಳಿದ ಸಮಾಜಗಳೂ ಜ್ಞಾನ, ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದರೆ ಮಕ್ಕಳ ಜತೆಗೆ ಸಮಾಜದ ಬೆಳವಣಿಗೆ ಆಗಲಿದೆ ಎಂದರು.
ಐಎಎಸ್, ಕೆಎಎಸ್, ಐಪಿಎಸ್ ಓದುವ ಕುರುಬ ಸಮಾಜದ ಮಕ್ಕಳಿಗೆ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ನಮ್ಮ ಮನವಿಗೆ ಸ್ಪಂದಿಸಿದ ವಸತಿ ಸಚಿವ ವಿ.ಸೋಮಣ್ಣ ಸರ್ಕಾರದಿಂದ ವಸತಿ ನಿಲಯಕ್ಕೆ 8 ಕೋಟಿ ರೂ. ಮಂಜೂರು ಮಾಡಿದ್ದು, 4 ಕೋಟಿ ರೂ. ನಮ್ಮ ಖಾತೆಗೆ ಜಮೆಯಾಗಿದೆ. ಮುಂದಿನ ತಿಂಗಳಲ್ಲಿ ಕಟ್ಟಡ ಕಾಮಗಾರಿ ಶುರುವಾಗಲಿದೆ ಎಂದರು.
ಮೈಲಾರದ ಶಾಖಾ ಮಠದಲ್ಲಿ ವಿದ್ಯಾರ್ಜನೆಗೆ ಅನುಕೂಲವಾಗುವ ಕಟ್ಟಡ ಉದ್ಘಾಟನೆ ಫೆ.4ರಂದು ನಡೆಯಲಿದ್ದು, ಸಿಎಂ ಬೊಮ್ಮಾಯಿ ಆಗಮಿಸುವರು ಎಂದ ಸ್ವಾಮೀಜಿ, ‘ನೂರು ದಿನ- ಸಾವಿರ ಹಳ್ಳಿ’ ಹೆಸರಿನಲ್ಲಿ ತಾವು ಯಾತ್ರೆ ಆರಂಭಿಸಿದ್ದು, ಇದುವರೆಗೆ 350 ಗ್ರಾಮಗಳಿಗೆ ತೆರಳಿದ್ದೇವೆ. ಮುಂದಿನ ದಿನಗಳಲ್ಲಿ ತಮ್ಮ ಗ್ರಾಮಕ್ಕೆ ಬಂದಾಗ ಸ್ವಾಗತ ನೀಡಿ ಎಂದು ಮನವಿ ಮಾಡಿದರು.
ಹಾವು, ನಂದಿ, ಇಲಿ, ಕಾಗೆ ಮೊದಲಾದವು ದೇವರ ಸಂಗ ಕಟ್ಟಿಕೊಂಡ ಕಾರಣಕ್ಕೆ ಮಹತ್ವ ಪಡೆದಿವೆ. ಕನಕದಾಸರು ಹೇಳಿದಂತೆ ಸಜ್ಜನರ ಸಂಗವೇ ನಿಜವಾದ ಧರ್ಮ. ಹಿರಿಯರನ್ನು ಗೌರವಿಸದವರು ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಿದರೆ ಫಲವಿಲ್ಲ. ಕನಕರು ಹೇಳಿದಂತೆ ಅನ್ನದಾನ, ಪರೋಪಕಾರದಂಥ ಸ್ನಾನ ಮಾಡಬೇಕು ಎಂದರು.
ಇಂದಿನ ಪ್ರಜಾಪ್ರಭುತ್ವದಲ್ಲಿ ಸಿರಿವಂತರು ಮತ್ತವರ ದೌಲತ್ತು ಮುಖ್ಯವಾಗಬಾರದು. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಜನನಾಯಕರ ಅಗತ್ಯ ಇಂದಿದೆ ಎಂದು ಸೂಕ್ಷ್ಮವಾಗಿ ಹೇಳಿದರು.
ಕುರುಬರು, ನಾಯಕರು, ಭೋವಿ ಮೊದಲಾದವರು ಸೇರಿ ಹಿಂದುಳಿದ ದಲಿತ ಮಠಾಧಿಪತಿಗಳ ಒಕ್ಕೂಟ ರಚಿಸಿಕೊಂಡಿದ್ದು, ಎಲ್ಲಾ ಸ್ವಾಮೀಜಿಗಳೂ ಒಂದಾಗಿದ್ದೇವೆ. ಭಕ್ತರೂ ಒಗ್ಗಟ್ಟಾಗಿರಬೇಕು. ಎಲ್ಲ ಸಮುದಾಯದವರೂ ಕೂಡಿ ಬಾಳಬೇಕು. ಜಾತ್ರೆಗೆ ಎಲ್ಲ ವರ್ಗದ ಸ್ವಾಮೀಜಿಗಳನ್ನು, ಎಲ್ಲ ಸಮುದಾಯದವರೂ ಒಗ್ಗೂಡಿ ಸ್ವಾಗತಿಸುವ ಪರಿಪಾಠ ಬರಬೇಕು ಎಂದು ಆಶಿಸಿದರು.
ಹದಡಿ ಚಂದ್ರಗಿರಿ ಮಠದ ಶ್ರೀ ಮುರಳೀಧರ ಸ್ವಾಮೀಜಿ ಮಾತನಾಡಿ, ಮಾನವ ಜನ್ಮ ದೊಡ್ಡದು. ಅದನ್ನು ಒಳಿತಿಗೆ ಬಳಸಬೇಕು. ಧರ್ಮ ಕಾರ್ಯ, ಕೆರೆ-ಕಟ್ಟೆ ಮೊದಲಾದ ಪುಣ್ಯ ಕಾರ್ಯಗಳಲ್ಲಿ ತೊಡಗಬೇಕು. ಗುರು-ಶರಣರು, ಸಂತರ ದಾರಿಯಲ್ಲಿ ಸಾಗುತ್ತ ಅರಿವಿನ ಜ್ಯೋತಿ ಹಚ್ಚಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಂಪುರದ ಶ್ರೀ ಹಾಲಸ್ವಾಮೀಜಿ, ಚಿತ್ರದುರ್ಗ ಕುಂಬಾರ ಗುಂಡಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ಸುಧಾ ಆಂಜಿನಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಸ್.ಬಸವಂತಪ್ಪ, ಕೆಎಸ್‌ಎಸ್ ಕಾಲೇಜು ಕಾರ್ಯದರ್ಶಿ ಎಚ್‌ಕೆ. ಬಸವರಾಜ್, ಶ್ಯಾಮ್, ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಕೆಡಿಪಿ ಸದಸ್ಯ ಅನಿಲ್‌ಕುಮಾರ್ ನಾಯ್ಕ, ಆಶುಕವಿ ಯುಗಧರ್ಮ ರಾಮಣ್ಣ, ದೇವಸ್ಥಾನ ಸಮಿತಿ ಶಂಕರಮೂರ್ತಿ, ಶಿವಶಂಕರ್, ಕುಬೇರಪ್ಪ, ಟಿ.ಎಚ್.ಆಂಜಿನಪ್ಪ ಮತ್ತಿತರರಿದ್ದರು.
ಸ್ವಾಮೀಜಿಗಳು ಸಂಕುಚಿತತೆ ಬಿತ್ತಬಾರದು ಸ್ವಾಮೀಜಿಗಳು ಜನರಲ್ಲಿ ಸಾಮರಸ್ಯ, ಸಹಬಾಳ್ವೆ ಬಿತ್ತಬೇಕು. ಬದಲಾಗಿ ತಮ್ಮದು ದೊಡ್ಡ ಸಮಾಜ, ತಾವು ದೊಡ್ಡ ಸ್ವಾಮೀಜಿ ಎಂಬ ಸಂಕುಚಿತತೆಯನ್ನು ಬಿತ್ತಬಾರದು. ಜಗತ್ತಿಗೆ ಬೆಳಕು ನೀಡುವ ಸೂರ್ಯ-ಚಂದ್ರ, ದಾಹ ನೀಗಿಸುವ ಜಲಕ್ಕೆ ಕುಲವಿಲ್ಲ. ಕೆಲವರು ಧರ್ಮಗಳ ನಡುವೆ ಬೆಂಕಿ ಹಚ್ಚುವವರಿದ್ದಾರೆ. ಅನ್ಯ ಕೋಮಿನವರ ಜತೆ ಸೇರಬೇಡಿ, ಮಾವಿನಕಾಯಿ ನೀಡಬೇಡಿ ಎನ್ನುವ ಸ್ವಾಮೀಜಿಗಳೂ ಇದ್ದಾರೆ. ನಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ಯಾರಿಗೆ ನೀಡಬೇಕು ಎಂಬುದನ್ನು ಹೇಳಲು ಇವರ‌್ಯಾರು? ಇವರಿಗೆ ಅಂಥಹ ಅಧಿಕಾರ ಕೊಟ್ಟವರು ಯಾರು? ಎಂದು ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.
ಇಂದು ಮೌಲ್ಯರಹಿತ ಜೀವನ ಕಾಣುತ್ತಿದ್ದೇವೆ. ಸ್ವಾಮೀಜಿಗಳ ಧರ್ಮ ಬೋಧನೆ ಪಾಲನೆಯಲ್ಲೂ ಹಿಂದಿದ್ದೇವೆ. ರಾಜಕಾರಣಿಗಳನ್ನು ಅನುಕರಿಸುವ ಕಾಲ ಬಂದಿದೆ. ಮತದಾನ ಕೂಡ ಹಣದ ಚಲಾವಣೆ ಮೇಲೆ ಆಧರಿತವಾಗಿದೆ. ಜನಸೇವೆ ಮಾಡುವವರಿಗೆ ಮನ್ನಣೆ ಸಿಗುತ್ತಿಲ್ಲ. ಕೊಳೇನಹಳ್ಳಿ ಬಿ.ಎಂ.ಸತೀಶ್ ಎಪಿಎಂಸಿ ಮಾಜಿ ಸದಸ್ಯ.